ಮಡಿಕೇರಿ, ಸೆ .೫: ಯೋಗ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಮದೆನಾಡಿನ ಯುವ ಯೋಗಸಾಧಕಿ ಸಿಂಚನಾ ಅವರಿಗೆ ಲಭಿಸಿರುವ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವವನ್ನು ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು.

ಮದೆನಾಡಿನ ಬಿಜಿಎಸ್ ಶಾಲೆಯ ೭ನೇ ತರಗತಿ ವಿದ್ಯಾರ್ಥಿನಿಯಾಗಿರುವ ಸಿಂಚನಾ, ಕಳೆದ ಮೂರು ತಿಂಗಳ ಅವಧಿಯಲ್ಲಿ ಯೋಗಾಸನದಲ್ಲಿ ತೋರಿದ ಸಾಧನೆಗಾಗಿ ಎರಡು ಪ್ರತಿಷ್ಠಿತ ದಾಖಲೆ ಗೌರವಗಳಿಗೆ ಪಾತ್ರರಾಗಿದ್ದಾರೆ. ನಗರದ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರು ಪ್ರಶಸ್ತಿ ಹಾಗೂ ದಾಖಲೆ ಪ್ರಮಾಣಪತ್ರಗಳನ್ನು ಸಿಂಚನಾಗೆ ಹಸ್ತಾಂತರಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಕೀಲ ಜಿ.ಆರ್. ರವಿಶಂಕರ್, ಯೋಗ ಎಂದರೆ ಕೇವಲ ದೇಹವನ್ನು ಬಗ್ಗಿಸುವುದು ಅಥವಾ ಕಷ್ಟಕರವಾದ ಆಸನಗಳನ್ನು ಮಾಡುವುದು ಮಾತ್ರವಲ್ಲ. ಶರೀರ, ಮನಸ್ಸು ಹಾಗೂ ಆತ್ಮವನ್ನು ಒಂದೇ ಸೂತ್ರದಲ್ಲಿ ಬೆಸೆಯುವುದೇ ಯೋಗದ ಉದ್ದೇಶ ಎಂದರು.

ಇAದಿನ ಧಾವಂತದ ಜೀವನದಲ್ಲಿ ಮಾನಸಿಕ ಒತ್ತಡ, ಆತಂಕ ಹಾಗೂ ದೈಹಿಕ ಅನಾರೋಗ್ಯ ಹೆಚ್ಚಾಗುತ್ತಿದ್ದು, ಯೋಗವು ಮನಸ್ಸಿಗೆ ಶಾಂತಿ ಹಾಗೂ ದೇಹಕ್ಕೆ ಆರೋಗ್ಯ ನೀಡುತ್ತದೆ. ಆರೋಗ್ಯ ಸಂರಕ್ಷಣೆಗೆ ಪ್ರಕೃತಿಯೇ ನೀಡಿರುವ ದಿವ್ಯ ಔಷಧಿಯಂತಿರುವ ಯೋಗವನ್ನು ಪ್ರತಿಯೊಬ್ಬರೂ ಜೀವನದ ಭಾಗವನ್ನಾಗಿಸಿಕೊಳ್ಳಬೇಕು ಎಂದು ಹೇಳಿದರು.

ಭಾರತ ಯೋಗದ ಉಗಮಸ್ಥಾನವಾಗಿದ್ದು, ಇಲ್ಲಿಂದ ಆರಂಭವಾದ ಯೋಗವಿದ್ಯೆ ಇಂದು ವಿಶ್ವದಾದ್ಯಂತ ವ್ಯಾಪಿಸಿದೆ. ಯೋಗದ ವಿವಿಧ ಹಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾನಸಿಕ ಹಾಗೂ ಅಧ್ಯಾತ್ಮಿಕವಾಗಿ ಉನ್ನತ ಮಟ್ಟಕ್ಕೇರಲು ಸಾಧ್ಯ. ದೇಹದ ಲವಲವಿಕೆ, ಮನಸ್ಸಿನ ಹತೋಟಿ, ಏಕಾಗ್ರತೆ ಹಾಗೂ ರೋಗನಿರೋಧಕ ಶಕ್ತಿ ವೃದ್ಧಿಗೂ ಯೋಗ ಸಹಕಾರಿಯಾಗಿದೆ ಎಂದು ರವಿಶಂಕರ್ ತಿಳಿಸಿದರು.

ಮಡಿಕೇರಿಯ ಯೋಗಗುರು ಕೆ.ಕೆ. ಮಹೇಶ್ ಕುಮಾರ್ ಮಾತನಾಡಿ, ಸಿಂಚನಾಳ ಸಾಧನೆ ಶ್ಲಾಘನೀಯವಾಗಿದ್ದು, ಜಿಲ್ಲೆಯ ಯೋಗ ಕ್ಷೇತ್ರದಲ್ಲಿ ಈಕೆಯ ಸಾಧನೆ ಗಮನಾರ್ಹವಾಗಿದೆ. ಪ್ರಾಚೀನ ಕಾಲದಲ್ಲಿ ಋಷಿ-ಮುನಿಗಳ ಜೀವನ ಪದ್ಧತಿಯೇ ಯೋಗವಾಗಿತ್ತು. ಅಂದಿನವರು ಯೋಗಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದುದರಿಂದ ಆರೋಗ್ಯಕರ ಜೀವನ ನಡೆಸುತ್ತಿದ್ದರು ಎಂದು ಅಭಿಪ್ರಾಯಪಟ್ಟರು.

