ಕುಶಾಲನಗರ, ಸೆ. ೬: ಕುಶಾಲನಗರ ದಾರುಲ್ ಉಲೂಂ ಮದ್ರಸ ಮತ್ತು ಹಿಲಾಲ್ ಮಸೀದಿ ಆಶ್ರಯದಲ್ಲಿ ಈದ್ ಮಿಲಾದ್ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಪ್ರವಾದಿಯವರು ಸಮಾನತೆ, ಸಹೋದರತೆ, ಮಾನವೀಯತೆಯ ಬಗ್ಗೆ ಜಾಗೃತಿ ಮೂಡಿಸಿದ್ದರು. ಅದರಂತೆ ಎಲ್ಲರೂ ನಡೆದುಕೊಂಡರೆ ಮಾತ್ರ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ದಾರುಲ್ ಉಲೂಂ ಮದ್ರಸದ ಪ್ರಾಂಶುಪಾಲ ಉನೈಸ್ ಫೈಝಿ, ಪ್ರವಾದಿಯವರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಜವಾಬ್ದಾರಿ ಪ್ರತಿಯೊಬ್ಬ ಮುಸಲ್ಮಾನನ ಮೇಲಿದೆ ಎಂದರು. ಹಿಲಾಲ್ ಮಸೀದಿ ಕಾರ್ಯದರ್ಶಿ ಇ.ಕೆ.ಅಬ್ದುಲ್ ಕರೀಂ, ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕುಶಾಲನಗರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಶಿಧರ್ ಮಾತನಾಡಿ, ಇಸ್ಲಾಂ ಸಹನೆ, ಸಹೋದರತೆಯನ್ನು ಸಾರುತ್ತದೆೆ ಎಂದರು.

ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಜೆ.ಇರ್ಫಾನ್ ಹಾಗೂ ಪುರಸಭೆ ಮಾಜಿ ಸದಸ್ಯ ಶೇಖ್ ಖಲೀಮುಲ್ಲಾ ಮಾತನಾಡಿದರು. ಈದ್ ಮಿಲಾದ್ ಹಿನ್ನಲೆ ದಾರುಲ್ ಉಲೂಂ ಮದ್ರಸದ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ಹಿಲಾಲ್ ಮಸೀದಿಯ ಧರ್ಮ ಗುರುಗಳಾದ ಶಾಫಿ ಫೈಝಿ ಇರ್ಫಾನಿ ಅವರು ಪ್ರಾರ್ಥಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಮಸೀದಿ ಅಧ್ಯಕ್ಷ ಸತ್ತಾರ್ ವಹಿಸಿದ್ದರು. ಸಹ ಕಾರ್ಯದರ್ಶಿ ಹನೀಫ್ ಸ್ವಾಗತಿಸಿದರು.

ಈ ಸಂದರ್ಭ ಹಿಲಾಲ್ ಮಸೀದಿ ಪದಾಧಿಕಾರಿಗಳು, ದಾರುಲ್ ಉಲೂಂ ಮದ್ರಸದ ಉಸ್ತಾದರು, ನುಸ್ರತುಲ್ ಇಸ್ಲಾಂ ಯೂತ್ ಅಸೋಸಿಯೇಷನ್‌ನ ಸದಸ್ಯರು ಹಾಗೂ ಜಮಾಅತ್ ಸದಸ್ಯರು ಇದ್ದರು.

ದಾರುಲ್ ಉಲೂಂ ಮದ್ರಸ ಹಾಗೂ ಹಿಲಾಲ್ ಮಸೀದಿ ವತಿಯಿಂದ ಮೀಲಾದ್ ಜಾಥಾ ನಡೆಸಲಾಯಿತು. ದಾರುಲ್ ಉಲೂಂ ಮದ್ರಸದಿಂದ ಕುಶಾಲನಗರದ ಮುಖ್ಯ ರಸ್ತೆ ಮೂಲಕ ಪ್ರಮುಖ ಬೀದಿಗಳಲ್ಲಿ ಮಿಲಾದ್ ಜಾಥಾ ಸಾಗಿತು. ಮದ್ರಸ ವಿದ್ಯಾರ್ಥಿಗಳು ಕಾರ್ಯಪ್ಪ ವೃತ್ತ ಹಾಗೂ ದಂಡಿನಪೇಟೆ ಸರ್ಕಲ್‌ನಲ್ಲಿ ದಫ್ ಪ್ರದರ್ಶಿಸಿದರು.