ಕೊಡಗು ಕೇವಲ ಒಂದು ಜಿಲ್ಲೆ ಅಲ್ಲ. ಅದು ಪಶ್ಚಿಮ ಘಟ್ಟದ ಹಸಿರು ಕವಚ, ಕಾವೇರಿ ನದಿಯ ಉಗಮಭೂಮಿ, ಅಪಾರ ಜೀವವೈವಿಧ್ಯದ ತಾಣ ಮತ್ತು ಸಾವಿರಾರು ಕುಟುಂಬಗಳ ಬದುಕಿಗೆ ಆಧಾರವಾಗಿರುವ ಕೃಷಿಭೂಮಿ. ಕಾಫಿ, ಕಾಳುಮೆಣಸು, ಏಲಕ್ಕಿ ಸೇರಿದಂತೆ ಹಲವು ಬೆಳೆಗಳು ಕೊಡಗಿನ ಆರ್ಥಿಕತೆ ಮತ್ತು ಸಂಸ್ಕೃತಿಯ ಅವಿಭಾಜ್ಯ ಅಂಗಗಳಾಗಿವೆ. ಆದ್ದರಿಂದ ಕೊಡಗಿನ ಪರಿಸರ ಸಂರಕ್ಷಣೆಯ ಬಗ್ಗೆ ಮಾತನಾಡುವಾಗ ಪ್ರಕೃತಿಯನ್ನು ಮಾತ್ರವಲ್ಲ, ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುತ್ತಿರುವ ಮಾನವನನ್ನೂ ಸಮಾನವಾಗಿ ಪರಿಗಣಿಸಬೇಕು.

ಪರಿಸರ ಸಂರಕ್ಷಣೆ ಅತ್ಯಗತ್ಯ. ಆದರೆ ಅದರ ಹೆಸರಿನಲ್ಲಿ ಕೃಷಿಕನ ಬದುಕನ್ನೇ ಸಂಕಷ್ಟಕ್ಕೆ ಸಿಲುಕಿಸುವುದು ಪರಿಹಾರವಲ್ಲ. ಅದೇ ರೀತಿ ಅಭಿವೃದ್ಧಿಯ ಹೆಸರಿನಲ್ಲಿ ಕಾಡು, ಬೆಟ್ಟ, ನದಿ, ಜಲಮೂಲ ಮತ್ತು ವನ್ಯಜೀವಿಗಳ ಆವಾಸಸ್ಥಾನಗಳನ್ನು ನಾಶಮಾಡುವುದೂ ಸ್ವೀಕಾರಾರ್ಹವಲ್ಲ.

ಕೊಡಗಿಗೆ ಬೇಕಾಗಿರುವುದು “ಪರಿಸರವೇ ಅಥವಾ ಅಭಿವೃದ್ಧಿಯೇ?” ಎಂಬ ಆಯ್ಕೆಯಲ್ಲ. “ಪರಿಸರದೊಂದಿಗೆ ಅಭಿವೃದ್ಧಿ - ಕೃಷಿಯೊಂದಿಗೆ ಸಂರಕ್ಷಣೆ” ಎಂಬ ಸಮತೋಲನದ ಮಾರ್ಗ.

ಕಾಡು ಉಳಿಯಬೇಕು - ರೈತನೂ ಉಳಿಯಬೇಕು

ಕೊಡಗಿನಲ್ಲಿ ಆನೆ, ಹುಲಿ, ಚಿರತೆ, ಕಾಡೆಮ್ಮೆ, ಜಿಂಕೆ ಸೇರಿದಂತೆ ಅನೇಕ ವನ್ಯಜೀವಿಗಳು ಬದುಕುತ್ತಿವೆ. ಅವುಗಳ ಸಂರಕ್ಷಣೆ ನಮ್ಮ ಕರ್ತವ್ಯ. ಆದರೆ ಅದೇ ಭೂಭಾಗದಲ್ಲಿ ರೈತರು, ಕೃಷಿ ಕಾರ್ಮಿಕರು ಮತ್ತು ಗ್ರಾಮೀಣ ಕುಟುಂಬಗಳು ತಮ್ಮ ಜೀವನ ಕಟ್ಟಿಕೊಂಡಿದ್ದಾರೆ.

ಒAದು ಆನೆಯನ್ನು ರಕ್ಷಿಸುವುದು ಎಷ್ಟು ಮುಖ್ಯವೋ, ಆನೆಯ ದಾಳಿಗೆ ಒಳಗಾಗುವ ರೈತನ ಜೀವವೂ ಅಷ್ಟೇ ಅಮೂಲ್ಯ.

