ಗೋಣಿಕೊಪ್ಪಲು. ಸೆ .೬: ಬೆಳಿಗ್ಗೆ ಆರು ಗಂಟೆಗೆ ಸರಿಯಾಗಿ ಮ್ಯಾರಥಾನ್ ಆರಂಭ, ಸಣ್ಣ ವಯಸ್ಸಿನವರಿಂದ ಹಿಡಿದು ಹಿರಿಯವರೆಗೂ ನಡೆದ ಕೊಡಗು ಮಾನ್ಸೂನ್ ಹಾಫ್ ಮ್ಯಾರಥಾನ್ ಐದು ಸಾವಿರಕ್ಕೂ ಅಧಿಕ ಓಟಗಾರರÀ ಸಮಾಗಮಕ್ಕೆ ವೇದಿಕೆಯಾಯಿತು.
ವಿವಿಧ ರಾಜ್ಯಗಳಿಂದ ದಿನದ ಮೊದಲೇ ಆಗಮಿಸಿದ್ದ ಕ್ರೀಡಾಪಟುಗಳು ಮುಂಜಾನೆ ೫ ಗಂಟೆಯಾಗುವಷ್ಟರಲ್ಲಿ ಮೈದಾನದಲ್ಲಿ ಜಮಾವಣೆಗೊಂಡಿದ್ದರು. ಆರು ಗಂಟೆಗೆ ಸರಿಯಾಗಿ ಮ್ಯಾರಥಾನ್ ಆರಂಭಗೊAಡಿತು. ನಂತರ ವಿವಿಧ ವಿಭಾಗದಲ್ಲಿ ಅರ್ಧ ಗಂಟೆಯ ಸಮಯದಲ್ಲಿ ಮ್ಯಾರಥಾನ್ ನಡೆದವು.
ಕ್ರೀಡೆ ಹಾಗೂ ಪರಿಸರವನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಹಾಗೂ ಕ್ರೀಡೆಯ ಉತ್ಸಾಹದೊಂದಿಗೆ ಕೊಡಗಿನ ಪ್ರಕೃತಿ ಸೌಂದರ್ಯವನ್ನು ಪರಿಚಯಿಸುವ ಹಾಗೂ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರುವ ಉದ್ದೇಶದಿಂದ ಆಯೋಜಿಸಿದ್ದ ಈ ಮ್ಯಾರಥಾನ್‌ಗೆ ವ್ಯಾಪಕ ಸ್ಪಂದನ ವ್ಯಕ್ತವಾಯಿತು.
ದೇಶದ ವಿವಿಧ ರಾಜ್ಯಗಳಿಂದ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಹಾಗೂ ಪ್ರಕೃತಿ ಪ್ರಿಯರು ಆಗಮಿಸಿದ್ದರು.
ಗೋಣಿಕೊಪ್ಪಲುವಿನ ಕ್ಯಾಲ್ಸ್ ಸ್ಕೂಲ್, ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ವತಿಯಿಂದ ಎನ್‌ಇಬಿ ಸ್ಪೋರ್ಟ್ಸ್ ಎಂಟರ್‌ಟೈನ್‌ಮೆAಟ್, ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಸಹಕಾರದೊಂದಿಗೆ ‘ರನ್ ವಿತ್ ನೇಚರ್’ ಎಂಬ ಘೋಷವಾಕ್ಯದೊಂದಿಗೆ ೫ನೇ ವರ್ಷದ ಕೊಡಗು ಮಾನ್ಸೂನ್ ಹಾಫ್ ಮ್ಯಾರಥಾನ್ ಆಯೋಜಿಸಲಾಗಿತ್ತು.
೨೧ ಕಿ.ಮೀ., ೧೦ ಕಿ.ಮೀ ಹಾಗೂ ೫ ಕಿ.ಮೀ. ಹೀಗೆ ಮೂರು ಹಂತಗಳಲ್ಲಿ ಮ್ಯಾರಥಾನ್ ನಡೆಯಿತು.
