ಮಡಿಕೇರಿ, ಸೆ. ೨: ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಭಾರತ್ ಜೋಡೋ ಯುವ ಸಂಘದ ಸದಸ್ಯರಾಗುವ ಮೂಲಕ ಯುವಪಡೆ ಸಂಘಟಿತರಾಗಬೇಕೆAದು ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ ಮನವಿ ಮಾಡಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ್ ಜೋಡೋ ಕಾರ್ಯಕ್ರಮ ಯುವಕ-ಯುವತಿಯರಿಗಾಗಿ ಜಾರಿಗೆ ತಂದಿರುವ ಕಾರ್ಯಕ್ರಮವಾಗಿದ್ದು, ೧೬ ರಿಂದ ೩೫ ವರ್ಷದವರು ಇದರ ಲಾಭ ಪಡೆಯಬಹುದಾಗಿದೆ.
ರಾಜ್ಯದಲ್ಲಿ ೧೦ ಸಾವಿರ ಯುವಸಂಘಗಳ ಸ್ಥಾಪನೆಯನ್ನು ಗುರಿ ಹೊಂದಲಾಗಿದ್ದು, ತಲಾ ಒಂದು ಸಂಘಕ್ಕೆ ರೂ. ೧೦ ಲಕ್ಷ ಅನುದಾನವನ್ನು ನೀಡಲಾಗುವುದು. ಈ ಮೂಲಕ ಸಾಂಸ್ಕೃತಿಕ, ಕ್ರೀಡೆ, ಸಮುದಾಯ ಸೇವೆ ಸೇರಿದಂತೆ ಸಾಮಾಜಿಕ ಚಟುವಟಿಕೆಗಳನ್ನು ನಡೆಸಬಹುದಾಗಿದೆ. ಜಿಲ್ಲೆಯಲ್ಲಿ ಹಲವಾರು ಕ್ರೀಡಾಕೂಟಗಳು ನಡೆಯುತ್ತಿದ್ದು, ದಾನಿಗಳ ಸಹಕಾರವನ್ನು ಪಡೆಯಲಾಗುತ್ತಿದೆ.
ಆಯಾ ಸ್ಥಳೀಯ ಮಟ್ಟದಲ್ಲಿ ಭಾರತ್ ಜೋಡೋ ಯುವಸಂಘಗಳ ಸ್ಥಾಪಿಸಿದಲ್ಲಿ ಸರಕಾರದಿಂದ ದೊರೆಯುವ ಹಣದಿಂದ ಚಟುವಟಿಕೆಗಳನ್ನು ನಡೆಸಲು ಸುಲಭವಾಗುತ್ತದೆ ಎಂದರು.
ಸಮಾಜದಲ್ಲಿ ಶಾಂತಿಯುತ ವಾತಾವರಣ, ನಾಯಕತ್ವ ಗುಣ ಬೆಳೆಸಲು ಈ ಕಾರ್ಯಕ್ರಮ ಪೂರಕವಾಗಿದೆ. ಪಿಡಿಓ, ಮುಖ್ಯಾಧಿಕಾರಿಗಳು, ಪೌರಾಯುಕ್ತರು ಈ ಕಾರ್ಯಕ್ರಮದ ಉಸ್ತುವಾರಿಗಳಾಗಿರುತ್ತಾರೆ. ಸ್ಥಳೀಯವಾಗಿ ೧೦೦ ರಿಂದ ೨೦೦ ಜನರ ತಂಡದ ಸಂಘವನ್ನು ಸ್ಥಾಪಿಸಿ ಬಳಿಕ ಕೋರ್ ಕಮಿಟಿ ಮಾಡಿ ಕಾರ್ಯನಿರ್ವಹಿಸಬಹುದಾಗಿದೆ ಎಂದರು.
ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಎ. ಹಕೀಂ ಮಾತನಾಡಿ, ಈಗಾಗಲೇ ರಾಜ್ಯದಲ್ಲಿ ೭ ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ ಅರ್ಜಿ ಸಲ್ಲಿಸುವ ಯುವಕರು ಅದೇ ಗ್ರಾಮ ಪಂಚಾಯಿತಿ ಅಥವಾ ವಾರ್ಡ್ನ ಖಾಯಂ ನಿವಾಸಿಯಾಗಿರಬೇಕು ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ವೀರಾಜಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ಶಬೀರ್, ನಾಪೋಕ್ಲು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಹಂಸ ಕೋಡಿ, ಜಿಲ್ಲಾ ಉಪಾಧ್ಯಕ್ಷರುಗಳಾದ ಕೊಣಿಯಂಡ ಮುತ್ತಣ್ಣ, ರಾಹುಲ್ ಮಾರ್ಷಲ್ ಇದ್ದರು.