ಪೊನ್ನಂಪೇಟೆ, ಸೆ. ೧: ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆಯ ಕಾಲೇಜು ವಿಭಾಗದ ಪೋಷಕರ ಸಭೆಯನ್ನು ಕಾಲೇಜಿನ ಸಭಾಂಗಣದಲ್ಲಿ ಪ್ರಾಂಶುಪಾಲ ಜಿ.ಎನ್ ನಾಗೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕುಶಾಲಪ್ಪ ಅವರು ಸಭೆಯಲ್ಲಿ ಭಾಗವಹಿಸಿದ್ದರು. ಪೋಷಕರನ್ನು ಉದ್ದೇಶಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕ-ಪೋಷಕರ ಪಾತ್ರ ಮಹತ್ವದ್ದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ನಮ್ಮ ಕಾಲೇಜಿನಲ್ಲೂ ಸಹ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಿಗೆ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇದು ಸರ್ಕಾರಿ ಕಾಲೇಜುಗಳ ಮೇಲೆ ಸಾರ್ವಜನಿಕರು ಹೆಚ್ಚೆಚ್ಚು ಭರವಸೆಯನ್ನು ಹೊಂದಿರುವುದನ್ನು ಸೂಚಿಸುತ್ತದೆ ಎಂದರು.
ಪ್ರಾಂಶುಪಾಲರಾದ ಜಿ.ಎನ್ ನಾಗೇಶ್ ಅವರು ಮಾತನಾಡಿ, ಪೋಷಕರ ಅಹವಾಲುಗಳಿಗೆ ಉತ್ತರಿಸುತ್ತ ಗುಣಮಟ್ಟದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ಕಾಪಾಡುವ ಭರವಸೆ ನೀಡಿದರು.
ಸಭೆಯಲ್ಲಿ ಪೋಷಕ ಪ್ರತಿನಿಧಿಗಳಾದ ಶ್ರೀಮತಿ ಗುಲ್ತಾಜ್ ಹಾಗೂ ಲಕ್ಷಿö್ಮ ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.