೧೮ ವರ್ಷ ಮೇಲ್ಪಟ್ಟವರು ೨೧ ಕಿ.ಮೀ.ನ ಹಾಫ್ ಮ್ಯಾರಥಾನ್, ೧೪ ವರ್ಷ ಮೇಲ್ಪಟ್ಟವರಿಗೆ ೧೦ ಕಿ.ಮೀ., ೬ ರಿಂದ ೧೨ ವರ್ಷದೊಳಗಿನವರಿಗೆ ೫ ಕಿ.ಮೀ. ಓಟ ಆಯೋಜಿಸಲಾಗಿತ್ತು. ಗೋಣಿಕೊಪ್ಪ ಸಮೀಪದ ಕ್ಯಾಲ್ಸ್ ಶಾಲೆಯಿಂದ ಪಾಲಿಬೆಟ್ಟದ ಟಾಟಾ ಕಾಫಿ ಗಾಲ್ಫ್ ಮೈದಾನದ ತನಕ ೨೧ ಕಿ.ಮೀ.ನ ಹಾಫ್ ಮ್ಯಾರಥಾನ್ ನಡೆಯಿತು. ಉಳಿದ ೨ ಹಂತದ ಓಟವೂ ಇದೇ ಮಾರ್ಗದಲ್ಲಿ ನಿಗದಿತ ಕಿ.ಮೀ. ತನಕ ಸಾಗಿತ್ತು. ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ವಿದ್ಯಾರ್ಥಿಗಳಿಗೆ ಈ ಮ್ಯಾರಥಾನ್ ಕ್ರೀಡಾ ಸ್ಪರ್ಧೆಯ ಜೊತೆಗೆ ಕಲಿಕೆಯ ವೇದಿಕೆಯೂ ಆಗಿದೆ. ತಂಡವಾಗಿ ಕಾರ್ಯನಿರ್ವಹಿಸುವುದು, ಯೋಜನೆ ರೂಪಿಸುವುದು, ಜವಾಬ್ದಾರಿ ನಿರ್ವಹಣೆ, ಸಂವಹನ, ಸಮುದಾಯದೊಂದಿಗೆ ಬೆರೆಯುವುದು ಹಾಗೂ ಕಾರ್ಯಕ್ರಮ ನಿರ್ವಹಣೆಯಂತಹ ಕೌಶಲ್ಯಗಳನ್ನು ಅವರು ಪ್ರಾಯೋಗಿಕವಾಗಿ ಕಲಿಯುತ್ತಾರೆ ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಅಂತರರಾಷ್ಟ್ರೀಯ ಮಾಜಿ ಅಥ್ಲೀಟ್ ಅಶ್ವಿನಿ ನಾಚಪ್ಪ ‘ಶಕ್ತಿ’ಯೊಂದಿಗೆ ಅಭಿಪ್ರಾಯ ಹಂಚಿಕೊAಡರು. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕೊಡಗು ಮಾನ್ಸೂನ್ ಹಾಫ್ ಮ್ಯಾರಥಾನ್ ಕೇವಲ ಓಟದ ಕಾರ್ಯಕ್ರಮವಲ್ಲ. ಜನರು ಒಟ್ಟಾಗಿ ಸೇರಿ ಭಾಗವಹಿಸುವ, ಸ್ವಯಂಸೇವಕರಾಗಿ ಸೇವೆ ಸಲ್ಲಿಸುವ ಹಾಗೂ ಕಾರ್ಯಕ್ರಮದ ಜವಾಬ್ದಾರಿಯನ್ನು ತಮ್ಮದಾಗಿಸಿಕೊಳ್ಳುವ ಕ್ರೀಡಾ ಸಮುದಾಯವನ್ನು ನಿರ್ಮಿಸುವುದು ಇದರ ಉದ್ದೇಶ. ಕ್ರೀಡೆ, ಪ್ರೀತಿ ಮತ್ತು ಸಮುದಾಯದ ಮೂಲಕ ಕೊಡಗಿನ ಸೌಂದರ್ಯವನ್ನು ಜನರಿಗೆ ಪರಿಚಯಿಸುವುದು ನಮ್ಮ ಉದ್ದೇಶವಾಗಿತ್ತು.ಇದರಲ್ಲಿ ಯಶಸ್ವಿಯಾಗಿದ್ದೇವೆ ಎಂದು ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ಸಂಸ್ಥಾಪಕಿ ಅಶ್ವಿನಿ ನಾಚಪ್ಪ ತಿಳಿಸಿದರು.
