ಕೆ.ಎಂ ಇಸ್ಮಾಯಿಲ್ ಕಂಡಕರೆ

ಮಡಿಕೇರಿ, ಸೆ. ೧: ಕೊಡಗು ಜಿಲ್ಲೆಯಲ್ಲಿ ೧೦೧ ಗ್ರಾಮ ಪಂಚಾಯಿತಿಗಳ ವಾರ್ಡ್ವಾರು ಚುನಾವಣಾ ಮೀಸಲಾತಿ ಪ್ರಕಟಿಸಿ ಕೊಡಗು ಜಿಲ್ಲಾಧಿಕಾರಿ ಎಸ್.ಜೆ ಸೋಮಶೇಖರ್ ಅವರು ಅಧಿಸೂಚನೆ ಹೊರಡಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಒಟ್ಟು ೧೦೨ ಗ್ರಾಮ ಪಂಚಾಯಿತಿಗಳಿದ್ದು, ವೀರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆ ಗ್ರಾಮ ಪಂಚಾಯತಿಯ ಅಧಿಕಾರ ಅವಧಿ ಪೂರ್ಣಗೊಂಡಿಲ್ಲ.

ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಹೊರತುಪಡಿಸಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳ ವಾರ್ಡ್ವಾರು ಮೀಸಲಾತಿ ಪ್ರಕಟಗೊಂಡಿದೆ. ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರ ಅಧಿಕಾರಾವಾಧಿ ಪೂರ್ಣಗೊಂಡು ಆರು ತಿಂಗಳು ಪೂರ್ಣಗೊಂಡಿದೆ. ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಲಾಗಿತ್ತು. ಅವಧಿ ಪೂರ್ಣಗೊಂಡರೂ ಗ್ರಾಮ ಪಂಚಾಯಿತಿ ವಾರ್ಡ್ವಾರು ಮೀಸಲಾತಿ ಪ್ರಕಟಿಸದ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಚುನಾವಣಾ ಆಯೋಗ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ವಾರ್ಡ್ವಾರು ಮೀಸಲಾತಿ ಪ್ರಕಟಗೊಂಡಿದ್ದು ‘ಹಳ್ಳಿ ಫೈಟ್’ ಮತ್ತಷ್ಟು ರಂಗು ಪಡೆದಿದೆ.

ಕೆಲವರಿಗೆ ಮೀಸಲು ಸಿಹಿ-ಕಹಿ!

ಗ್ರಾಮ ಪಂಚಾಯಿತಿ ಚುನಾವಣೆಯ ವಾರ್ಡ್ವಾರು ಮೀಸಲು ಪ್ರಕಟಗೊಳ್ಳುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ಚುನಾವಣಾ ಕಣ ರಂಗೇರಿದೆ.

ಕೆಲವರಿಗೆ ಮೀಸಲು ಶಾಕ್ ಕೊಟ್ಟರೆ ಇನ್ನು ಕೆಲವರಿಗೆ ಮೀಸಲು ಸಿಹಿ ಸುದ್ದಿ ನೀಡಿದೆ. ಯಾವ ವಾರ್ಡ್! ಯಾವ ವರ್ಗಕ್ಕೆ ಮೀಸಲಾಗಿದೆ! ಎಂಬಿತ್ಯಾದಿ ಚರ್ಚೆಗಳು ನಡೆಯುತ್ತಿವೆ. ಏತನ್ಮಧ್ಯೆ ಕಳೆದ ಬಾರಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹಲವು ಮಂದಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಮೀಸಲು ಶಾಕ್ ಕೊಟ್ಟಿದ್ದು, ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸುವ ಅನಿವಾರ್ಯತೆ ಎದುರಾಗಿದೆ.

