ಮಡಿಕೇರಿ, ಸೆ. ೪: ಕೃಷಿ ಪ್ರಧಾನವಾದ ಕೊಡಗು ಜಿಲ್ಲೆಯಲ್ಲಿನ ವಿಶಿಷ್ಟತೆಗಳಲ್ಲಿ ಸ್ಥಳೀಯವಾಗಿ ಕೃಷಿಗೆ ಪೂರಕವಾಗಿಯೇ ಪ್ರಮುಖ ಹಬ್ಬಗಳು ಆಚರಣೆಯಾಗುತ್ತವೆ. ಇದರಂತೆ ಮಳೆಗಾಲದಲ್ಲಿ ಕೃಷಿ ಚಟುವಟಿಕೆಗಳು ಪೂರ್ಣಗೊಂಡ ಬಳಿಕ ಆಚರಿಸಲ್ಪಡುವ ಪ್ರಥಮ ಹಬ್ಬವಾಗಿ ಗುರುತಿಸಲ್ಪಟ್ಟಿರುವ ಕೈಲ್ ಪೊಳ್ದ್ / ಕೈಲ್ ಮುಹೂರ್ತದ ಸಂಭ್ರಮ ಗುರುವಾರದಂದು ಜಿಲ್ಲೆಯಾದ್ಯಂತ ಮನೆಮಾಡಿತ್ತು. ಈ ಹಬ್ಬದ ಭಾಗವಾಗಿ ಸಾಂಪ್ರದಾಯಿಕ ಹಿನ್ನೆಲೆಯೊಂದಿಗೆ ನಡೆಯುವ ಕೋವಿ - ಕತ್ತಿಯಂತಹ ಆಯುಧಗಳು, ಕೃಷಿ ಪರಿಕರಗಳ ಪೂಜೆ, ತೆಂಗಿನಕಾಯಿಗೆ ಗುಂಡು ಹೊಡೆಯುವದೂ ಸೇರಿದಂತೆ ವಿವಿಧ ಕ್ರೀಡಾಕೂಟಗಳು ಜಿಲ್ಲೆಯ ಹಲವೆಡೆಗಳಲ್ಲಿ ಸಂಭ್ರಮ - ಸಡಗರದೊಂದಿಗೆ ಜರುಗಿದವು.

ಮನೆ ಮನೆಗಳಲ್ಲಿ, ಐನ್‌ಮನೆಗಳಲ್ಲಿ, ಮಂದ್ - ಮಾನಿ ಸೇರಿದಂತೆ ಸಾರ್ವತ್ರಿಕವಾಗಿಯೂ ಹಬ್ಬಾಚರಣೆಯಲ್ಲಿ ಜನರು ತೊಡಗಿಸಿಕೊಂಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಈ ಹಬ್ಬದ ಸಾರ್ವತ್ರಿಕವಾದ ಆಚರಣೆ ಹೆಚ್ಚು ಮಹತ್ವ ಪಡೆಯುತ್ತಿರುವುದು ವಿಶೇಷವಾಗಿದೆ. ಪ್ರಸಕ್ತ ವರ್ಷ ಈ ಹಬ್ಬದ ದಿನದಂದು ಮಳೆಯೂ ಒಂದಷ್ಟು ಇಳಿಮುಖವಾಗಿದ್ದು, ಜನತೆಯ ಉತ್ಸಾಹ ಹೆಚ್ಚಾಗಿತ್ತು.

ಬಿಸಿಲಿನ ವಾತಾವರಣದೊಂದಿಗೆ ಜಿಲ್ಲೆಯ ವಿವಿಧೆಡೆ ಆಯೋಜನೆಗೊಂಡಿದ್ದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಸೇರಿದಂತೆ ಕ್ರೀಡಾಕೂಟಗಳು, ವಾಲಗತಾಟ್ ಉತ್ಸಾಹಭರಿತವಾಗಿ ಜರುಗಿದವು. ಪಾರಂಪರಿಕತೆಯ, ಪರಿಪಾಲನೆಯೊಂದಿಗೆ, ಹೊಸತನದೊಂದಿಗೂ ಕೈಲ್‌ಪೊಳ್ದ್ \ ಕೈಲ್‌ಮುಹೂರ್ತದ ವೈಭವ ಕಂಡುಬAದಿತು. ವಿಶೇಷವಾಗಿ ಪೊನ್ನಂಪೇಟೆ ಕೊಡವ ಸಮಾಜದ ವತಿಯಿಂದ ಹಿಂದಿನ ವರ್ಷಗಳಂತೆ ವಾಹನಗಳ ಪೂಜೆ - ಮೆರವಣಿಗೆಯೂ ಗಮನ ಸೆಳೆಯಿತು.

ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದ ತೋಣಕೇರಿ ಅಂಬಲದಲ್ಲಿ ಕೈಲ್ ಪೊಳ್ದ್ ಹಬ್ಬವನ್ನು ಸಾಮೂಹಿಕವಾಗಿ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಗ್ರಾಮಸ್ಥರು ತಮ್ಮ ಮನೆಗಳಲ್ಲಿ ಕೃಷಿ ಪರಿಕರಗಳಿಗೆ ಹಾಗೂ ಶಸ್ತಾçಸ್ತçಗಳಿಗೆ ಪೂಜೆ ಸಲ್ಲಿಸಿ ನಂತರ ಊರಿನ ಅಂಬಲದಲ್ಲಿ ಬಂದು ಸೇರಿದರು. ನಂತರ ಅರಳಿ ಕಟ್ಟೆಯ ಸುತ್ತ ಪ್ರದಕ್ಷಿಣೆ ಹಾಕುತ್ತಾ ಮುಹೂರ್ತ ಹಾಡನ್ನು ಹಾಡಿ ದೇವರನ್ನು ಸ್ತುತಿಸಿದರು. ಊರಿನ ತಕ್ಕ ಮುಖ್ಯಸ್ಥರಾದ ಮಲಚೀರ ಬೋಜಪ್ಪ ಗಾಳಿಯಲ್ಲಿ ಗುಂಡು ಹೊಡೆಯುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಗ್ರಾಮಸ್ಥರಿಗೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಗ್ರಾಮದ ಹಿರಿಯರು, ಕಿರಿಯರು, ಮಹಿಳೆಯರು, ತಮ್ಮ ಗುರಿ ಪ್ರದರ್ಶನ ಮಾಡುವ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಊರಿನ ಹಿರಿಯರಾದ ಮುದ್ದಿಯಡ ಗಣೇಶ್ ಕೃಷಿ ಪರಿಕರ ಹಾಗೂ ಆಯುಧಗಳಿಗೆ ಪೂಜೆ ಸಲ್ಲಿಸಿ, ಗ್ರಾಮದ ಒಳಿತಿಗಾಗಿ ಪ್ರಾರ್ಥಿಸಿದರು.

ಈ ಸಂದರ್ಭ ಚೀರಂಡ ಶಂಭು ಬೆಳ್ಳಿಯಪ್ಪ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗ್ರಾಮಸ್ಥರು ಒಂದೆಡೆ ಸೇರಿ ಹಬ್ಬ ಆಚರಿಸುತ್ತಿದ್ದೇವೆ. ಕೈಲ್ ಪೋಳ್ದ್ ಹಬ್ಬ ಕೃಷಿ ಚಟುವಟಿಕೆಗಳನ್ನು ಮುಗಿಸಿ ದಣಿದ ದೇಹಕ್ಕೆ ಹಾಗೂ ಮನಸಿಗೆ ಖುಷಿ ಕೊಡುವ ಹಬ್ಬವಾಗಿದ್ದು, ಹಿಂದಿನ ಕಾಲದಲ್ಲಿ ಗ್ರಾಮಸ್ಥರು ಆಯುಧಗಳಿಗೆ ಪೂಜೆ ಸಲ್ಲಿಸಿ ನಂತರ ಊರಿನ ನಿಗದಿತ ಜಾಗದಲ್ಲಿ ಧೂಪದ ಮರ ಹಾಗೂ ಕಬ್ಬಕಾಯಿ ಮರಕ್ಕೆ ಗುಂಡು ಹೊಡೆಯುವ ಸಂಪ್ರದಾಯ ಇತ್ತು. ಕಾಲ ಬದಲಾದಂತೆ ಸಂಪ್ರದಾಯವು ಬದಲಾಗಿ ಇತ್ತೀಚಿನ ಕೆಲವು ವರ್ಷಗಳಿಂದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸಂಪ್ರದಾಯ ಮುಂದುವರೆದಿದೆ ಎಂದರು.