ವನ್ಯಜೀವಿಯ ಜೀವಕ್ಕೆ ಬೆಲೆ ಇದೆ; ಮಾನವನ ಜೀವಕ್ಕೂ ಅದೇ ಗೌರವ ಮತ್ತು ಮೌಲ್ಯ ಇದೆ.

ಮಾನವ - ವನ್ಯಜೀವಿ ಸಂಘರ್ಷವನ್ನು ಕೇವಲ “ರೈತರು ಕಾಡನ್ನು ಅತಿಕ್ರಮಿಸುತ್ತಿದ್ದಾರೆ” ಎಂಬ ಸರಳ ದೃಷ್ಟಿಕೋನದಿಂದ ನೋಡಲು ಸಾಧ್ಯವಿಲ್ಲ. ಕಾಡಿನೊಳಗಿನ ಆಹಾರ ಮತ್ತು ನೀರಿನ ಕೊರತೆ, ವನ್ಯಜೀವಿಗಳ ಸಾಂಪ್ರದಾಯಿಕ ಸಂಚಾರ ಮಾರ್ಗಗಳ ಅಡ್ಡಿ, ಅಸಮರ್ಪಕ ರಸ್ತೆ ಮತ್ತು ಮೂಲಸೌಕರ್ಯ, ಆವಾಸಸ್ಥಾನಗಳ ಬದಲಾವಣೆ ಸೇರಿದಂತೆ ಹಲವು ಕಾರಣಗಳು ಈ ಸಂಘರ್ಷಕ್ಕೆ ಕಾರಣವಾಗುತ್ತವೆ. ಆದ್ದರಿಂದ ಪರಿಹಾರವೂ ಸಮಗ್ರವಾಗಿರಬೇಕು.

ಕಾಫಿ ತೋಟವನ್ನು ಕಾಡಿನ ಶತ್ರುವಾಗಿ ನೋಡಬಾರದು ಕೊಡಗಿನ ಕಾಫಿ ತೋಟಗಳು ಕೇವಲ ವಾಣಿಜ್ಯ ಬೆಳೆ ಪ್ರದೇಶಗಳಲ್ಲ. ಅನೇಕ ತೋಟಗಳಲ್ಲಿ ನೆರಳು ಮರಗಳು, ಬಹುವರ್ಷದ ಸಸ್ಯಗಳು ಮತ್ತು ಹಸಿರು ಆವರಣವಿದ್ದು, ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಸಹಕಾರಿಯಾಗುತ್ತವೆ.

ಹೀಗಾಗಿ ಸಮರ್ಪಕವಾಗಿ ನಿರ್ವಹಿಸಲ್ಪಡುವ ಕೃಷಿ ಮತ್ತು ತೋಟಗಾರಿಕೆಯನ್ನು ಪರಿಸರದ ಶತ್ರುವೆಂದು ಪರಿಗಣಿಸುವ ಬದಲು, ಪರಿಸರ ಸ್ನೇಹಿ ಭೂಬಳಕೆಯ ಒಂದು ಪ್ರಮುಖ ಭಾಗವಾಗಿ ನೋಡುವ ದೃಷ್ಟಿಕೋನ ಅಗತ್ಯ.

ರೈತ ತನ್ನ ತೋಟವನ್ನು ಉಳಿಸಿಕೊಂಡರೆ ಮಣ್ಣನ್ನು ಉಳಿಸುತ್ತಾನೆ; ಮಣ್ಣನ್ನು ಉಳಿಸಿದರೆ ನೀರನ್ನು ಉಳಿಸುತ್ತಾನೆ; ನೀರನ್ನು ಉಳಿಸಿದರೆ ಪರಿಸರವನ್ನೇ ಉಳಿಸುತ್ತಾನೆ.

ನಿರ್ಬಂಧ ಬೇಕು - ಆದರೆ ಎಲ್ಲಿ?

ಪರಿಸರಕ್ಕೆ ಶಾಶ್ವತ ಹಾನಿ ಉಂಟುಮಾಡುವ ಚಟುವಟಿಕೆಗಳ ಮೇಲೆ ಕಠಿಣ ನಿಯಂತ್ರಣ ಇರಬೇಕು.