ಯಾವುದೇ ಸಾಧನೆಗೆ ಪರಿಶ್ರಮದ ಜೊತೆಗೆ ನಿರಂತರ ಅಭ್ಯಾಸ ಹಾಗೂ ದೃಢಸಂಕಲ್ಪ ಅಗತ್ಯ. ಸಮಯವನ್ನು ವ್ಯರ್ಥ ಮಾಡದೆ ಗುರಿ ಸಾಧನೆಗೆ ಶ್ರಮಿಸಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸಿಂಚನಾಳ ತಾಯಿ ರೇಣುಕಾ ಕೀರ್ತಿ ಮಾತನಾಡಿ, ಸಿಂಚನಾ ಪ್ರತಿನಿತ್ಯ ಒಂದು ಗಂಟೆ ಯೋಗಾಭ್ಯಾಸ ಮಾಡುತ್ತಿದ್ದು, ನಿರಂತರ ಪರಿಶ್ರಮದ ಮೂಲಕ ಯೋಗವನ್ನು ಕರಗತ ಮಾಡಿಕೊಂಡಿದ್ದಾಳೆ ಎಂದರು.

ಯೋಗಪಟು ಸಿಂಚನಾ ಮಾತನಾಡಿ, ತಾ. ೨೫ರಂದು ದೇವರಕೊಲ್ಲಿಯ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಮತ್ತೊಮ್ಮೆ ಮೂರು ವಿಶ್ವದಾಖಲೆಗಳ ಯೋಗ ಪ್ರದರ್ಶನ ನೀಡಲು ಸಿದ್ಧತೆ ನಡೆಸುತ್ತಿರುವುದಾಗಿ ತಿಳಿಸಿದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್. ರಾಜೇಶ್ ಮಾತನಾಡಿ, ಸಿಂಚನಾಳ ಯೋಗಸಾಧನೆ ದಾಖಲಾರ್ಹವಾಗಿದ್ದು, ಆಕೆಯ ಮುಂದಿನ ಸಾಧನೆಗೆ ರೋಟರಿ ಮಿಸ್ಟಿ ಹಿಲ್ಸ್ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು.

ವಲಯ ಸೇನಾನಿ ಪೊನ್ನಚ್ಚನ ಮಧುಸೂದನ್ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿಯೇ ಯೋಗದಂತಹ ಕಠಿಣ ಅಭ್ಯಾಸದಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ಸಿಂಚನಾ ವಿದ್ಯಾರ್ಥಿಗಳಿಗೆ ಆದರ್ಶಪ್ರಾಯರಾಗಿದ್ದಾರೆ ಎಂದು ಶ್ಲಾಘಿಸಿದರು.

ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಡಾ. ಚೇತನ್ ಜಿ.ಡಿ. ವಂದಿಸಿದರು. ಮಿಸ್ಟಿ ಹಿಲ್ಸ್ ನಿರ್ದೇಶಕ ಪ್ರಸಾದ್ ಗೌಡ ಕಾರ್ಯಕ್ರಮ ನಿರ್ವಹಿಸಿದರು.

ಸಿಂಚನಾಳ ತಂದೆ ಕೀರ್ತಕುಮಾರ್, ರೋಟರಿ ಜಿಲ್ಲೆಯ ಮಾಜಿ ಸಹಾಯಕ ಗವರ್ನರ್‌ಗಳಾದ ಅನಿಲ್ ಎಚ್.ಟಿ., ದೇವಣಿರ ತಿಲಕ್, ಬಿ.ಕೆ. ರವೀಂದ್ರ ರೈ, ದೇವರಕೊಲ್ಲಿ ಶ್ರೀ ಚಾಮುಂಡೇಶ್ವರಿ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಯಶೋಧರ್, ಮದೆಕೈಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಗೋಳಿಕಜೆ ಪಿ. ಧನಂಜಯ್, ಸಾಹಿತಿ ಬಿ.ಆರ್. ಜೋಯಪ್ಪ ಹಾಗೂ ನಿವೃತ್ತ ಶಿಕ್ಷಕ ಎಂ.ಎಸ್. ಶಿವರಾಮ್ ಉಪಸ್ಥಿತರಿದ್ದರು. ಸಿಂಚನಾ ನೀಡಿದ ಆಕರ್ಷಕ ಯೋಗ ಪ್ರದರ್ಶನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು, ನೆರೆದಿದ್ದವರ ಗಮನ ಸೆಳೆಯಿತು.