ವೀರಾಜಪೇಟೆ, ಸೆ. ೧: ಸಾಹಿತ್ಯ, ಕೃತಿಗಳ ಓದಿನಿಂದ ಮನುಷ್ಯನ ಬದುಕಿನಲ್ಲಿ ಹೊಸ ಸಂಚಲನ ಸೃಷ್ಟಿಯಾಗುವುದರೊಂದಿಗೆ ಬೌದ್ಧಿಕ ಶಕ್ತಿಗಳು ಜಾಗೃತಗೊಳ್ಳುತ್ತವೆ ಎಂದು ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.
ಜಮಾಅತೆ ಇಸ್ಲಾಮೀ ಹಿಂದ್ ವೀರಾಜಪೇಟೆ ಘಟಕದ ವತಿಯಿಂದ ಸೀರತ್ ಪ್ರಯುಕ್ತ ರಾಜ್ಯಾದ್ಯಂತ ನಡೆಯುತ್ತಿರುವ ಅಭಿಯಾನದ ಅಂಗವಾಗಿ ಶಾಂತಿ ಪ್ರಕಾಶನದ ಪುಸ್ತಕಗಳ ಮರುಬಿಡುಗಡೆ ಸಮಾರಂಭವು ನಗರದ ಶ್ರೀ ವಿರಕ್ತ ದೊಡ್ಡಮಠದ ಆವರಣದಲ್ಲಿ ನಡೆಯಿತು.
ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮೊಹಮ್ಮದ್ ಪ್ರವಾದಿ ಅವರು ಸಾಮಾಜಿಕ ಚಿಂತಕರಾಗಿದ್ದರು. ಅವರು ಸಾರಿದ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜೀವನಶೈಲಿಯಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದರು.
ವೀರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜಿನ ಉಪನ್ಯಾಸಕ ಹಾಗೂ ಸಾಹಿತಿ ಅರ್ಜುನ್ ಮೌರ್ಯ ಮಾತನಾಡಿ, ಉತ್ತಮ ಸಾಹಿತ್ಯ ಕೃತಿಗಳ ಅಧ್ಯಯನದಿಂದ ವ್ಯಕ್ತಿಯ ಅಂತರAಗದ ಶುದ್ಧೀಕರಣ ಸಾಧ್ಯವಾಗುತ್ತದೆ. ಸಮಾಜದ ಪರಿವರ್ತನೆಯಲ್ಲಿ ಸಾಹಿತ್ಯ ಕೃತಿಗಳು ಸದಾ ಪೂರಕವಾಗಿ ಕಾರ್ಯನಿರ್ವಹಿಸುತ್ತವೆ ಎಂದರು.
ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ಕೊಡಗು ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಕೆ.ಟಿ. ಬಷೀರ್, ಗೋಣಿಕೊಪ್ಪಲು ವಲಯದ ತನ್ವೀರ್ ಎ.ಪಿ., ಸ್ಥಳೀಯ ಅಧ್ಯಕ್ಷ ಉಮ್ಮರ್ ಹಾಗೂ ಮೊಹಮ್ಮದ್ ಸನೀರ್ ಅನ್ಸಾರಿ ಉಪಸ್ಥಿತರಿದ್ದರು.