ಅಕ್ರಮ ಗಣಿಗಾರಿಕೆ ಮತ್ತು ಕಲ್ಲುಗಣಿ ಚಟುವಟಿಕೆಗಳಿಗೆ ಕಡಿವಾಣ. ನದಿ, ಹಳ್ಳ, ಜಲಮೂಲ ಮತ್ತು ಜಲಾನಯನ ಪ್ರದೇಶಗಳಿಗೆ ಹಾನಿ ಮಾಡುವ ಚಟುವಟಿಕೆಗಳ ನಿಯಂತ್ರಣ. ಅಕ್ರಮ ಭೂಪರಿವರ್ತನೆಗೆ ತಡೆ. ಅಕ್ರಮ ಮರಳು ಗಣಿಗಾರಿಕೆಗೆ ಕಠಿಣ ಕ್ರಮ. ಅತಿಯಾದ ಮಾಲಿನ್ಯ ಉಂಟುಮಾಡುವ ಕೈಗಾರಿಕೆಗಳ ನಿಯಂತ್ರಣ. ಪರಿಸರದ ಛಿಚಿಡಿಡಿಥಿiಟಿg ಛಿಚಿಠಿಚಿಛಿiಣಥಿ ಮೀರಿಸುವ ಬೃಹತ್ ನಿರ್ಮಾಣ ಯೋಜನೆಗಳ ಪರಿಶೀಲನೆ. ವನ್ಯಜೀವಿಗಳ ಪ್ರಮುಖ ಸಂಚಾರ ಮಾರ್ಗಗಳನ್ನು ಅತಿಕ್ರಮಣದಿಂದ ರಕ್ಷಿಸುವುದು. ಗುಡ್ಡ, ಬೆಟ್ಟ ಮತ್ತು ನೈಸರ್ಗಿಕ ನೀರಿನ ಹರಿವಿಗೆ ಶಾಶ್ವತ ಹಾನಿ ಮಾಡುವ ಚಟುವಟಿಕೆಗಳನ್ನು ತಡೆಯುವುದು.

ನಿರ್ಬಂಧದ ಗುರಿ ರೈತನ ಸಾಮಾನ್ಯ ಕೃಷಿ ಚಟುವಟಿಕೆಗಳಾಗಬಾರದು; ಪರಿಸರವನ್ನು ಶಾಶ್ವತವಾಗಿ ಹಾನಿಗೊಳಿಸುವ ಚಟುವಟಿಕೆಗಳಾಗಬೇಕು.

ರೈತನ ತೋಟ - ಅವನ ಜೀವನದ ಆಧಾರ

ಕೊಡಗಿನ ರೈತನಿಗೆ ತನ್ನ ಜಮೀನಿನಲ್ಲಿ ಕಾಫಿ ಬೆಳೆಸುವುದು, ಕಾಳುಮೆಣಸು ಬೆಳೆಸುವುದು, ನೆರಳು ಮರಗಳನ್ನು ಬೆಳೆಸುವುದು ಮತ್ತು ತೋಟವನ್ನು ನಿರ್ವಹಿಸುವುದು ಕೇವಲ ಕೃಷಿ ಚಟುವಟಿಕೆಯಲ್ಲ; ಅದು ಅವನ ಕುಟುಂಬದ ಜೀವನೋಪಾಯ.

ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಸಾಮಾನ್ಯ ಕೃಷಿ ಚಟುವಟಿಕೆಗಳಿಗೆ ಅತಿಯಾದ ಅನುಮತಿ, ಕಾಗದಪತ್ರ ಮತ್ತು ಕಾನೂನು ತೊಡಕುಗಳನ್ನು ಸೃಷ್ಟಿಸುವುದು ಸಣ್ಣ ರೈತನ ಮೇಲೆ ಅನಗತ್ಯ ಮತ್ತು ಅಸಮಾನ ಹೊರೆ ಹಾಕಬಹುದು. ಪರಿಸರ ಸಂರಕ್ಷಣೆಯ ಹೊರೆ ಬಡ ಮತ್ತು ಸಣ್ಣ ರೈತನ ಹೆಗಲ ಮೇಲೆ ಮಾತ್ರ ಬೀಳಬಾರದು. ರೈತನನ್ನು ಪರಿಸರ ಸಂರಕ್ಷಣೆಯ ಭಾಗೀದಾರನನ್ನಾಗಿ ಮಾಡಬೇಕು; ಸಮಸ್ಯೆಯ ಭಾಗವೆಂದು ಮಾತ್ರ ನೋಡಬಾರದು.

