ಸುಂಟಿಕೊಪ್ಪ, ಸೆ. ೮: ಯುವ ಜನಾಂಗದ ಯಶಸ್ವಿ ಬದುಕಿಗೆ ಪೂರಕವಾಗಿ ಉತ್ತಮ ನಾಯಕತ್ವ ಹಾಗೂ ವ್ಯಕ್ತಿತ್ವ ಬೆಳವಣಿಗೆಗೆ ಶ್ರಮಿಸುತ್ತಿರುವ ಜೆಸಿಐ (ಜೂನಿಯರ್ ಛೇಂಬರ್ ಆಫ್ ಇಂಟರ್ ನ್ಯಾಷನಲ್) ಸಂಸ್ಥೆಯು ಭಾರತ ದೇಶದಲ್ಲಿ ಉತ್ತಮ ತರಬೇತಿಗಳನ್ನು ನೀಡುತ್ತಾ ಯುವ ನೇತಾರರ ಸುಭದ್ರ ಭವಿಷ್ಯ ರೂಪಿಸುವ ದಿಸೆಯಲ್ಲಿ ವಿಶ್ವಮಟ್ಟದಲ್ಲಿ ಮೊದಲನೇ ಸ್ಥಾನವನ್ನು ಗಳಿಸಿದೆ ಎಂದು ಜೆಸಿಐ ಸಂಸ್ಥೆಯ ರಾಷ್ಟಿçÃಯ ಅಧ್ಯಕ್ಷ ಭರತ್ ಎನ್ ಆಚಾರ್ಯ ಹೇಳಿದರು.

ಜೆ.ಸಿ.ಐ.ವಲಯ ೧೪ ರ ವತಿಯಿಂದ ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಆತಿಥ್ಯದಲ್ಲಿ ಸುಂಟಿಕೊಪ್ಪ ಹೋಬಳಿಯ ಏಳನೇ ಹೊಸಕೋಟೆ ಗ್ರಾಮದ ಸಬಾಸ್ಟಿನ್ ಸಮುದಾಯ ಸಭಾಂಗಣದಲ್ಲಿ ಅಭಿವೃದ್ಧಿ ಮತ್ತು ಬೆಳವಣಿಗೆ ಕುರಿತಂತೆ ಏರ್ಪಡಿಸಿದ್ದ ಪ್ರಭಾತಾ ಅಭಿವೃದ್ಧಿಯ ಸಮ್ಮೇಳನ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂತಹ ಯುವ ಸಮ್ಮೇಳನಗಳು ಯುವ ನಾಯಕರ ಅಭಿವೃದ್ಧಿ ಹಾಗೂ ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಿವೆ. ಜೆಸಿಐ ಇಂಡಿಯಾ ದೇಶಾದ್ಯಂತ ೨೮ಕ್ಕೂ ಹೆಚ್ಚು ವಲಯಗಳನ್ನು ಹೊಂದಿದ್ದು, ಪ್ರತಿ ವಲಯವು ತನ್ನ ಸದಸ್ಯರ ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ ಹಾಗೂ ವ್ಯವಹಾರದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಇಂತಹ ಸಮ್ಮೇಳನವನ್ನು ಪ್ರತಿವರ್ಷ ಆಯೋಜಿಸುತ್ತಿದೆ ಎಂದರು.

ಜೆಸಿಐ ವಲಯ ೧೪ ರ ವಲಯಾಧ್ಯಕ್ಷ ಪ್ರಜ್ವಲ್ ಎಸ್.ಜೈನ್ ಮಾತನಾಡಿ, ಜೆಸಿಐ ಸಂಸ್ಥೆಯು ಯುವ ಮನಸ್ಸುಗಳ ಕನಸ್ಸನ್ನು ನನಸು ಮಾಡುವುದು ಮತ್ತು ಅವರಲ್ಲಿ ತಮ್ಮ ಬದುಕಿನ ಭವಿಷ್ಯ ರೂಪಿಸಲು ಆತ್ಮವಿಶ್ವಾಸ ಬೆಳೆಸುವ ಕಾರ್ಯದಲ್ಲಿ ತೊಡಗಿದೆ ಎಂದರು.

ಜೆಸಿಐ ಸಂಸ್ಥೆಯ ರಾಷ್ಟಿçÃಯ ಉಪಾಧ್ಯಕ್ಷೆ ಯಶಸ್ವಿನಿ ಮಾತನಾಡಿ, ಯುವ ಜನಾಂಗವು ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಸಮ್ಮೇಳನದ ನಿರ್ದೇಶಕ ಎಚ್.ಆರ್.ಪ್ರಶಾಂತ್ ಮಾತನಾಡಿ, ಯುವಕರು ತಮ್ಮ ಭವಿಷ್ಯದ ಕನಸುಗಳನ್ನು ನನಸು ಮಾಡಲು ಇಂತಹ ಸಮ್ಮೇಳನಗಳು ಸಹಕಾರಿಯಾಗಿವೆ ಎಂದರು.

