ಮಡಿಕೇರಿ, ಆ. ೩೧: ಕೊಡಗು ಜಿಲ್ಲೆಯ ಜನತೆಯನ್ನು ಗೊಂದಲ - ಆತಂಕಕ್ಕೆ ಈಡುಮಾಡಿರುವ ಡಾ. ಕಸ್ತೂರಿ ರಂಜನ್ ವರದಿ ವಿಚಾರದಲ್ಲಿ ವಿಸ್ತೃತವಾದ ಚರ್ಚೆಯ ಮೂಲಕ ಮುಂದಿನ ನಿಲುವಿನ ಬಗ್ಗೆ ರೂಪುರೇಷೆಗೆ ತೀರ್ಮಾನ ಕೈಗೊಳ್ಳಲು ಈ ಹಿಂದೆ ರಚನೆಗೊಂಡಿರುವ ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಮೂಲಕ ಸೆಪ್ಟೆಂಬರ್ ೪ ರಂದು ವಿಶೇಷ ಸಭೆ ಕರೆಯಲಾಗಿದೆ. ತಾ. ೪ ರಂದು ಅಪರಾಹ್ನ ೨.೩೦ಕ್ಕೆ ಮಡಿಕೇರಿಯ ಕ್ರಿಸ್ಟಲ್ ಹಾಲ್‌ನಲ್ಲಿ ಸಭೆ ಏರ್ಪಡಿಸಿರುವುದಾಗಿ ಹೋರಾಟ ಸಮಿತಿ ಸಂಚಾಲಕರಾದ ತೀತಿರ ಧರ್ಮಜ ಉತ್ತಪ್ಪ ಅವರು ತಿಳಿಸಿದ್ದಾರೆ.

ಈ ಸಭೆಯಲ್ಲಿ ಸಂಸದರು, ಹಾಲಿ, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಕೊಡವ-ಗೌಡ ಸಮಾಜಗಳ ಒಕ್ಕೂಟ, ವಿವಿಧ ಜನಾಂಗದ ಪ್ರತಿನಿಧಿಗಳು, ರೈತ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಇನ್ನಿತರ ಪ್ರಮುಖರುಗಳು ಭಾಗಿಗಳಾಗಲಿದ್ದು, ಎಲ್ಲರನ್ನೂ ಆಹ್ವಾನಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಪದೇ ಪದೇ ಕಸ್ತೂರಿ ರಂಗನ್ ವರದಿ ವಿಚಾರ ಮರುಕಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಅಧಿವೇಶನದಲ್ಲಿ ಚರ್ಚಿಸುವ ಬಗ್ಗೆ, ಕೇಂದ್ರಕ್ಕೆ ನಿಯೋಗ ತೆರಳುವ ವಿಚಾರ ಸೇರಿದಂತೆ ಇದಕ್ಕೆ ಶಾಶ್ವತವಾದ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲು ಈ ವಿಶೇಷ ಸಭೆಯನ್ನು ಕರೆಯಲಾಗಿದೆ ಎಂದು ಧರ್ಮಜ ಮಾಹಿತಿ ನೀಡಿದ್ದಾರೆ.