ಕೊಡಗಿಗೆ ಬೇಕು “ಸಹಬಾಳ್ವೆಯ ಮಾದರಿ”

ಕೊಡಗಿನಲ್ಲಿ ಮೂರು ಜೀವಂತ ವ್ಯವಸ್ಥೆಗಳನ್ನು ಒಂದೇ ಸಮಯದಲ್ಲಿ ರಕ್ಷಿಸಬೇಕು:

೧. ಪ್ರಕೃತಿ: ಕಾಡು, ಬೆಟ್ಟ, ನದಿ, ಜಲಮೂಲ, ಮಣ್ಣು ಮತ್ತು ಜೀವವೈವಿಧ್ಯ.

೨. ವನ್ಯಜೀವಿ: ಆನೆ, ಹುಲಿ, ಚಿರತೆ ಮತ್ತು ಇತರ ಪ್ರಾಣಿಗಳ ಆವಾಸ ಹಾಗೂ ಸಂಚಾರ ಮಾರ್ಗ.

೩. ಮಾನವ ಜೀವನ: ರೈತರು, ಕೃಷಿ ಕಾರ್ಮಿಕರು, ಗ್ರಾಮೀಣ ಕುಟುಂಬಗಳು ಮತ್ತು ಸ್ಥಳೀಯ ಆರ್ಥಿಕತೆ.

ಈ ಮೂರರಲ್ಲಿ ಯಾವುದಾದರೂ ಒಂದನ್ನು ಬಲಿಕೊಟ್ಟು ಉಳಿದ ಎರಡನ್ನು ರಕ್ಷಿಸುವುದು ಶಾಶ್ವತ ಪರಿಹಾರವಲ್ಲ.

ಮಾನವ - ವನ್ಯಜೀವಿ ಸಂಘರ್ಷಕ್ಕೆ ವೈಜ್ಞಾನಿಕ ಪರಿಹಾರ ಬೇಕು. ಆನೆ ಮತ್ತು ಇತರ ವನ್ಯಜೀವಿಗಳ ಸಂಚಾರ ಮಾರ್ಗಗಳನ್ನು ವೈಜ್ಞಾನಿಕವಾಗಿ ಗುರುತಿಸಿ ರಕ್ಷಿಸಬೇಕು. ಅಗತ್ಯವಿರುವ ಕಡೆ ಸುರಕ್ಷಿತ ಮಾರ್ಗಗಳು, ಸೌರ ಬೇಲಿಗಳು, ಮುನ್ನೆಚ್ಚರಿಕೆ ವ್ಯವಸ್ಥೆಗಳು, ವೇಗವಾದ ಪರಿಹಾರಧನ ಮತ್ತು ತುರ್ತು ಸ್ಪಂದನಾ ವ್ಯವಸ್ಥೆಗಳನ್ನು ಬಲಪಡಿಸಬೇಕು.

ವನ್ಯಜೀವಿಗಳ ಚಲನವಲನವನ್ನು ತಂತ್ರಜ್ಞಾನದಿAದ ಮೇಲ್ವಿಚಾರಣೆ ಮಾಡಬಹುದು. ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆಗಳನ್ನು ರೂಪಿಸಬಹುದು.

ಸಂಘರ್ಷ ಸಂಭವಿಸಿದ ನಂತರ ಪರಿಹಾರ ನೀಡುವುದಕ್ಕಿಂತ, ಸಂಘರ್ಷವೇ ಸಂಭವಿಸದAತೆ ತಡೆಯುವುದು ಹೆಚ್ಚು ಪರಿಣಾಮಕಾರಿ.

