ವೀರಾಜಪೇಟೆ, ಸೆ. ೫: ರಕ್ಷಾ ಬಂಧನ ಹಬ್ಬವು ಪುರಾಣ ಕಾಲದಿಂದಲೂ ಸಹೋದರತೆಯ ಸಂಕೇತವಾಗಿ ಅಣ್ಣ ತಂಗಿಯ ಮದುರ ಬಾಂಧವ್ಯವನ್ನು ಗಟ್ಟಿಗೊಳಿಸುವ ಶಾಶ್ವತ ಬಂಧ ಎಂದು ಸೇವಾಭಾರತಿ ಜಿಲ್ಲಾಧ್ಯಕ್ಷರಾದ ಚಂದ್ರನ್ ಅಭಿಪ್ರಾಯಪಟ್ಟರು.

ವೀರಾಜಪೇಟೆ ಕಾವೇರಿ ಪದವಿ ಹಾಗೂ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ರಕ್ಷಾ ಬಂಧನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ರಕ್ಷಾ ಬಂಧನವು ಸಹೋದರತೆಯನ್ನು ಬಿತ್ತುವ ಹಬ್ಬ. ಸಹೋದರತೆಯಿಂದ ಸಾಮರಸ್ಯ, ಇವೆರಡು ಸೇರಿ ಸಂಘಟನೆ, ನಂತರ ಶಕ್ತಿಯಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ ಕೆ.ಜಿ ವೀಣಾ, ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾಬಂಧನ ಹಬ್ಬದ ನೀತಿಯಾಗಿದೆ ಎಂದರು. ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ.ಕೆ ಪದ್ಮ, ರಕ್ಷಾ ಬಂಧನದ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ರಾಘವೇಂದ್ರ, ದಮಯಂತಿ, ಗಾಯತ್ರಿ, ಅಕ್ಷಿತಾ ನಾಯ್ಕ್, ಅನುಪಮಾ, ಸುನಿಲ್, ಹಾಗೂ ಪದವಿಪದವಿ ಪೂರ್ವ ಕಾಲೇಜಿನ ಎಲ್ಲಾ ಉಪನ್ಯಾಸಕರು, ಸಿಬ್ಬಂದಿಗಳು ಹಾಜರಿದ್ದರು.