ಭಾಗಮಂಡಲ, ಸೆ. ೧: ತಾಯಿಯೊಂದಿಗೆ ಮಾತಿನ ಚಕಮಕಿ ನಡೆಯುತ್ತಿದ್ದ ವೇಳೆ ಮಗಳು ಮನೆಯ ಸನಿಹದ ಕೆರೆಗೆ ಹಾರಿದ್ದು, ಆಕೆಯನ್ನು ರಕ್ಷಿಸಲೆಂದು ತೆರಳಿದ ತಾಯಿ ಸೇರಿದಂತೆ ಈರ್ವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ತಲಕಾವೇರಿ ಗ್ರಾಮದಲ್ಲಿ ಸಂಭವಿಸಿದೆ.
ತಾಯಿ ಪ್ರೇಮ(೪೫), ಪುತ್ರಿ ಪ್ರಿಯಾಂಕ (೧೪) ಮೃತಪಟ್ಟವರು. ಪ್ರೇಮ ಕಕ್ಕಬೆಯ ಲೈನ್ ಮನೆಯೊಂದರಲ್ಲಿ ವಾಸವಾಗಿದ್ದು ಕೂಲಿ ಕೆಲಸ ನಿರ್ವಹಿಸುತ್ತಿದ್ದರು. ಪ್ರಿಯಾಂಕ ಕರಿಕೆಯ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಳು. ತಲಕಾವೇರಿಯ ಮೂಲ ಮನೆಯಲ್ಲಿ ತಾಯಿ, ಮಗಳ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿದ್ದು ತಾನು ಕೆರೆಗೆ ಹಾರುವುದಾಗಿ ಹೇಳಿ ಪ್ರಿಯಾಂಕ ಓಡಿದ್ದು ಮಗಳನ್ನು ತಾಯಿ ಪ್ರೇಮ ಹಿಂಬಾಲಿಸಿದ್ದಾಳೆ.
ಮಗಳು ಕೆರೆಗೆ ಹಾರಿದಳೆಂದು ಪ್ರೇಮ ರಕ್ಷಿಸಲು ಕೆರೆಗೆ ಹಾರಿದ್ದಾಳೆ. ಸ್ಥಳೀಯರಿಂದ ಇಬ್ಬರನ್ನು ರಕ್ಷಿಸುವ ಪ್ರಯತ್ನ ಮಾಡಲಾಯಿತಾದರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಅಗ್ನಿ ಶಾಮಕ ಹಾಗೂ ಪೊಲೀಸ್ ಸಿಬ್ಬಂದಿ ಹೊರ ತೆಗೆದಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಶವಗಳನ್ನು ವಾರಿಸುದಾರರಿಗೆ ಒಪ್ಪಿಸಿದ್ದಾರೆ. ಭಾಗಮಂಡಲ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ನಡೆದ ದುರಂತ ಘಟನೆ ಕುಟುಂಬವನ್ನು ಶೋಕದ ಕಡಲಲ್ಲಿ ಮುಳುಗಿಸಿದೆ. - ಸುನಿಲ್