ರೈತನೇ ಪರಿಸರದ ಪಾಲುದಾರ

ಕೊಡಗಿನ ರೈತನನ್ನು ಪರಿಸರ ಸಂರಕ್ಷಣೆಯ ವಿರೋಧಿಯೆಂದು ಬಿಂಬಿಸುವುದು ತಪ್ಪು. ತಲೆತಲಾಂತರಗಳಿAದ ಕೊಡಗಿನ ಭೂಮಿಯನ್ನು ಕೃಷಿ ಮಾಡಿಕೊಂಡು ಬದುಕುತ್ತಿರುವ ರೈತರಿಗೆ ಕಾಡು, ಮಳೆ, ನದಿ, ಮಣ್ಣು ಮತ್ತು ನೀರಿನ ಮಹತ್ವ ಚೆನ್ನಾಗಿ ತಿಳಿದಿದೆ. ಅವರ ಜೀವನವೇ ಪ್ರಕೃತಿಯೊಂದಿಗೆ ನೇರವಾಗಿ ಸಂಪರ್ಕ ಹೊಂದಿದೆ. ಆದ್ದರಿಂದ ಸರ್ಕಾರ, ಅರಣ್ಯ ಇಲಾಖೆ, ಪರಿಸರ ತಜ್ಞರು ಮತ್ತು ಸ್ಥಳೀಯ ಜನರು ಒಟ್ಟಾಗಿ ಕೆಲಸ ಮಾಡುವ ವ್ಯವಸ್ಥೆ ಅಗತ್ಯ.

ರೈತನನ್ನು ನಿಯಂತ್ರಿಸುವುದಕ್ಕಿAತ, ಅವನನ್ನು ಸಂರಕ್ಷಣೆಯ ಸಕ್ರಿಯ ಭಾಗೀದಾರನನ್ನಾಗಿ ಮಾಡುವುದು ಹೆಚ್ಚು ಪರಿಣಾಮಕಾರಿ.

ಅಭಿವೃದ್ಧಿ ಬೇಕು - ಆದರೆ ಕೊಡಗಿನ ಸ್ವಭಾವಕ್ಕೆ ತಕ್ಕ ಅಭಿವೃದ್ಧಿ

ಕೊಡಗಿಗೆ ಅಭಿವೃದ್ಧಿ ಬೇಡ ಎನ್ನುವುದು ಸರಿಯಲ್ಲ. ರಸ್ತೆ, ಆರೋಗ್ಯ ಸೇವೆ, ಶಿಕ್ಷಣ, ಉತ್ತಮ ಸಂಪರ್ಕ ವ್ಯವಸ್ಥೆ, ಪ್ರವಾಸೋದ್ಯಮ, ರೈತನಿಗೆ ಮಾರುಕಟ್ಟೆ ಮತ್ತು ಮೂಲಸೌಕರ್ಯ ಅಗತ್ಯ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ನದಿಗಳನ್ನು ಮುಚ್ಚುವುದು, ಬೆಟ್ಟಗಳನ್ನು ಕತ್ತರಿಸುವುದು, ಜಲಮೂಲಗಳನ್ನು ನಾಶಮಾಡುವುದು ಅಥವಾ ವನ್ಯಜೀವಿಗಳ ಸಂಚಾರ ಮಾರ್ಗಗಳನ್ನು ಅಡ್ಡಿಪಡಿಸುವುದು ಅಭಿವೃದ್ಧಿಯಲ್ಲ.

ಅಭಿವೃದ್ಧಿಯ ಅರ್ಥ ಪ್ರಕೃತಿಯನ್ನು ಗೆಲ್ಲುವುದು ಅಲ್ಲ; ಪ್ರಕೃತಿಯೊಂದಿಗೆ ಸಮತೋಲನದಲ್ಲಿ ಬದುಕುವುದು.

ಕೊಡಗಿನ ಅಭಿವೃದ್ಧಿಗೆ ಸ್ಥಳೀಯ ಮಾದರಿ ಅಗತ್ಯ

ಪಶ್ಚಿಮ ಘಟ್ಟದ ಪರಿಸರ ಸೂಕ್ಷö್ಮತೆಯನ್ನು ಗೌರವಿಸುವ ಜೊತೆಗೆ ಕೊಡಗಿನ ಸ್ಥಳೀಯ ಪರಿಸ್ಥಿತಿ, ಕೃಷಿ ಪದ್ಧತಿ, ಗ್ರಾಮೀಣ ಆರ್ಥಿಕತೆ ಮತ್ತು ಜನರ ಜೀವನವನ್ನು ಪರಿಗಣಿಸುವ “ಏoಜಚಿgu ಒoಜeಟ oಜಿ Susಣಚಿiಟಿಚಿbಟe ಆeveಟoಠಿmeಟಿಣ” ರೂಪಿಸಬಹುದು.

