ಸಮಾಜಮುಖಿ ಕಳಕಳಿ, ಸಂಪ್ರದಾಯ ಮತ್ತು ಯುವ ಶಕ್ತಿಯ ಸಂಗಮವಾಗಿ ಶಿವಕೇರಿಯಲ್ಲಿ ೪೭ನೇ ವರ್ಷದ ಗೌರಿ-ಗಣೇಶೋತ್ಸವ ಸಂಭ್ರಮಕ್ಕೆ ತಯಾರಾಗಿದೆ.
ವೀರಾಜಪೇಟೆಯ ಶಿವಕೇರಿಯ ಸಮುದಾಯ ಭವನದಲ್ಲಿ ಶ್ರೀ ವಿನಾಯಕ ಯುವ ಸಮಿತಿಯ ವತಿಯಿಂದ ೪೭ನೇ ವರ್ಷದ ಗೌರಿ-ಗಣೇಶೋತ್ಸವವು ಶ್ರದ್ಧಾ-ಭಕ್ತಿ, ಸೌಹಾರ್ದ ಹಾಗೂ ವಿಜೃಂಭಣೆಯಿAದ ಜರುಗುತ್ತಿದೆ.
ಸುಮಾರು ೪೭ ವರ್ಷಗಳ ಹಿಂದೆ ಊರಿನ ಹಿರಿಯರಾದ ವೆಂಕಟೇಶ್, ವಿಠಲ, ವಾಸು, ಚಂದ್ರ, ಗೋಪಾಲ, ಭೋಜ ಹಾಗೂ ತಮ್ಮಯ್ಯ ಅವರುಗಳು ಒಂದಾಗಿ ಶಿವಕೇರಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಈ ಧಾರ್ಮಿಕ ಪರಂಪರೆಗೆ ಅಡಿಪಾಯ ಹಾಕಿದ್ದರು. ಹಿರಿಯರು ಹಾಕಿಕೊಟ್ಟ ಆ ಪವಿತ್ರ ಹಾದಿಯಲ್ಲೇ ಇಂದಿನ ಯುವ ಪೀಳಿಗೆಯು ಉತ್ಸಾಹದಿಂದ ಮುನ್ನಡೆಯುತ್ತಿದ್ದು, ಹಬ್ಬದ ಸಂಪ್ರದಾಯವನ್ನು ಅಷ್ಟೇ ನಿಷ್ಠೆಯಿಂದ ಕಾಪಾಡಿಕೊಂಡು ಬರುತ್ತಿದೆ.
ಉತ್ಸವದ ಅಂಗವಾಗಿ ದಿನನಿತ್ಯ ವಿಶೇಷ ಪೂಜಾ ಕೈಂಕರ್ಯಗಳು ಹಾಗೂ ನಿಗದಿತ ದಿನದಂದು ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಲಿದೆ. ಈ ಉತ್ಸವದ ಪ್ರಶಂಸನೀಯ ಸಂಗತಿಯೆAದರೆ ಸಮಿತಿಯ ಸಮಾಜಮುಖಿ ಚಿಂತನೆ. ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರಿಂದ ಸಂಗ್ರಹವಾಗುವ ದೇಣಿಗೆ ಹಾಗೂ ಚಂದಾದಲ್ಲಿ ಪೂಜೆಯ ನಂತರ ಉಳಿಯುವ ಮೊತ್ತವನ್ನು ವ್ಯರ್ಥ ಮಾಡದೆ, ಅದನ್ನು ಅನಾಥ ಮಕ್ಕಳ ಶ್ರೇಯೋಭಿವೃದ್ಧಿಗೆ ವಿನಿಯೋಗಿಸುವ ಉದಾತ್ತ ಆಲೋಚನೆಯನ್ನು ಸಮಿತಿ ನಿರಂತರ ವಾಗಿ ಕಾಯ್ದುಕೊಂಡು ಬಂದಿದೆ.
ಹಲವು ದಶಕಗಳ ಕಾಲ ಶಿವಕೇರಿಯ ಇತಿಹಾಸ ಪ್ರಸಿದ್ಧ ಅಕ್ಕಚ್ಚಮ್ಮ ಕೆರೆಯಲ್ಲಿ ಗಣಪತಿ ಮೂರ್ತಿಯ ವಿಸರ್ಜನಾ ಉತ್ಸವವನ್ನು ನಡೆಸಲಾಗುತ್ತಿತ್ತು. ಆದರೆ ಉತ್ಸವಕ್ಕೆ ಮತ್ತಷ್ಟು ವೈಭವ ತರಲು ಟೊಂಕ ಕಟ್ಟಿ ನಿಂತ ೧೧೦ಕ್ಕೂ ಹೆಚ್ಚು ಯುವಕರ ತಂಡವು, ಕಳೆದ ೫ ವರ್ಷಗಳಿಂದ ವೀರಾಜಪೇಟೆ ಪಟ್ಟಣದ ಐತಿಹಾಸಿಕ ಮಹಾ ಶೋಭಾಯಾತ್ರೆಯಲ್ಲಿ ಭಾಗವಹಿಸುವ ಮಹತ್ವದ ನಿರ್ಧಾರ ಕೈಗೊಂಡಿತು. ಪ್ರಸ್ತುತ ವೀರಾಜಪೇಟೆಯ ಪ್ರಮುಖ ೨೨ ಗಣೇಶ ಸಮಿತಿಗಳಲ್ಲಿ ಒಂದಾಗಿ ಶ್ರೀ ವಿನಾಯಕ ಯುವ ಸಮಿತಿಯು ಶೋಭಾಯಾತ್ರೆಯಲ್ಲಿ ಅತ್ಯಂತ ಶಿಸ್ತು ಮತ್ತು ಉತ್ಸಾಹದೊಂದಿಗೆ ಪಾಲ್ಗೊಳ್ಳುತ್ತಿದೆ.
ಸಮಿತಿಯ ನೇತೃತ್ವ ಹಾಗೂ ಸಂಘಟನೆಯಲ್ಲಿ ಗೌರವಾಧ್ಯಕ್ಷರಾಗಿ ಸಚೀಂದ್ರ, ಅಧ್ಯಕ್ಷರಾಗಿ ರಾಕೇಶ್, ಕಾರ್ಯದರ್ಶಿಯಾಗಿ ಸಂದೇಶ್ ಸೇರಿದಂತೆ ೧೧೦ಕ್ಕೂ ಹೆಚ್ಚು ಉತ್ಸಾಹಿ ಯುವಕರ ಬಳಗ ತೊಡಗಿಸಿಕೊಂಡಿದೆ.
ಹಿರಿಯರ ಮಾರ್ಗದರ್ಶನ, ಯುವಕರ ಒಗ್ಗಟ್ಟು ಹಾಗೂ ಸಾಮಾಜಿಕ ಜವಾಬ್ದಾರಿಯೊಂದಿಗೆ ನೆರವೇರುತ್ತಿರುವ ಶಿವಕೇರಿಯ ಶ್ರೀ ವಿನಾಯಕ ಯುವ ಸಮಿತಿಯ ಗಣೇಶೋತ್ಸವವು ಇಡೀ ಪಟ್ಟಣಕ್ಕೆ ಮಾದರಿಯಾಗಿ ಮೂಡಿಬರುತ್ತಿದೆ.
- ರಜಿತ ಕಾರ್ಯಪ್ಪ,
ವೀರಾಜಪೇಟೆ.
ಮೊ: ೯೪೮೧೭೭೧೮೫೧