ಕುಶಾಲನಗರ, ಆ. ೩೧ : ಮಹಿಳೆಯು ತನ್ನ ಅನುಭವವನ್ನು ಮಾತ್ರ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡುವುದಿಲ್ಲ, ಸಂಸ್ಕೃತಿಗೆ ದಾಖಲೆಯನ್ನು, ಪ್ರಕೃತಿಗೆ ಕಾವ್ಯವನ್ನು, ಬದುಕಿಗೆ ಹೊಸ ಅರ್ಥವನ್ನು ಎಲ್ಲಕ್ಕಿಂತ ಮಿಗಿಲಾಗಿ ತನ್ನ ಗಟ್ಟಿ ಸಾಹಿತ್ಯದ ಧ್ವನಿಯನ್ನು ನೀಡುತ್ತಾಳೆ ಎಂದು ಕವಯಿತ್ರಿ, ಸಾಹಿತಿ ಲೀಲಾಕುಮಾರಿ ತೊಡಿಕಾನ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕುಶಾಲನಗರ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಆಶ್ರಯದಲ್ಲಿ ದಿ.ಪಾಣತ್ತಲೆ ಶ್ರೀ ಅಣ್ಣಯ್ಯ ಮತ್ತು ಚಿನ್ನಮ್ಮ ಸ್ಮರಣಾರ್ಥ ಏರ್ಪಡಿಸಿದ್ದ "ಕೊಡಗಿನಲ್ಲಿ ಕನ್ನಡ ಸಾಹಿತ್ಯ ಬೆಳವಣಿಗೆಗೆ ಮಹಿಳಾ ಸಾಹಿತಿಗಳ ಕೊಡುಗೆಗಳು" ಎಂಬ ದತ್ತಿ ಉಪನ್ಯಾಸ ಮಾಲಿಕೆಯಲ್ಲಿ ಮಹಿಳಾ ಸಾಹಿತಿಗಳ ಸಾಹಿತ್ಯ ರಚನೆ
ಕುರಿತು ಮಾತನಾಡಿದರು.
ಕೊಡಗಿನ ಮಹಿಳಾ ಸಾಹಿತಿಗಳ ಪರಿಚಯದೊಂದಿಗೆ ಕನ್ನಡ ಸಾಹಿತ್ಯಕ್ಕೆ ಅವರದೇ ಆದ ವಿಶೇಷ ಕೊಡುಗೆಗಳನ್ನು ಸ್ಮರಿಸಿಕೊಂಡು ಮಾತನಾಡಿದ ಅವರು, ಕನ್ನಡದ ಮೊದಲ ಕಥೆಗಾರ್ತಿ ಎನಿಸಿದ ಕೊಡಗಿನ ಗೌರಮ್ಮ ಅವರು ಸ್ತ್ರೀವಾದಿ ಮತ್ತು ಭಾರತೀಯ ಸ್ವಾತಂತ್ರ‍್ಯ ಚಳವಳಿಯ ಬೆಂಬಲಿಗರಾಗಿದ್ದರು ಎಂದು ಬಣ್ಣಿಸಿದರು.
ಮಹಿಳಾಪರ ಕಥೆಗಳನ್ನು ಬರೆದು ಮಹಿಳೆಯರಿಗೆ ಆಗುತ್ತಿದ್ದ ಶೋಷಣೆ ವಿರುದ್ಧ ಕಥೆಗಳ ಮೂಲಕ ಧ್ವನಿ ಎತ್ತಿದ ಕಥೆಗಾರ್ತಿ. ಮಹಿಳೆಯರ ಸಾಮಾಜಿಕ ಸಮಾನತೆ ಮತ್ತು ಸ್ವಾತಂತ್ರ‍್ಯಕ್ಕಾಗಿ ಧ್ವನಿ ಎತ್ತಿದವರಲ್ಲಿ ಗೌರಮ್ಮ ಮೊದಲಿಗ ಕಥೆಗಾರ್ತಿ ಎನಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ.ಕೇಶವಕಾಮತ್,
ಕನ್ನಡ ಭಾಷಾಭಿಮಾನದ ಮೂಲಕ ಕುಟುಂಬದ ಹಿರಿಯರ ಹೆಸರಿನಲ್ಲಿ ಠೇವಣಿ ಇಟ್ಟರೆ ಕನ್ನಡ ಸಾಹಿತ್ಯ ಪರಿಷತ್‌ನಿಂದ ಪ್ರತಿ ವರ್ಷ ದತ್ತಿ ಉಪನ್ಯಾಸ ಆಯೋಜಿಸಲಾಗುವುದು. ದತ್ತಿ ಉಪನ್ಯಾಸಗಳು ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಪರಿಚಯಿಸುವುದರೊಂದಿಗೆ ಹೊಸ ವಿಚಾರಗಳನ್ನು ತಿಳಿಸಿ ಕನ್ನಡತನವನ್ನು ಬೆಳೆಸುವ ಕಾರ್ಯ ಮಾಡುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ ಪೆರುಮಾಳ್, ಬಹುಭಾಷೆ ಮಾತನಾಡುವ ಗಡಿಜಿಲ್ಲೆಯಾದ ಕೊಡಗಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಎಲ್ಲಾ ಭಾಷಿಕರೊಂದಿಗೆ ಬೆರೆತು ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿದಿರುವುದು ಹೆಮ್ಮೆಯ ಸಂಗತಿ ಎಂದರು.
ಕನ್ನಡ ಭಾಷೆ ಇಂದು ಜಾತಿ, ಧರ್ಮ ಹಾಗೂ ಗಡಿಯನ್ನು ಮೀರಿ ಬೆಳೆದಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್, ಅತ್ಯಂತ ಶ್ರೀಮಂತ ಕಲೆ, ಸಾಹಿತ್ಯ, ಜನಪದ, ಸಂಸ್ಕೃತಿ ಮತ್ತು ಪರಂಪರೆ ಹೊಂದಿರುವ ಕನ್ನಡ ಭಾಷೆ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು. ದಾನಿ ಸೂದನ ರತ್ನಾವತಿ ಮಾತನಾಡಿದರು, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮೈಸೂರು ವಿಭಾಗದ ಉಪಾಧ್ಯಕ್ಷ ಪಿ.ನವೀನ್ ಕುಮಾರ್, ತಾಲೂಕು ಕ.ಸಾ.ಪ. ಗೌರವ ಕಾರ್ಯದರ್ಶಿ ಟಿ.ವಿ.ಶೈಲಾ, ನಿರ್ದೇಶಕ ಎಂ.ಎನ್. ಕಾಳಪ್ಪ, ಕೋಶಾಧಿಕಾರಿ ಕೆ.ವಿ.ಉಮೇಶ್ , ದತ್ತಿದಾನಿ ಕುಟುಂಬದ ಸದಸ್ಯ ಕೆ. ವೆಂಕಟೇಶ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.