ತಮ್ಮ ಸ್ವಕ್ಷೇತ್ರ ವಾರ್ಡ್ನಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದ ಕೆಲವು ಮಂದಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಮೀಸಲು ಶಾಕ್ ಕೊಟ್ಟಿದ್ದು, ಅನಿವಾರ್ಯವಾಗಿ ಹೊಸ ವಾರ್ಡ್ನಲ್ಲಿ ಸ್ಪರ್ಧಿಸುವ ಅನಿವಾರ್ಯತೆ ಎದುರಾಗಿದೆ. ಅದಲ್ಲದೇ ಕಳೆದ ಬಾರಿ ಸ್ಪರ್ಧಿಸಿ ಸೋಲು ಕಂಡಿದ್ದ ಅಭ್ಯರ್ಥಿಗಳಿಗೆ ಕೆಲವರಿಗೆ ಅದೇ ವಾರ್ಡ್ನಲ್ಲಿ ಮೀಸಲಾತಿ ಬದಲಾಗಿ ಸ್ಪರ್ಧಿಸಲು ಅವಕಾಶ ಇಲ್ಲದಂತಾಗಿದೆ.

ಕೊಡಗು ಜಿಲ್ಲೆಯಲ್ಲಿ ಮಡಿಕೇರಿ ತಾಲೂಕಿನ ೨೬ ಗ್ರಾ.ಪಂಗಳಲ್ಲಿ ೨೯೫, ಸೋಮವಾರಪೇಟೆ ೨೩ ಗ್ರಾ.ಪಂಗಳಲ್ಲಿ ೨೫೪, ವೀರಾಜಪೇಟೆ ೧೬ ಗ್ರಾ.ಪಂ ಗಳಲ್ಲಿ ೧೮೮, ಕುಶಾಲನಗರ ೧೬ ಗ್ರಾ.ಪಂ ಗಳಲ್ಲಿ ೨೦೩ ಹಾಗೂ ಪೊನ್ನಂಪೇಟೆ ತಾಲೂಕಿನ ೨೦ ಗ್ರಾ.ಪಂ ಗಳಲ್ಲಿ ೨೪೩ ಸದಸ್ಯ ಸ್ಥಾನಗಳಿಗೆ ಮೀಸಲು ನಿಗದಿ ಪಡಿಸಲಾಗಿದೆ.

೨೦೧೧ ರ ಮೀಸಲಾತಿ ಆಧಾರ

೨೦೨೧ರಲ್ಲಿ ಕೋವಿಡ್ ಕಾರಣದಿಂದಾಗಿ ಜನಗಣತಿ ನಡೆಯಲಿಲ್ಲ. ಇದರಿಂದಾಗಿ ೨೦೧೧ರ ಜನಗಣತಿ ಆಧಾರದ ಮೇಲೆ ಇದೀಗ ಮೀಸಲಾತಿ ನಿಗದಿಪಡಿಸಲಾಗಿದೆ ಮೀಸಲಿಗೆ ೧೫ ವರ್ಷಗಳ ಹಿಂದಿನ ಜನಸಂಖ್ಯೆ ಅಂಕಿ-ಅAಶಗಳನ್ನು ಬಳಸಲಾಗಿದೆ. ಈ ಮಧ್ಯೆ ರಾಜ್ಯದ ಸಾವಿರಾರು ಗ್ರಾಮಗಳಲ್ಲಿ ಜನಸಂಖ್ಯೆ, ಸಾಮಾಜಿಕ ವಿನ್ಯಾಸ ಮತ್ತು ವಸತಿ ಮಾದರಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆದರೂ ಹೊಸ ಜನ ಗಣತಿ ಲಭ್ಯವಿಲ್ಲದ ಕಾರಣ ೨೦೧೧ರ ಜನಗಣತಿಯನ್ನೇ ಸರಕಾರ ಕಾನೂನುಬದ್ದ ಆಧಾರವಾಗಿ ಬಳಸಿದೆ.

ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳ ಮೀಸಲನ್ನು ಆಯಾ ವಾರ್ಡ್ನಲ್ಲಿರುವ ಪರಿಶಿಷ್ಟ ಜಾತಿ (ಎಸ್ಸಿ), ಪರಿಶಿಷ್ಟ ಪಂಗಡ (ಎಸ್‌ಟಿ), ಹಿಂದುಳಿದ ವರ್ಗಗಳು ಹಾಗೂ ಮಹಿಳೆಯರ ಜನಸಂಖ್ಯೆಯ ಅನುಪಾತದ ಆಧಾರದಲ್ಲಿ ನಿಗದಿಪಡಿಸಲಾಗುತ್ತದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೂ ಸರಕಾರದ ಮಾರ್ಗಸೂಚಿ ಹಾಗೂ ಚಕ್ರಾನುಗತ (ರೊಟೇಷನ್) ಪದ್ಧತಿಯಂತೆ ಮೀಸಲು ನಿಗದಿಯಾಗುತ್ತದೆ.

