ಮಡಿಕೇರಿ, ಸೆ. ೨: ‘ಕ್ರೀಡಾ ತವರೂರು’ ಎಂದೇ ಹೆಸರುವಾಸಿಯಾಗಿರುವ ಕೊಡಗು, ಕ್ರೀಡಾ ಚಟುವಟಿಕೆಗಳ ಜೊತೆಗೆ ತನ್ನ ಮನಮೋಹಕ ಪ್ರಕೃತಿ ಸೌಂದರ್ಯ, ಹಸಿರು ಪರಿಸರ ಹಾಗೂ ಆಹ್ಲಾದಕರ ವಾತಾವರಣದಿಂದಲೂ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇದೀಗ ಕ್ರೀಡೆ ಮತ್ತು ಪರಿಸರವನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ವಿಶೇಷ ಕಾರ್ಯಕ್ರಮಕ್ಕೆ ಕೊಡಗು ಸಜ್ಜಾಗಿದ್ದು, ದೇಶದ ವಿವಿಧೆಡೆಗಳಿಂದ ಸುಮಾರು ೩,೬೦೦ಕ್ಕೂ ಹೆಚ್ಚು ಮಂದಿ ಈಗಾಗಲೇ ನೋಂದಣಿ ಮಾಡಿಕೊಂಡಿರುವುದು ಕಾರ್ಯಕ್ರಮದ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಕ್ರೀಡೆಯ ಉತ್ಸಾಹದೊಂದಿಗೆ ಕೊಡಗಿನ ಪ್ರಕೃತಿ ಸೌಂದರ್ಯವನ್ನು ಪರಿಚಯಿಸುವ ಹಾಗೂ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರುವ ಉದ್ದೇಶದಿಂದ ಆಯೋಜಿಸಲಾಗುತ್ತಿರುವ ಈ ಕಾರ್ಯಕ್ರಮಕ್ಕೆ ವ್ಯಾಪಕ ಸ್ಪಂದನ ವ್ಯಕ್ತವಾಗುತ್ತಿದೆ. ದೇಶದ ವಿವಿಧ ರಾಜ್ಯಗಳಿಂದ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಹಾಗೂ ಪ್ರಕೃತಿ ಪ್ರಿಯರು ಕೊಡಗಿನತ್ತ ಆಗಮಿಸಲಿದ್ದಾರೆ.
ಗೋಣಿಕೊಪ್ಪಲುವಿನ ಕ್ಯಾಲ್ಸ್ ಶಾಲೆ, ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ವತಿಯಿಂದ ಎನ್ಇಬಿ ಸ್ಪೋರ್ಟ್ಸ್ ಎಂಟರ್ಟೈನ್ಮೆAಟ್, ಕರ್ನಾಟಕ ಸರಕಾರದ ಪ್ರವಾಸೋದ್ಯಮ ಇಲಾಖೆ ಸಹಕಾರದೊಂದಿಗೆ ‘ರನ್ ವಿತ್ ನೇಚರ್’ ಎಂಬ ಘೋಷವಾಕ್ಯದೊಂದಿಗೆ ೫ನೇ ವರ್ಷದ ಕೊಡಗು ಮಾನ್ಸೂನ್ ಹಾಫ್ ಮ್ಯಾರಥಾನ್ ಆಯೋಜಿಸಲಾಗಿದೆ. ತಾ. ೬ ರಂದು ಈ ಕಾರ್ಯಕ್ರಮ ಆಯೋಜನೆಯಾಗಿದ್ದು, ಆಯೋಜಕರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ.
೩ ಹಂತದ ಓಟ
೨೧ ಕಿ.ಮೀ., ೧೦ ಕಿ.ಮೀ ಹಾಗೂ ೫ ಕಿ.ಮೀ. ಹೀಗೆ ಮೂರು ಹಂತಗಳಲ್ಲಿ ಮ್ಯಾರಥಾನ್ ನಡೆಯಲಿದೆ. ೧೮ ವರ್ಷ ಮೇಲ್ಪಟ್ಟವರು ೨೧ ಕಿ.ಮೀ.ನ ಹಾಫ್ ಮ್ಯಾರಥಾನ್, ೧೪ ವರ್ಷ ಮೇಲ್ಪಟ್ಟವರಿಗೆ ೧೦ ಕಿ.ಮೀ., ೬ ರಿಂದ ೧೨ ವರ್ಷದೊಳಗಿನವರಿಗೆ ೫ ಕಿ.ಮೀ. ಓಟ ಆಯೋಜಿಸಲಾಗಿದೆ.