ವಿಶಿಷ್ಟ ಆಚಾರ, ವಿಚಾರ, ಪದ್ಧತಿ ಪರಂಪರೆಯನ್ನು ಒಳಗೊಂಡಿರುವ ಕೊಡವ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಯುವ ಜನತೆಯ ಮೇಲಿದೆ ಎಂದರು. ಊರಿನ ಪ್ರಮುಖರಾದ ಮುದ್ದಿಯಡ ಪ್ರಕಾಶ್ ಮಾತನಾಡಿ, ಮುಂದಿನ ಅಕ್ಟೋಬರ್ ೧೦, ೧೧ ರಂದು ಇದೇ ಊರಿನ ಆಲೇಮಾಡ ಕುಟುಂಬಸ್ಥರಿAದ ಆಯೋಜನೆಗೊಳ್ಳುತ್ತಿರುವ ತೋಕ್ ನಮ್ಮೆಗೆ ಊರಿನ ಪರವಾಗಿ ಶುಭಾಶಯಗಳನ್ನು ಕೋರಿದರು. ಕೊಡಗಿನ ಎಲ್ಲಾ ಕೊಡವ ಕುಟುಂಬದವರು ಈ ತೋಕ್‌ನಮ್ಮೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿದರು. ನಂತರ ಊರಿನ ಹಿರಿಯರು ಆಲೆಮಾಡ ಕುಟುಂಬಸ್ಥರಾದ ರೋಷನ್ ಹಾಗೂ ನವೀನ್ ದೇವಯ್ಯ ಅವರಿಗೆ ಸಾಂಪ್ರದಾಯಿಕವಾಗಿ ಕೋವಿ ಹಾಗೂ ತೆಂಗಿನಕಾಯಿಯನ್ನು ನೀಡಿ ತೋಕ್‌ನಮ್ಮೆ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಮುದ್ದಿಯಡ ಕಿರಣ್ ಜೋಯಪ್ಪ ಪ್ರಥಮ, ಆಲೇಮಾಡ ರೋಷನ್ ದ್ವಿತೀಯ, ಚೀರಂಡ ಗಿರೀಶ್ ತೃತೀಯ ಬಹುಮಾನ ಪಡೆದುಕೊಂಡರು. ಮಕ್ಕಳ ವಿಭಾಗದಲ್ಲಿ ಆಲೇಮಾಡ ತ್ರಿಷಾ ಕಾವೇರಮ್ಮ ಬಹುಮಾನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಮುಗುಟಗೇರಿ ದೇವಸ್ಥಾನ ಹಾಗೂ ಮರಣ ನಿಧಿ ಆಡಳಿತ ಮಂಡಳಿ ಸದಸ್ಯರು, ಮಹಿಳೆಯರು, ಮಕ್ಕಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು.ಶ್ರೀಮAಗಲ: ಕೊಡವ ಹಿತರಕ್ಷಣಾ ಬಳಗ ಕ್‌ಗ್ಗಟ್ಟ್ನಾಡ್, ಪೊನ್ನಂಪೇಟೆ ಕೊಡವ ಸಮಾಜ ಆಶ್ರಯದಲ್ಲಿ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಕೈಲ್‌ಪೊಳ್ದ್ ಹಬ್ಬವನ್ನು ಸಾಂಪ್ರದಾಯಿಕವಾಗಿ ಕೃಷಿ ಪರಿಕರಗಳಿಗೆ, ಕೋವಿ, ವಾಹನಗಳಿಗೆ ಪೂಜೆ ಸಲ್ಲಿಸಿ ಆಚರಿಸಲಾಯಿತು. ಪದ್ಧತಿಯಂತೆ ಕೃಷಿ ಪರಿಕರಗಳಾದ ನೇಗಿಲು, ನೊಗಗಳಿಗೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಮತ್ತು ಕೊಡವ ಹಿತರಕ್ಷಣಾ ಬಳಗದ ಬೊಳ್ಳಿಮಾಡ ಧನು ದೇವಯ್ಯ ಪೂಜೆ ಸಲ್ಲಿಸಿದರು.

ಕೋವಿ ಕತ್ತಿಗಳಿಗೆ ಆಯುಧ ಪೂಜೆ ಮಾಡಿ ಕಾರೋಣನಿಗೆ ಹಾಗೂ ಬೇಟೆಯಲ್ಲಿ ಜೊತೆ ಸಾಗುವ ಶ್ವಾನಗಳಿಗೆ ಪದ್ಧತಿಯಂತೆ ಪ್ರತ್ಯೇಕವಾಗಿ ಎಡೆ ಇಡಲಾಯಿತು. ವಾಹನಗಳಿಗೆ ಸಾಮೂಹಿಕವಾಗಿ ಅಲಂಕರಿಸಿ, ಆಯುಧ ಪೂಜೆ ಸಲ್ಲಿಸಿ ದೀಪ ಬೆಳಗಿ ಪೂಗೆ ಸಲ್ಲಿಸಲಾಯಿತು.