ಮಹಿಳೆಯರಿಗೆ ಶೇ ೫೦ ರಷ್ಟು ಸ್ಥಾನ

ಗ್ರಾಮ ಪಂಚಾಯಿತಿಯ ಒಟ್ಟು ಸ್ಥಾನದಲ್ಲಿ ಶೇಕಡಾ ೫೦ ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಕೊಡಗು ಜಿಲ್ಲೆಯಲ್ಲಿ ಇದೀಗ ೧೦೧ ಗ್ರಾಮ ಪಂಚಾಯಿತಿಗಳ ೧೧೮೩ ಸ್ಥಾನಗಳಿಗೆ ಮೀಸಲು ಪ್ರಕಟಗೊಂಡಿದೆ. ಇದರಲ್ಲಿ ಶೇಕಡಾ ೫೦ ರಷ್ಟು ಸ್ಥಾನಗಳಲ್ಲಿ ಮಹಿಳೆಯರಿಗೆ ಸ್ಪರ್ಧಿಸಲು ಅವಕಾಶ ಇದೆ.

ಎಸ್‌ಐಆರ್ ಪೂರ್ಣಗೊಂಡ ಬಳಿಕ ಚುನಾವಣಾ ಪ್ರಕ್ರಿಯೆ

ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಮೊದಲ ಹಂತ ಮುಕ್ತಾಯಗೊಂಡು ಎರಡನೇ ಹಂತ ನಡೆಯುತ್ತಿದೆ. ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಸೆಪ್ಟೆಂಬರ್ ೨೪ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ನೋಟಿಸ್ ಪಡೆದ ಮತದಾರರ ವಿಚಾರಣೆ ಅಕ್ಟೋಬರ್ ೨೨ ರವರಗೆ ನಡೆಯಲಿದ್ದು, ಅಕ್ಟೋಬರ್ ೨೭ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ. ಆದರೆ ರಾಜ್ಯದಲ್ಲಿ ಎಸ್‌ಐಆರ್ ಮೊದಲ ಹಂತದ ಅವಧಿ ಎರಡು ಬಾರಿ ವಿಸ್ತರಣೆ ಮಾಡಲಾಗಿತ್ತು. ಇದೀಗ ಎರಡನೇ ಹಂತದ ಅವಧಿ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಒಂದು ವೇಳೆ ಎಸ್‌ಐಆರ್ ಪ್ರಕ್ರಿಯೆಯ ಎರಡನೇ ಹಂತದ ಅವಧಿ ವಿಸ್ತರಣೆ ಮಾಡಿ, ಅಂತಿಮ ಮತದಾರರ ಪಟ್ಟಿ ನವೆಂಬರ್ ತಿಂಗಳ ಕೊನೆಯಲ್ಲಿ ಪ್ರಕಟಗೊಂಡರೆ ಡಿಸೆಂಬರ್ ತಿಂಗಳಲ್ಲಿ ಚುನಾವಣೆ ನಡೆಯುವುದು ಅನುಮಾನ.

ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮಾತ್ರ ಚುನಾವಣಾ ಸಿದ್ಧತೆ ನಡೆಸಲು ಸಾಧ್ಯ. ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣಾ ಮೀಸಲಾತಿ ಪ್ರಕಟಗೊಳ್ಳಬೇಕಾಗಿದ್ದು, ಜಿಲ್ಲಾ ಮತ್ತು ತಾಲೂಕು, ಗ್ರಾಮ ಪಂಚಾಯಿತಿ ಚುನಾವಣೆಯನ್ನು ಒಂದೇ ಬಾರಿ ನಡೆಸುವ ಸಾಧ್ಯತೆ ಇದೆ. ೨೦೨೭ರ ಮಾರ್ಚ್ ಅಂತ್ಯದೊಳಗೆ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುವ ಸಾಧ್ಯತೆ ಇದೆ.