ಗೋಣಿಕೊಪ್ಪ ಸಮೀಪದ ಕ್ಯಾಲ್ಸ್ ಶಾಲೆಯಿಂದ ಪಾಲಿಬೆಟ್ಟದ ಟಾಟಾ ಕಾಫಿ ಗಾಲ್ಫ್ ಮೈದಾನದ ತನಕ ೨೧ ಕಿ.ಮೀ.ನ ಹಾಫ್ ಮ್ಯಾರಥಾನ್ ನಡೆಯಲಿದ್ದು, ಉಳಿದ ೨ ಹಂತದ ಓಟವೂ ಇದೇ ಮಾರ್ಗದಲ್ಲಿ ನಿಗದಿತ ಕಿ.ಮೀ. ತನಕ ಸಾಗಲಿದೆ. ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವೂ ಇರಲಿದೆ.
ಮಳೆಗಾಲದಲ್ಲಿ, ಮಂಜಿನಿAದ ಆವೃತವಾದ ಬೆಟ್ಟಗಳು ಮತ್ತು ಹಸಿರಿನಿಂದ ಕಂಗೊಳಿಸುವ ಕಾಫಿ ತೋಟಗಳ ನಡುವೆ ಓಡಿ. ಇಲ್ಲಿ ಮಳೆ, ಪ್ರಕೃತಿ ಮತ್ತು ನಿಮ್ಮ ಪ್ರತಿ ಹೆಜ್ಜೆಯೂ ಸೇರಿ ಒಂದು ಅವಿಸ್ಮರಣೀಯ ಅನುಭವವನ್ನು ಸೃಷ್ಟಿಸುತ್ತವೆ ಎಂಬುದು ಆಯೋಜಕರ ಅಭಿಪ್ರಾಯವಾಗಿದೆ.
ವಿದ್ಯಾರ್ಥಿಗಳಿಗೆ ಈ ಮ್ಯಾರಥಾನ್ ಕ್ರೀಡಾ ಸ್ಪರ್ಧೆಯ ಜೊತೆಗೆ ಕಲಿಕೆಯ ವೇದಿಕೆಯೂ ಆಗಿದೆ. ತಂಡವಾಗಿ ಕಾರ್ಯನಿರ್ವಹಿಸುವುದು, ಯೋಜನೆ ರೂಪಿಸುವುದು, ಜವಾಬ್ದಾರಿ ನಿರ್ವಹಣೆ, ಸಂವಹನ, ಸಮುದಾಯದೊಂದಿಗೆ ಬೆರೆಯುವುದು ಹಾಗೂ ಕಾರ್ಯಕ್ರಮ ನಿರ್ವಹಣೆಯಂತಹ ಕೌಶಲ್ಯಗಳನ್ನು ಅವರು ಪ್ರಾಯೋಗಿಕವಾಗಿ ಕಲಿಯುತ್ತಾರೆ ಎಂಬುದು ಅಂತರರಾಷ್ಟಿçÃಯ ಮಾಜಿ ಅಥ್ಲೀಟ್ ಅಶ್ವಿನಿ ನಾಚಪ್ಪ ಅವರ ಅಭಿಪ್ರಾಯವಾಗಿದೆ.
೨೧ ಕಿ.ಮೀ. ಹಾಗೂ ೧೦ ಕಿ.ಮೀ. ವಿಭಾಗಗಳಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಬಹುಮಾನ ಮೊತ್ತವನ್ನು ಇರಲಿದೆ. ೨೧ ಕಿ.ಮೀ. ವಿಭಾಗದ ವಿಜೇತರಿಗೆ ಪ್ರಥಮ ೩೦ ಸಾವಿರ, ದ್ವಿತೀಯ ೨೦ ಸಾವಿರ, ತೃತೀಯ ೧೫ ಸಾವಿರ, ೧೦ ಕಿ.ಮೀ. ವಿಭಾಗದಲ್ಲಿ ಪ್ರಥಮ ರೂ. ೧೫ ಸಾವಿರ, ದ್ವಿತೀಯ ೧೦ ಸಾವಿರ, ತೃತೀಯ ರೂ. ೫ ಸಾವಿರ ನಗದು ಬಹುಮಾನ ನೀಡಲಾಗುವುದು.
ಜಿಲ್ಲೆಯ ಶಾಲೆಗಳ ತಲಾ ೨೦ ವಿದ್ಯಾರ್ಥಿಗಳಿಗೆ ೫ ಕಿ.ಮೀ. ವಿಭಾಗದಲ್ಲಿ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದ್ದು, ಅಂತಿಮವಾಗಿ ಸುಮಾರು ೪ ಸಾವಿರ ಓಟಗಾರರು ಮ್ಯಾರಥಾನ್ನಲ್ಲಿ ಭಾಗವಹಿಸುವ ವಿಶ್ವಾಸವನ್ನು ಆಯೋಜಕರು ಹೊಂದಿದ್ದಾರೆ.