ಮಡಿಕೇರಿ, ಸೆ. ೭: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕಥೆಗಾರ್ತಿ ಕೊಡಗಿನ ಗೌರಮ್ಮ ಅವರ ಹೆಸರಿನಲ್ಲಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಗೌರಮ್ಮ ದತ್ತಿ ಸಣ್ಣ ಕಥೆ ಸ್ಪರ್ಧೆ ಆಯೋಜಿಸಲಾಗಿದೆ.
ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವುದು, ಸೃಜನಶೀಲ ಬರವಣಿಗೆಯನ್ನು ಉತ್ತೇಜಿಸುವುದು ಹಾಗೂ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಪರಿಚಯ ಮೂಡಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳ ಸಾಹಿತ್ಯಿಕ ಬೆಳವಣಿಗೆಗೆ ಪೂರಕವಾಗುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ಕೊಡಗು ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧೆಯ ಸ್ಥಳದಲ್ಲಿಯೇ ಕಥೆ ರಚಿಸಬೇಕು. ಎ೪ ಅಳತೆಯ ಹಾಳೆಯಲ್ಲಿ ಗರಿಷ್ಠ ಎರಡು ಪುಟ ಮೀರದಂತೆ ಕಥೆ ಬರೆಯಬೇಕು. ಕಥೆ ಬರೆಯಲು ಅಗತ್ಯವಾದ ಹಾಳೆಯನ್ನು ಸ್ಥಳದಲ್ಲಿಯೇ ನೀಡಲಾಗುವುದು. ಕಥೆಯ ವಿಷಯ ಆಯ್ಕೆಗಾಗಿ ನಾಲ್ಕು ವಿಷಯಗಳನ್ನು ನೀಡಲಾಗುವುದು. ಒಂದು ಶಾಲೆಯಿಂದ ಗರಿಷ್ಠ ಐವರು ವಿದ್ಯಾರ್ಥಿಗಳು ಭಾಗವಹಿಸಬಹುದು. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಯು ಶಾಲಾ ಮುಖ್ಯೋಪಾಧ್ಯಾಯರಿಂದ ಸ್ಪರ್ಧೆಯಲ್ಲಿ ಭಾಗವಹಿಸುವ ಕುರಿತು ದೃಢೀಕರಣ ಪತ್ರ ತರಬೇಕು.
ತಾ. ೧೨ ರಂದು ಮಡಿಕೇರಿಯ ಜೂನಿಯರ್ ಕಾಲೇಜಿನಲ್ಲಿ ಸ್ಪರ್ಧೆ ನಡೆಯಲಿದ್ದು, ತಾ. ೧೦ರೊಳಗಾಗಿ ಅರ್ಜಿಯನ್ನು ಅಧ್ಯಕ್ಷರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಎಸ್.ಜಿ.ಆರ್.ವೈ. ಕಟ್ಟಡ, ಅಂಬೇಡ್ಕರ್ ಭವನದ ಬಳಿ, ಸುದರ್ಶನ ವೃತ್ತ, ಮಡಿಕೇರಿಗೆ ತಲುಪಿಸಬೇಕು. ಹೆಚ್ಚಿನ ಮಾಹಿತಿಗೆ ೯೪೪೮೩ ೪೬೨೭೬ ೯೮೮೬೧ ೮೧೬೧೩ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.