ಮಡಿಕೇರಿ, ಸೆ. ೧: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ, ತಾಲೂಕು ಹಾಗೂ ಹೋಬಳಿ ಮಟ್ಟದ ಕಾರ್ಯಕಾರಿ ಮಂಡಳಿ ಸಭೆಯು ಮಡಿಕೇರಿಯ ಕೊಡಗು ಪತ್ರಿಕಾ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ವಹಿಸಿದ್ದರು. ಗೌರವ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್ ವಾರ್ಷಿಕ ವರದಿ ಮಂಡಿಸಿದರು.
ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಪ್ರಸಕ್ತ ಸಾಲಿನಲ್ಲಿ ಜಿಲ್ಲಾ, ತಾಲೂಕು ಹಾಗೂ ಹೋಬಳಿ ಪದಾಧಿಕಾರಿಗಳು, ವಿಶೇಷ ಆಹ್ವಾನಿತರು ಹಾಗೂ ಸದಸ್ಯರ ಸಭೆಗಳನ್ನು ಆಯೋಜಿಸಲಾಗಿದೆ. ಕಾರ್ಯಕಾರಿ ಸಮಿತಿಯ ಆರು ಸಭೆಗಳು, ಪದಾಧಿಕಾರಿಗಳ ೧೨ ಸಭೆಗಳು, ಜಿಲ್ಲಾ ಸಮ್ಮೇಳನ ಹಾಗೂ ಮೂರು ತಾಲೂಕು ಸಮ್ಮೇಳನಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.
ಸಂಸ್ಥಾಪನಾ ದಿನಾಚರಣೆ, ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದಿನಾಚರಣೆ, ಸರ್ ಎಂ. ವಿಶ್ವೇಶ್ವರಯ್ಯ ದಿನಾಚರಣೆ ಹಾಗೂ ಮಿರ್ಜಾ ಇಸ್ಮಾಯಿಲ್ ದಿನಾಚರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ ೩೭ ದತ್ತಿನಿಧಿ ಕಾರ್ಯಕ್ರಮಗಳು ಹಾಗೂ ೧೫ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ತಿಳಿಸಲಾಯಿತು.
ವಾರ್ಷಿಕ ಲೆಕ್ಕಪತ್ರವನ್ನು ಗೌರವ ಕೋಶಾಧಿಕಾರಿ ಎಸ್.ಐ. ಮುನೀರ್ ಅಹ್ಮದ್ ಮಂಡಿಸಿದರು. ೨೦೨೬-೨೭ನೇ ಸಾಲಿನಲ್ಲಿ ೩೮ ದತ್ತಿನಿಧಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಅವುಗಳನ್ನು ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ತಾಲೂಕು ಹಾಗೂ ಹೋಬಳಿ ಸಮಿತಿಗಳಿಗೆ ಅಧ್ಯಕ್ಷರು ಸೂಚಿಸಿದರು.
ಸಭೆಯಲ್ಲಿ ಮುಂದಿನ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಯಿತು.
ಸಭೆಯ ಕೊನೆಯಲ್ಲಿ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಮಡಿಕೇರಿ ಘಟಕದ ಬ್ರಹ್ಮಕುಮಾರಿ ಧನಲಕ್ಷ್ಮಿ ಹಾಗೂ ಬ್ರಹ್ಮಕುಮಾರಿ ರಮಾ ಅವರು ಉಪಸ್ಥಿತರಿದ್ದ ಎಲ್ಲರಿಗೂ ರಕ್ಷಾಬಂಧನ ಕಟ್ಟಿ, ರಕ್ಷಾಬಂಧನದ ಮಹತ್ವ ಹಾಗೂ ಸಂದೇಶವನ್ನು ತಿಳಿಸಿದರು.
ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್, ಮಡಿಕೇರಿ ತಾಲೂಕು ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್, ಜಿಲ್ಲಾ ಸಹಕಾರ್ಯದರ್ಶಿ ಎ.ವಿ. ಮಂಜುನಾಥ್, ಜಿಲ್ಲಾ ನಿರ್ದೇಶಕ ಹೆಚ್.ಎಸ್. ಪ್ರೇಮ್ ಕುಮಾರ್, ಐಗೂರು ಹೋಬಳಿ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್, ಕೊಡ್ಲಿಪೇಟೆ ಹೋಬಳಿ ಅಧ್ಯಕ್ಷ ಬಿ.ಪಿ. ಶಾಂತಮಲ್ಲಪ್ಪ, ಸೋಮವಾರಪೇಟೆ ತಾಲೂಕು ಗೌರವ ಕಾರ್ಯದರ್ಶಿ ಎ.ಪಿ. ವೀರರಾಜ್ ಹಾಗೂ ಕುಶಾಲನಗರ ತಾಲೂಕು ಗೌರವ ಕೋಶಾಧಿಕಾರಿ ಕೆ.ವಿ. ಉಮೇಶ್ ಉಪಸ್ಥಿತರಿದ್ದರು.