ನಂತರ ಕೋವಿಗಳನ್ನು ಹಿರಿಯರಿಂದ ಕಿರಿಯರಿಗೆ ಹಸ್ತಾಂತರಿಸಿ "ಹುಲಿ -ಹಂದಿ ಬರುವ ದಾರಿಯಿಂದ ಸರಿದು ಬೇಟೆಯಾಡು, ಶತ್ರುವನ್ನು ಕೆಣಕಬೇಡ, ಶತ್ರುವಿನೊಂದಿಗೆ ದಾರಿ ಎದುರು ನಿಂತು ಹೋರಾಡು, ಮಿತ್ರನಿಗೆ ಮಿತ್ರನಾಗಿ ಇರು, ದೇವರನ್ನು ಮರೆಯಬೇಡ" ಎಂದು ಕೊಡವ ಭಾಷೆಯಲ್ಲಿ ತಪ್ಪಡ್ಕ ಕಟ್ಟಿ, ಪದ್ಧತಿಯಂತೆ ಆಕಾಶಕ್ಕೆ ಗುಂಡು ಹಾರಿಸಲಾಯಿತು.

ವಾಹನಗಳಿಗೆ ಸಾಮೂಹಿಕ ಆಯುಧ ಪೂಜೆ ಸಲ್ಲಿಸಿ, ಪೊನ್ನಂಪೇಟೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಹನಗಳ ಮೆರವಣಿಗೆ ನಡೆಯಿತು. ಹಬ್ಬದ ವಿಶೇಷ ಉಟೋಪಚಾರದಲ್ಲಿ ಸಾಮೂಹಿಕವಾಗಿ ಎಲ್ಲರೂ ಭಾಗವಹಿಸಿದ್ದರು.

ಈ ಸಂದರ್ಭ ಕೊಡವ ಹಿತರಕ್ಷಣಾ ಬಳಗದ ಅಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ, ಉಪಾಧ್ಯಕ್ಷ ಚೆಕ್ಕೇರ ರಮೇಶ್, ಕಾರ್ಯದರ್ಶಿ ಗಾಂಡAಗಡ ಕೌಶಿಕ್ ದೇವಯ್ಯ, ನಿರ್ದೇಶಕರಾದ ಅಡ್ಡಂಡ ಡಾಲಿ ಜನಾರ್ಧನ, ಉಳುವಂಗಡ ಲೋಹಿತ್ ಭೀಮಯ್ಯ, ಕೋಟ್ರಂಗಡ ಬಿಪಿನ್,ಅಜ್ಜಿಕುಟ್ಟಿರ ಶುಭಾ, ಅಜ್ಜಿಕುಟ್ಟಿರ ರಂಜಿ, ಚೇಯಂಡ ಶಮ್ಮಿ, ಅಡ್ಡಂಡ ಸುನಿಲ್ ಸೋಮಯ್ಯ,ಚೆಟ್ಟಂಗಡ ವಸಂತ, ಮಲ್ಲಪನೇರ ಕಾರ್ಯಪ್ಪ, ಚೆಟ್ಟಂಗಡ ಉತ್ತಪ್ಪ, ಗಾಂಡAಗಡ ಸವಿನ, ಪೊನ್ನಂಪೇಟೆ ಕೊಡವ ಸಮಾಜದ ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ,ನಿರ್ದೇಶಕ ಕಳ್ಳಿಚಂಡ ಚಿಪ್ಪ ದೇವಯ್ಯ, ಅಡ್ಡಂಡ ಪ್ರಕಾಶ್ ಕುಶಾಲಪ್ಪ, ಪಾರುವಂಗಡ ದಿಲನ್ ಚಂಗಪ್ಪ ಸೇರಿದಂತೆ ಪ್ರಮುಖರು ಹಾಜರಿದ್ದರು.

ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕಿನ ಕಿರಗೂರು ಬೀಟೆವಾಡ ಗ್ರಾಮದ ಕೊಡಗು ಹೆಗ್ಗಡೆ ಜನಾಂಗದ ಕೊರಕುಟ್ಪಿರ, ಕಾಕೇರ, ಪಾನಿಕುಟ್ಟಿರ, ಚಾರಿಮಂಡ, ಪೊಕ್ಕಳಿಚಂಡ, ವಾನಂಡ ಹಾಗೂ ಚೂರಿರ ಸೇರಿದಂತೆ ವಿವಿಧ ಒಕ್ಕದವರು ಒಗ್ಗೂಡಿ ಸಾಂಪ್ರದಾಯಿಕ ಕೈಲ್ ಪೋಲ್ದ್ ಆಚರಣೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು.

ಬೆಳಿಗ್ಗೆ ಗ್ರಾಮದ ಮಂದ್‌ನಲ್ಲಿ ಎಲ್ಲಾ ಒಕ್ಕದವರು ಸೇರಿ ದೇವರನ್ನು ಕರೆದು, ಸಂಪ್ರದಾಯದAತೆ ಕೋವಿಯಿಂದ ಗುಂಡು ಹಾರಿಸಿ, ಕುಟ್ಟಿಚಾತ ಅಂಬಲದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಎಲ್ಲಾ ಒಕ್ಕದವರು ತಮ್ಮ ತಮ್ಮ ಮನೆಗಳಿಗೆ ತೆರಳಿ ಕುಟುಂಬಸ್ಥರೊAದಿಗೆ ಕನ್ನಿಕೊಂಬರೆಯಲ್ಲಿ ಕೋವಿಗೆ ತೊಕ್‌ಪೂ ಇಟ್ಟು, ಅದರೊಂದಿಗೆ ಒಡಿಕತ್ತಿಯನ್ನು ಇರಿಸಿ, ಗಂಧ ಹಚ್ಚಿ ವಿಶೇಷ ಪೂಜೆ ಸಲ್ಲಿಸಿದರು.

ನಂತರ ವಿವಿಧ ಬಗೆಯ ಸಾಂಪ್ರದಾಯಿಕ ಅಡುಗೆಗಳನ್ನು ಬಾಳೆ ಎಲೆಯಲ್ಲಿ ಗುರುವಿಗೆ ಎಡೆ ಇಟ್ಟು, ಕುಟುಂಬಸ್ಥರು ಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನದ ಬಳಿಕ ತೆಂಗಿನಕಾಯಿಗೆ ಗುಂಡು ಹೊಡೆಯುವ ಸಾಂಪ್ರದಾಯಿಕ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಆಚರಣೆಯ ಮೂಲಕ ಕೊಡಗು ಹೆಗ್ಗಡೆ ಜನಾಂಗದ ಪಾರಂಪರಿಕ ಸಂಪ್ರದಾಯ, ನಂಬಿಕೆ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಪ್ರಯತ್ನ ನಡೆಯಿತು.

ಈ ಸಂದರ್ಭ ಕುಟ್ಟಿಚಾತ ದೇವಸ್ಥಾನದ ಅಧ್ಯಕ್ಷ ಕೊರಕುಟ್ಟಿರ ರಾಜಪ್ಪ, ಪ್ರಮುಖರಾದ ಚಾರಿಮಂಡ ಮಧು ನಂಜಪ್ಪ , ಪೊಕ್ಕಳಿಚಂಡ ದೇವಯ್ಯ, ಪಾನಿಕುಟ್ಟಿರ ಕಾರ್ಯಪ್ಪ, ಚಾರಿಮಂಡ ಧರ್ಮಜ, ಪೊಕ್ಕಳಿಚಂಡ ಪೂವಯ್ಯ, ಚಾರಿಮಂಡ ವಿನು ದೇವಯ್ಯ ಹಾಗೂ ಗ್ರಾಮಸ್ಥರು ಹಾಜರಿದ್ದರು.ಸಿದ್ದಾಪುರ: ಕೊಡಗಿನ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾದ ಕೈಲ್ ಮುಹೂರ್ತವನ್ನು ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಲೂರು ಗ್ರಾಮದ ಶಾಲಾ ಆವರಣದಲ್ಲಿ ಸಂಭ್ರಮದಿAದ ಆಚರಿಸಲಾಯಿತು.

ಗುಡ್ಲೂರಿನ ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ಗ್ರಾಮೀಣ ಕ್ರೀಡಾಕೂಟವನ್ನು ಮಾಜಿ ಸೈನಿಕರಾದ ಮಹೇಶ್, ನವೀನ್ ಹಾಗೂ ಮಾಜಿ ತಾಲೂಕು ಪಂಚಾಯಿತಿ ಸದಸ್ಯೆ ಕಾವೇರಮ್ಮ ಉದ್ಘಾಟಿಸಿದರು.