ಈ ಮಾದರಿಯಲ್ಲಿ

ರೈತನ ಕೃಷಿ ಹಕ್ಕು ಮತ್ತು ಜೀವನೋಪಾಯಕ್ಕೆ ರಕ್ಷಣೆ. ಕಾಡು ಮತ್ತು ಜಲಮೂಲಗಳಿಗೆ ಕಟ್ಟುನಿಟ್ಟಿನ ರಕ್ಷಣೆ. ವನ್ಯಜೀವಿ ಕಾರೀಡರ್‌ಗಳಿಗೆ ವೈಜ್ಞಾನಿಕ ಸಂರಕ್ಷಣೆ. ಅಕ್ರಮ ಗಣಿಗಾರಿಕೆ ಮತ್ತು ಪರಿಸರ ನಾಶಕ್ಕೆ ಶೂನ್ಯ ಸಹಿಷ್ಣುತೆ. ಪರಿಸರ ಸ್ನೇಹಿ ಕೃಷಿಗೆ ಉತ್ತೇಜನ. ಮಾನವ - ವನ್ಯಜೀವಿ ಸಂಘರ್ಷ ತಡೆಗೆ ಆಧುನಿಕ ತಂತ್ರಜ್ಞಾನ. ಸ್ಥಳೀಯ ಜನರ ಅಭಿಪ್ರಾಯಕ್ಕೆ ಮಹತ್ವ. ಪರಿಸರ ನಿಯಮಗಳ ಜಾರಿಯಲ್ಲಿ ಸ್ಪಷ್ಟತೆ ಮತ್ತು ಪಾರದರ್ಶಕತೆ.ಇವೆಲ್ಲವೂ ಒಟ್ಟಾಗಿ ಇರಬೇಕು.

ಕಾಡು ಉಳಿಯಬೇಕು. ವನ್ಯಜೀವಿ ಉಳಿಯಬೇಕು. ನದಿ ಉಳಿಯಬೇಕು. ಮಣ್ಣು ಉಳಿಯಬೇಕು. ರೈತ ಉಳಿಯಬೇಕು. ಗ್ರಾಮ ಉಳಿಯಬೇಕು. ಮನುಷ್ಯನ ಜೀವವೂ ಉಳಿಯಬೇಕು.

ಇದು ಒಂದರ ವಿರುದ್ಧ ಮತ್ತೊಂದರ ಹೋರಾಟವಲ್ಲ. ಇವೆಲ್ಲವೂ ಪರಸ್ಪರ ಅವಲಂಬಿತವಾಗಿವೆ. ಕೊಡಗನ್ನು ಉಳಿಸುವ ಹೆಸರಿನಲ್ಲಿ ಕೊಡಗಿನ ಜನರ ಬದುಕನ್ನು ದುರ್ಬಲಗೊಳಿಸಬಾರದು. ಅದೇ ಸಮಯದಲ್ಲಿ ಜನರ ಅಭಿವೃದ್ಧಿಯ ಹೆಸರಿನಲ್ಲಿ ಕೊಡಗಿನ ಪ್ರಕೃತಿಯನ್ನು ನಾಶಮಾಡಲೂ ಬಿಡಬಾರದು.

ರೈತನನ್ನು ಶತ್ರುವಾಗಿ ನೋಡದೆ, ಪರಿಸರದ ರಕ್ಷಕನನ್ನಾಗಿ ಮಾಡೋಣ. ವನ್ಯಜೀವಿಯನ್ನು ಅಪಾಯವೆಂದು ಮಾತ್ರ ನೋಡದೆ, ಪರಿಸರದ ಅವಿಭಾಜ್ಯ ಅಂಗವೆAದು ಗೌರವಿಸೋಣ. ಅಭಿವೃದ್ಧಿಯನ್ನು ತಡೆಯದೆ, ಅದನ್ನು ಪರಿಸರ ಸ್ನೇಹಿಯಾಗಿ ರೂಪಿಸೋಣ.

ಕೊಡಗಿನ ಭವಿಷ್ಯಕ್ಕೆ ಬೇಕಾಗಿರುವುದು ನಿರ್ಬಂಧ ಮತ್ತು ಸಂಘರ್ಷವಲ್ಲ - ಜವಾಬ್ದಾರಿ, ವಿಜ್ಞಾನ, ಸಹಕಾರ ಮತ್ತು ಸಹಬಾಳ್ವೆ. ಪ್ರಕೃತಿಯೂ ಉಳಿಯಲಿ, ಪ್ರಾಣಿಗಳೂ ಉಳಿಯಲಿ, ರೈತನೂ ಉಳಿಯಲಿ - ಇದೇ ಕೊಡಗಿನ ನಿಜವಾದ ಸುಸ್ಥಿರ ಅಭಿವೃದ್ಧಿ.