ಕುಶಾಲನಗರ, ಸೆ. ೪: ಹಾರಂಗಿ ಟ್ರೀ ಪಾರ್ಕ್ ಮತ್ತು ಸಾಕಾನೆ ಶಿಬಿರದಲ್ಲಿ ಸಾರ್ವಜನಿಕರಿಗಾಗಿ ಆನೆಗಳ ಪ್ರದರ್ಶನವನ್ನು ಸುರಕ್ಷತಾ ಕ್ರಮಗಳೊಂದಿಗೆ ಗುರುವಾರದಿಂದ ಪುನರಾರಂಭಗೊಳಿಸಲಾಗಿದೆ.
ಈ ವರ್ಷದ ಮೇ ತಿಂಗಳಲ್ಲಿ ದುಬಾರೆ ಶಿಬಿರದಲ್ಲಿ ಎರಡು ಆನೆಗಳ ನಡುವೆ ನಡೆದ ಕಾಳಗದಲ್ಲಿ ಓರ್ವ ಪ್ರವಾಸಿ ಮಹಿಳೆ ಸಿಲುಕಿ ಮೃತಪಟ್ಟ ಹಿನ್ನೆಲೆ ಮತ್ತು ತೀವ್ರ ಗಾಯಗೊಂಡ ಆನೆ ಸಾವಿಗೀಡಾದ ಘಟನೆಗಳ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಆನೆ ಶಿಬಿರಗಳಲ್ಲಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು.
ಇದೀಗ ಹಾರಂಗಿ ಟ್ರೀ ಪಾರ್ಕ್ ಮತ್ತು ಸಾಕಾನೆ ಶಿಬಿರದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಪುನರಾರಂಭಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಆನೆಗಳ ಪ್ರದರ್ಶನದ ಸಂದರ್ಭದಲ್ಲಿ ಪ್ರವಾಸಿಗರು ಮತ್ತು ಸಾರ್ವಜನಿಕರು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವಂತೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಆನೆಗಳ ಸ್ವಭಾವ ಮತ್ತು ಚಲನವಲನವನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಮುನ್ನೆಚ್ಚರಿಕಾ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಆನೆಗಳ ಸುರಕ್ಷತೆ ಕಲ್ಯಾಣ ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ ಸಾರ್ವಜನಿಕರಲ್ಲಿ ಆನೆಗಳ ಸಂರಕ್ಷಣೆ ಮತ್ತು ಅವುಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಆನೆಗಳ ಪ್ರದರ್ಶನವನ್ನು ಪುನರಾರಂಭಿಸಲಾಗುತ್ತಿದೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಆರ್. ರಕ್ಷಿತ್ ತಿಳಿಸಿದ್ದಾರೆ.
ಮತ್ತಿಗೋಡು ಆನೆ ಶಿಬಿರ
*ಗೋಣಿಕೊಪ್ಪ: ಕುಶಾಲನಗರ ಸಮೀಪದ ದುಬಾರೆ ಆನೆ ಶಿಬಿರದಲ್ಲಿ ಮೇ ೧೮ರಂದು ತಮಿಳುನಾಡಿನ ಚೆನ್ನೈ ಮೂಲದ ಪ್ರವಾಸಿ ಮಹಿಳೆ ಮೃತ ಪಟ್ಟ ಹಿನ್ನೆಲೆಯಲ್ಲಿ ತಿತಿಮತಿ ಮತ್ತಿಗೋಡು ಆನೆ ಶಿಬಿರವನ್ನು ತಕ್ಷಣಕ್ಕೆ ಪ್ರವಾಸಿಗರು ಪ್ರವೇಶಿಸದಂತೆ ಮುಚ್ಚಲಾಯಿತು.
೧೦೫ ದಿನಗಳ ಕಾಲ ಮಚ್ಚಿದ್ದ ಶಿಬಿರವನ್ನು ಪ್ರವಾಸಿಗರ ಅನುಕೂಲಕ್ಕಾಗಿ ಸೆಪ್ಟೆಂಬರ್ ಒಂದರAದು ಪ್ರವಾಸಿಗರ ಭೇಟಿಗೆ ಅನುಕೂಲ ಕಲ್ಪಿಸಲಾಗಿದೆ.
ಪ್ರವಾಸಿಗರ ರಕ್ಷಣೆಗಾಗಿ ಆನೆಗಳನ್ನು ೧೦ ಮೀಟರ್ ದೂರದಿಂದ ವೀಕ್ಷಿಸಲು ಅನುಕೂಲ ಕಲ್ಪಿಸಲಾಗಿದೆ. ಮುಂದಿನ ಯೋಜನೆಯಲ್ಲಿ ಪ್ರವಾಸಿಗರು ನಿಂತು ನೋಡಲು ಅನುಕೂಲವಾಗುವಂತೆ ಮತ್ತು ಆನೆಯನ್ನು ಸ್ಪರ್ಶಿಸಲು ಸಾಧ್ಯವಾಗದಂತೆ ರೈಲ್ವೇ ಬ್ಯಾರಿಕೇಡ್ ಅಳವಡಿಸುವ ಯೋಜನೆಯನ್ನು ಇಲಾಖೆ ಹೊಂದಿದೆ. ತಿತಿಮತಿ-ಮೈಸೂರು ಮಾರ್ಗದಲ್ಲಿ ಸಂಚರಿಸುವ ಪ್ರವಾಸಿಗರು ಮಾರ್ಗ ಮಧ್ಯದಲ್ಲಿ ಅನೆ ಶಿಬಿರಕ್ಕೆ ಭೇಟಿ ನೀಡಿ ೧೨ ಪಳಗಿಸಿದ ಆನೆಗಳನ್ನು ನೋಡಬಹುದಾಗಿದೆ ಎಂದು ಮತ್ತಿಗೋಡು ವಲಯ ಅರಣ್ಯ ಅಧಿಕಾರಿ ಗಂಗಾಧರ್ ಮಾಹಿತಿ ನೀಡಿದ್ದಾರೆ.