ಶ್ರೀ ಬಸವೇಶ್ವರ ದೇವಸ್ಥಾನದ ಅಧ್ಯಕ್ಷ ಸೋಮಯ್ಯ ಜೆ.ಬಿ. ಮಾತನಾಡಿ, ಕೃಷಿ ಕಾರ್ಯ ಮುಗಿದ ಬಳಿಕ ನೇಗಿಲು, ಕೋವಿ ಸೇರಿದಂತೆ ಕೃಷಿ ಪರಿಕರಗಳಿಗೆ ಪೂಜೆ ಸಲ್ಲಿಸಿ ಬಂಧು-ಬಳಗ ಹಾಗೂ ಸ್ನೇಹಿತರೊಂದಿಗೆ ಕೈಲ್ ಮುಹೂರ್ತವನ್ನು ಆಚರಿಸುವುದು ಕೊಡಗಿನ ವಿಶಿಷ್ಟ ಸಂಪ್ರದಾಯವಾಗಿದೆ. ಗ್ರಾಮಸ್ಥರೆಲ್ಲರೂ ಕ್ರೀಡಾಕೂಟದಲ್ಲಿ ಪಾಲ್ಗೊಂಡಾಗ ಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚುತ್ತದೆ ಎಂದರು.

ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗಾಗಿ ಓಟ, ಹಿರಿಯರ ಓಟ, ಮಡಿಕೆ ಒಡೆಯುವುದು ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ವಿಶೇಷ ಆಕರ್ಷಣೆಯಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಯುವಕ ಸಂಘದ ಅಧ್ಯಕ್ಷ ಪ್ರತು, ಸದಸ್ಯರಾದ ಜಿತೇಂದ್ರ, ಯೋಗೇಶ್, ಜಗದೀಶ್, ಉಮೇಶ್ ಸೇರಿದಂತೆ ಗ್ರಾಮಸ್ಥರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು

ಮಡಿಕೇರಿ: ಹೆರವನಾಡು ಗ್ರಾಮದ ಉಡೋತ್ ಮೊಟ್ಟೆಯಲ್ಲಿ ಕೈಲ್ ಪೊಳ್ದ್ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಹಗ್ಗಜಗ್ಗಾಟ, ಓಟ, ಸಂಗೀತ ಕುರ್ಚಿ, ಮಡಿಕೆ ಒಡೆಯುವುದು ಸೇರಿದಂತೆ ಸಾಂಪ್ರದಾಯಿಕ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದ್ದು, ಮಕ್ಕಳು, ಮಹಿಳೆಯರು, ಯುವಕರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಕೂಟಕ್ಕೆ ಮೆರುಗು ತಂದರು. ಸಾಂಪ್ರದಾಯಿಕ ಆಚರಣೆಗಳೊಂದಿಗೆ ಕ್ರೀಡಾ ಚಟುವಟಿಕೆಗಳನ್ನು ಸಂಯೋಜಿಸುವ ಮೂಲಕ ಯುವಪೀಳಿಗೆಗೆ ಕೊಡವ ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವ ಪ್ರಯತ್ನ ಮಾಡಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಆದಿಶಕ್ತಿ ವಿನಾಯಕ ಸೇವಾ ಸಮಿತಿಯ ಅಧ್ಯಕ್ಷರಾದ ಚಂದ್ರ ಉಡೋತ್, ಕಾರ್ಯದರ್ಶಿ ನವೀನ್, ಖಜಾಂಚಿ ಶಬರಿ, ಸಹ ಖಜಾಂಚಿ ದಿನೇಶ್, ಪದಾಧಿಕಾರಿಗಳಾದ ರಘು, ಜಗನ್ನಾಥ್, ರಾಜು, ಕಿಶು, ಮಾಜಿ ಕಾರ್ಯದರ್ಶಿ ಕೇಶಿನಿ ಹಾಗೂ ಊರಿನ ಹಿರಿಯರು, ಯುವಕರು ಹಾಗೂ ಮಕ್ಕಳು ಭಾಗವಹಿಸಿ ಕೈಲ್ ಪೊಳ್ದ್ ಆಚರಣೆಯನ್ನು ಯಶಸ್ವಿಗೊಳಿಸಿದರು.