೨೧ ಕಿ.ಮೀ. ವಿಭಾಗದ ವಿಜೇತರಿಗೆ ಪ್ರಥಮ ೩೦ ಸಾವಿರ, ದ್ವಿತೀಯ ೨೦ ಸಾವಿರ, ತೃತೀಯ ೧೫ ಸಾವಿರ, ೧೦ ಕಿ.ಮೀ. ವಿಭಾಗದಲ್ಲಿ ಪ್ರಥಮ ರೂ. ೨೦ ಸಾವಿರ, ದ್ವಿತೀಯ ೧೫ ಸಾವಿರ, ತೃತೀಯ ರೂ. ೧೦ ಸಾವಿರ ನಗದು ಬಹುಮಾನ ನೀಡಲಾಯಿತು. ಜಿಲ್ಲೆಯ ಶಾಲೆಗಳ ತಲಾ ೨೦ ವಿದ್ಯಾರ್ಥಿಗಳಿಗೆ ೫ ಕಿ.ಮೀ. ವಿಭಾಗದಲ್ಲಿ ಉಚಿತ ಪ್ರವೇಶವನ್ನು ಕಲ್ಪಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಚೇರ್ಮನ್ ದತ್ತ ಕರುಂಬಯ್ಯ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.
ಸಚಿವ ಜಾರ್ಜ್ ಚಾಲನೆ
ಮುಂಜಾನೆಯ ವೇಳೆ ಆರಂಭವಾದ ಕೊಡಗು ಮಾನ್ಸೂನ್ ಹಾಫ್ ಮ್ಯಾರಥಾನ್‌ಗೆ ಪ್ರವಾಸೋದ್ಯಮ ಸಚಿವರಾದ ಕೆ.ಜೆ.ಜಾರ್ಜ್ ಹಸಿರು ಬಾವುಟ ತೋರಿಸುವ ಮೂಲಕ ಜಾಲನೆ ನೀಡಿದರು. ಮೊದಲ ಬಾರಿಗೆ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಮ್ಯಾರಥಾನ್‌ಗೆ ಸಹಕಾರ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ಪರ್ಧಿಗಳು ಬಂದು ಸೇರಿರುವುದು ಶ್ಲಾಘನೀಯ ಎಂದರು.
ವೀರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಮಾತನಾಡಿ, ಕ್ರೀಡೆಯ ತವರೂರಾದ ಕೊಡಗಿನಲ್ಲಿ ವಿವಿಧ ಕ್ರೀಡೆಗಳು ನಿರಂತರವಾಗಿ ನಡೆಯುತ್ತಿವೆೆ. ಕ್ಯಾಲ್ಸ್ ವಿದ್ಯಾಸಂಸ್ಥೆಯು ಮ್ಯಾರಥಾನ್ ನಡೆಸಿ, ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿರುವುದರಿಂದ ಕೊಡಗಿನ ಗರಿಮೆ, ಹಿರಿಮೆ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ ಎಂದರು.
ಕ್ಯಾಲ್ಸ್ ವಿದ್ಯಾಸಂಸ್ಥೆಯ ಚೇರ್ಮನ್ ದತ್ತ ಕರುಂಬಯ್ಯ, ಅಶ್ವಿನಿ ನಾಚಪ್ಪ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಸಿ.ಎಸ್.ಅರುಣ್ ಮಾಚಯ್ಯ, ಪ್ರಾಂಶುಪಾಲೆ ಗೌರಮ್ಮ, ಫೆಡರಲ್ ಬ್ಯಾಂಕ್‌ನ ಮುಖ್ಯಸ್ಥರಾದ ರಾಜೀವ್, ಕಾರ್ಯಕ್ರಮದ ಸಂಚಾಲಕ, ನಾಗರಾಜ್ ಅಡಿಗ, ಆಯೋಜಕರಾದ ಎನ್‌ಇಬಿ ನಿರ್ದೇಶಕಿ ರೀತ್ ಅಬ್ರಾಹಂ, ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ನೃತ್ಯ ಪ್ರದರ್ಶನ ಆಯೋಜನೆ ಮಾಡಲಾಗಿತ್ತು.
ಶಿಕ್ಷಕರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಚಿತ್ರ, ವರದಿ : ಹೆಚ್.ಕೆ.ಜಗದೀಶ್.