ಜೆಸಿಐ ಸಂಸ್ಥೆಯ ವಲಯ ಉಪಾಧ್ಯಕ್ಷ ಜಗತ್, ಕಾರ್ಯದರ್ಶಿ ಶೃತಿ ರೋಹಿತ್, ಅತಿಥೇಯ ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಅಧ್ಯಕ್ಷ ಜಯಪ್ರಕಾಶ್, ಕಾರ್ಯದರ್ಶಿ ಎಚ್.ಮಂಜುನಾಥ್, ಕಾರ್ಯಕ್ರಮ ನಿರ್ದೇಶಕಿ ಫೆಲ್ಸಿ ಡೆನಿಸ್, ವಲಯ ಸಂಸ್ಥೆಯ ಮಾಜಿ ಅಧ್ಯಕ್ಷರಾದ ದೇವಿಪ್ರಸಾದ್, ಮಧೋಷ್ ಪೂವಯ್ಯ, ಸಂಸ್ಥೆಯ ವಲಯ ೧೪ ರ ವಿವಿಧ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇದ್ದರು.

ಸೋಮವಾರಪೇಟೆ ಕ್ರಿಯೇಟಿವ್ ಅಕಾಡೆಮಿಯ ವಿದ್ಯಾರ್ಥಿನಿ ಸಾತ್ವಿಕ ಸತೀಶ್ ಪ್ರದರ್ಶಿಸಿದ ಭರತ ನಾಟ್ಯ ಗಮನ ಸೆಳೆಯಿತು. ಜೆಸಿಐನ ಮಾಜಿ ಅಧ್ಯಕ್ಷ ಝಾಯ್ದ್ ಅಹ್ಮದ್ ಕರ್ಯಕ್ರಮ ನಿರ್ವಹಿಸಿದರು. ಜೇಸೀಗಳಾದ ಡೆನಿಸ್ ಡಿ’ಸೋಜ, ಬಿ.ಕೆ.ಸತೀಶ್, ಮನು ಅಚ್ಚಮ್ಮಯ್ಯ ಅತಿಥಿಗಳ ಪರಿಚಯ ಮಾಡಿದರು. ಮೊನಾಲಿ ಡಿ.ಪ್ರಸಾದ್ ಜೇಸಿ ವಾಣಿ ವಾಚಿಸಿದರು.

ಈ ಸಂದರ್ಭ ಜೆಸಿಐ ಸಂಸ್ಥೆಯಲ್ಲಿ ವರ್ಷಪೂರ್ತಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸ್ಥಳೀಯ ಘಟಕಗಳು, ಪದಾಧಿಕಾರಿಗಳು ಹಾಗೂ ಸಮಾಜದ ಯುವ ಸಾಧಕರಿಗೆ ಸಮ್ಮೇಳನದ ವೇದಿಕೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜೆಸಿಐ ಸಮ್ಮೇಳನಕ್ಕೂ ಮುನ್ನ ಏಳನೇ ಹೊಸಕೋಟೆ ಗ್ರಾಮದಲ್ಲಿ ಜೆಸಿಐ ಸಂಸ್ಥೆಯ ರಾಷ್ಟಿçÃಯ ಅಧ್ಯಕ್ಷ ಭರತ್ ಎನ್.ಆಚಾರ್ಯ ಅವರನ್ನು ಅಲಂಕೃತ ವಾಹನದಲ್ಲಿ ಮೆರವಣಿಗೆಯ ಮೂಲಕ ಸಮ್ಮೇಳನದ ಸಭಾಂಗಣಕ್ಕೆ ಕರೆ ತರಲಾಯಿತು. ಇವರೊಂದಿಗೆ ಸಂಸ್ಥೆಯ ರಾಷ್ಟಿçÃಯ ಉಪಾಧ್ಯಕ್ಷ ಯಶಸ್ವಿನಿ, ವಲಯ ಅಧ್ಯಕ್ಷ ಪ್ರಜ್ವಲ್ ಎಸ್ ಜೈನ್, ಸಮ್ಮೇಳನದ ನಿರ್ದೇಶಕ ಎಚ್.ಆರ್. ಪ್ರಶಾಂತ್, ಆತಿಥೇಯ ಸುಂಟಿಕೊಪ್ಪ ಜೆಸಿಐ ಘಟಕದ ಅಧ್ಯಕ್ಷ ಜಯಪ್ರಕಾಶ್ ಮೆರವಣಿಗೆಯ ವಾಹನದಲ್ಲಿ ತೆರಳಿದರು. ಮೆರವಣಿಗೆಯಲ್ಲಿ ಕೇರಳದ ಚೆಂಡೆ ವಾದ್ಯ ಗಮನ ಸೆಳೆಯಿತು.