ಮಡಿಕೇರಿ, ಸೆ. ೯: ವೀರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್ ಪೊನ್ನಣ್ಣ ಅವರ ವಿಧಾನಸೌಧದ ನೂತನ ಆಡಳಿತ ಕಚೇರಿ ಉದ್ಘಾಟನೆ ಪೂಜಾ ವಿಧಿವಿಧಾನಗಳೊಂದಿಗೆ ನಡೆಯಿತು.
ವಿಧಾನಸೌಧದ ಎರಡನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ ೨೬೦ ರಲ್ಲಿ ಪೊನ್ನಣ್ಣ ಅವರು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಶಾಸಕರ ಪತ್ನಿ ಕಾಂಚನ್ ಪೊನ್ನಣ್ಣ, ಶಾಸಕರ ಹಿರಿಯ ಸಹೋದರ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ, ಮತ್ತು ಮನೆಯವರು, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಹಿರಿಯ ವಕೀಲರಾದ ಚಂದ್ರಮೌಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಪೊನ್ನಂಪೇಟೆಯ ಮಿದೇರಿರ ನವೀನ್, ವೀರಾಜಪೇಟೆಯ ಪಟ್ಟಡ ರಂಜಿ ಪೂಣಚ್ಚ, ನಾಪೋಕ್ಲುವಿನ ಸೌಕತ್ ಆಲೀ, ಎಲ್ಲಾ ವಲಯದ ಅಧ್ಯಕ್ಷರುಗಳು, ವಿವಿಧ ಘಟಕದ ಅಧ್ಯಕ್ಷರುಗಳು, ಸದಸ್ಯರುಗಳು, ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.