ಮಡಿಕೇರಿ, ಸೆ. ೨: ಮಡಿಕೇರಿ ಮಹದೇವಪೇಟೆಯ ಡಾ. ಅಬ್ದುಲ್ ಕಲಾಂ ಬಡಾವಣೆಯಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಕಾರಣದಿಂದ ಹೋಂಸ್ಟೇಗಳಿಗೆ ಅನುಮತಿಯನ್ನು ನೀಡಬಾರದೆಂದು ಅಬ್ದುಲ್ ಕಲಾಂ ಬಡಾವಣೆ ಸೌಹಾರ್ದ ಸಮಿತಿ ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿ ಮನವಿ ಮಾಡಿಕೊಂಡಿದೆ.

ಈ ಕುರಿತು ಸೌಹಾರ್ದ ಸಮಿತಿಯ ಅಧ್ಯಕ್ಷ ಎಂ.ಎ. ಸಾದಿಕ್, ಉಪಾಧ್ಯಕ್ಷರುಗಳಾದ ಟಿ.ಆರ್. ಜೀವನ್, ಎಂ.ಬಿ. ಮಹಮ್ಮದ್ ಕೌಸರ್, ಪ್ರಧಾನ ಕಾರ್ಯದರ್ಶಿ ಬೈ.ಶ್ರೀ. ಪ್ರಕಾಶ್ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಲಿಖಿತ ಮನವಿ ಸಲ್ಲಿಸಿದ್ದಾರೆ. ಇತ್ತೀಚಿಗೆ ನಡೆದ ಸೌಹಾರ್ದ ಸಮಿತಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬಡಾವಣೆಯಲ್ಲಿ ಹೋಂಸ್ಟೇ ನಿರ್ಮಾಣಕ್ಕೆ ಸಂಪೂರ್ಣ ವಿರೋಧ ವ್ಯಕ್ತಪಡಿಸಿ ಸರ್ವಾನುಮತದ ನಿರ್ಣಯವನ್ನು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜನವಸತಿ ನಿಲಯದ ಈ ಬಡಾವಣೆಯಲ್ಲಿ ಹೋಂಸ್ಟೇಗೆ ಅನುಮತಿಯನ್ನು ಕೊಡಲೇಬಾರದೆಂಬ ಸಂಬAಧಿಸಿದವರಿಗೆ ಅಗತ್ಯ ಸೂಚನೆ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.

ಮನವಿಗೆ ಸ್ಪಂದಿಸಿ ಜಿಲ್ಲಾಧಿಕಾರಿ ಕೂಡಲೇ ಸಂಬAಧಪಟ್ಟವರಿಗೆ ಸೂಚನೆ ನೀಡಲಾಗುವುದೆಂದು ಭರವಸೆ ನೀಡಿದ್ದಾರೆಂದು ಮನವಿದಾರರು ತಿಳಿಸಿದ್ದಾರೆ.

ಈ ಮನವಿ ಪ್ರತಿಯನ್ನು ನಗರಸಭಾ ಆಯುಕ್ತರು, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಅಧಿಕಾರಿ, ನಗರ ಪೊಲೀಸ್ ಠಾಣಾಧಿಕಾರಿಗೆ ಮುಂದಿನ ಕ್ರಮಕ್ಕಾಗಿ ಸಲ್ಲಿಸಲಾಗಿದೆಯೆಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.