ವೀರಾಜಪೇಟೆ, ಸೆ. ೬: ತಾಲೂಕು ಕಾನೂನು ಸೇವಾ ಸಮಿತಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಸ್ಥಳೀಯ ಆಡಳಿತದ ಜಂಟಿ ಆಶ್ರಯದಲ್ಲಿ ಕಾನೂನು ಅರಿವು ಹಾಗೂ ಜಾಗೃತಿ ಕಾರ್ಯಕ್ರಮವು ನೆರವೇರಿತು.
ಕಾರ್ಯಕ್ರಮವನ್ನು ಕೊಡಗು-ಮಡಿಕೇರಿಯ ೨ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಗೌ. ನ್ಯಾಯಾಧೀಶರಾದ ನಟರಾಜ್ ಎಸ್. ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ನ್ಯಾಯಾಧೀಶರಾದ ನಟರಾಜ್ ಎಸ್. ಅವರು, ಸಮಾಜದಲ್ಲಿ ಹಿರಿಯ ನಾಗರಿಕರು ಹಾಗೂ ವಿಕಲಚೇತನರು ಕಾನೂನುಬದ್ಧವಾಗಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಮತ್ತು ಸುರಕ್ಷಿತ ಜೀವನ ನಡೆಸಲು ಸೂಕ್ತ ಕಾನೂನು ಅರಿವು ಅತ್ಯಗತ್ಯ. ಪ್ರತಿಯೊಬ್ಬ ನಾಗರಿಕರಿಗೂ ಉಚಿತ ಕಾನೂನು ನೆರವು ಹಾಗೂ ಸರಕಾರದ ಕಲ್ಯಾಣ ಯೋಜನೆಗಳು ಸುಲಭವಾಗಿ ತಲುಪಬೇಕು ಎಂಬುದು ಉಚಿತ ಕಾನೂನು ಸೇವಾ ಸಮಿತಿಯ ಮುಖ್ಯ ಉದ್ದೇಶವಾಗಿದೆ. ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರು ತಮ್ಮ ಸಮಸ್ಯೆಗಳಿಗೆ ಕಾನೂನಿನ ಅಡಿಯಲ್ಲಿ ಪರಿಹಾರ ಪಡೆದುಕೊಳ್ಳಲು ಯಾವುದೇ ಹಿಂಜರಿಕೆಯಿಲ್ಲದೆ ಕಾನೂನು ಸೇವಾ ಸಮಿತಿಯ ನೆರವು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ವೀರಾಜಪೇಟೆ ತಾಲೂಕು ತಹಶೀಲ್ದಾರ್ ಪಿ.ಸಿ. ಪ್ರವೀಣ್ ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ವೀರಾಜಪೇಟೆ ಉಪ ತಹಶೀಲ್ದಾರ್ ಪ್ರದೀಪ್ ಕುಮಾರ್, ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ಎ. ಪೂಣಚ್ಚ, ವೀರಾಜಪೇಟೆ ವಕೀಲರ ಸಂಘದ ಅಧ್ಯಕ್ಷರಾದ ಪೂವಣ್ಣ, ಹಿರಿಯ ನಾಗರಿಕರ ವೇದಿಕೆಯ ಶಂಕರಿ ಪೊನ್ನಪ್ಪ ಹಾಗೂ ಪುರಸಭೆ ವ್ಯವಸ್ಥಾಪಕರಾದ ಸುಜಾತಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ಭಾಗವಾಗಿ ವೀರಾಜಪೇಟೆಯ ವಕೀಲರಾದ ಅನುಪಮಾ ಬಿ.ಕೆ. ಹಾಗೂ ಪ್ರಮೋದ್ ಅವರು ಹಿರಿಯ ನಾಗರಿಕರು ಮತ್ತು ವಿಕಲಚೇತನರ ಕಾನೂನು ಹಕ್ಕುಗಳು, ಕಲ್ಯಾಣ ಯೋಜನೆಗಳು ಹಾಗೂ ಸಬಲೀಕರಣದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮಡಿಕೇರಿಯ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಮಾಹಿತಿ ಸಲಹೆಗಾರರಾದ ನವೀನ್ ಅವರು ಕಾರ್ಯಕ್ರಮದ ನಿರ್ವಹಣೆಗೈದರು.
ಸಾರ್ವಜನಿಕರು, ಹಿರಿಯ ನಾಗರಿಕರು ಹಾಗೂ ಫಲಾನುಭವಿಗಳು ಪಾಲ್ಗೊಂಡು ಮಾಹಿತಿ ಪಡೆದುಕೊಂಡರು.