ಕೋವರ್ ಕೊಲ್ಲಿ ಇಂದ್ರೇಶ್

ಬೆAಗಳೂರು, . ೩೧: ಸಾರ್ವಜನಿಕರಿಗೆ ಪ್ರವೇಶಾವಕಾಶವಿರುವ ಕೃಷಿ ಭೂಮಿ ಸೇರಿದಂತೆ ಯಾವುದೇ ಖಾಸಗೀ ಸ್ಥಳವನ್ನು ಮೋಟಾರು ವಾಹನ ಕಾಯ್ದೆಯಡಿ ‘ಸಾರ್ವಜನಿಕ ಸ್ಥಳ’ ಎಂದೇ ಪರಿಗಣಿಸಬೇಕಾಗುತ್ತದೆ ಎಂದಿರುವ ಹೈಕೋರ್ಟ್, ಖಾಸಗಿ ಕೃಷಿ ಜಮೀನಿನಲ್ಲಿ ಅಪಘಾತ ಸಂಭವಿಸಿದೆ ಎಂಬ ಕಾರಣ ನೀಡಿ ವಿಮಾ ಕಂಪನಿ ಪರಿಹಾರ ನೀಡುವ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಅವಕಾಶವಿಲ್ಲ ಎಂದು ತಿಳಿಸಿದೆ.

ಖಾಸಗಿ ಕೃಷಿ ಜಮೀನಿನಲ್ಲಿ ನಡೆದ ವಾಹನ ಅಪಘಾತದಲ್ಲಿ ಮೃತ ಕೃಷ್ಣಪ್ಪ ಎಂಬವರ ಪತ್ನಿ ರಾಮಕ್ಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ. ಜೊತೆಗೆ, ವಿಮಾ ಕಂಪನಿ ನೀಡಬೇಕಾದ ಪರಿಹಾರ ಮೊತ್ತವನ್ನು ಹೆಚ್ಚಿಸಿ ಆದೇಶಿಸಿದೆ.

ಮೋಟಾರು ವಾಹನ ಕಾಯ್ದೆಯಡಿ “ಸಾರ್ವಜನಿಕ ಸ್ಥಳ” ಎಂಬ ವ್ಯಾಖ್ಯಾನವನ್ನು ವಿಸ್ತರಿಸಿರುವ ನ್ಯಾಯಾಲಯ, ಸಾರ್ವಜನಿಕರಿಗೆ ಪ್ರವೇಶಾವಕಾಶವಿರುವ ಖಾಸಗಿ ಜಮೀನು ಕೂಡ ಸಾರ್ವಜನಿಕ ಸ್ಥಳವೇ ಆಗಿರಲಿದೆ. ಅಲ್ಲದೆ, ಕೃಷಿ ಜಮೀನಿಗೆ ಸಾರ್ವಜನಿಕರು ಅಥವಾ ಕಾರ್ಮಿಕರು ಕೆಲಸದ ನಿಮಿತ್ತ ಮುಕ್ತವಾಗಿ ಪ್ರವೇಶಿಸಬಹುದಾದ್ದರಿಂದ, ಅಪಘಾತ ನಡೆದ ಸ್ಥಳವನ್ನು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ ೨(೩೪) ಅನ್ವಯ ಸಾರ್ವಜನಿಕ ಸ್ಥಳ ಎಂದೇ ಪರಿಗಣಿಸಬೇಕು. ಆದ್ದರಿಂದ ವಿಮಾ ಕಂಪನಿ ಪರಿಹಾರಕ್ಕೆ ನೀಡುವ ಜವಾಬ್ದಾರಿ ಹೊಂದಿರಲಿದೆ ಎಂದು ವಿಮಾ ಕಂಪನಿಯನ್ನು ಹೊಣೆಗಾರಿಕೆಯಿಂದ ಮುಕ್ತಗೊಳಿಸಿದ್ದ ಮೋಟಾರು ವಾಹನಗಳ ಅಪಘಾತ ಪರಿಹಾರ ನ್ಯಾಯಮಂಡಳಿ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ಪ್ರಕರಣ ಸಂಬAಧ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಘಟನೆಗೆ ಕಾರಣವಾದ ವಾಹನವು ‘ಪ್ಯಾಕೇಜ್ ಪಾಲಿಸಿ’ (ಅomಠಿಡಿeheಟಿsive Poಟiಛಿಥಿ) ಹೊಂದಿದ್ದರಿAದ ಮೂರನೇ ವ್ಯಕ್ತಿಯ ಜೀವಹಾನಿಗೆ ವಿಮಾ ಕಂಪನಿಯೇ ಜವಾಬ್ದಾರಿಯಾಗುತ್ತದೆ. ಹೀಗಾಗಿ ಅಪಘಾತದಲ್ಲಿ ಮೃತಪಟ್ಟವರ ಪತ್ನಿಗೆ ೪,೫೫,೦೫೨ ಗಳಂತೆ ಶೇ.೬ರ ಬಡ್ಡಿಯೊಂದಿಗೆ ಹೆಚ್ಚುವರಿ ಪರಿಹಾರವನ್ನು ಪಾವತಿಸುವಂತೆ ಶ್ರೀರಾಮ್ ಜನರಲ್ ಇನ್ಶೂರೆನ್ಸ್ ಕಂಪನಿಗೆ ನಿರ್ದೇಶನ ನೀಡಿದೆ.

ಅಷ್ಟೇ ಅಲ್ಲದೆ, ಮೃತ ಕೃಷ್ಣಪ್ಪ ಅವರಿಗೆ ವಿವಾಹವಾಗಿದ್ದು, ಅವರ ಪತ್ನಿ ರಾಮಕ್ಕ (ಅರ್ಜಿದಾರರು) ಜೀವಂತವಾಗಿದ್ದಾರೆ. ಆದರೆ, ನ್ಯಾಯಾಧಿಕರಣ ಮೃತರನ್ನು ಅವಿವಾಹಿತ ಎಂದು ತಪ್ಪಾಗಿ ಪರಿಗಣಿಸಿ ವೈಯಕ್ತಿಕ ಖರ್ಚಿಗೆ ಶೇ.೫೦ ರಷ್ಟು ಕಡಿತಗೊಳಿಸಿದೆ. ಈ ಹಿಂದೆ ವಿಧಿಸಿದ್ದ ೧೪,೩೫,೦೦೦ ಪರಿಹಾರದ ಜೊತೆಗೆ ಹೆಚ್ಚುವರಿಯಾಗಿ ೪,೫೫,೦೫೨ ರೂ. ಸೇರಿಸಿ ಒಟ್ಟು ೧೮,೯೦,೦೫೨ ರೂ. ಪರಿಹಾರವನ್ನು ಶೇ.೬ ರಷ್ಟು ಬಡ್ಡಿಯೊಂದಿಗೆ ವಿಮಾ ಕಂಪನಿಯು ಮುಂದಿನ ೬ ವಾರಗಳ ಒಳಗಾಗಿ ನ್ಯಾಯಮಂಡಳಿಯಲ್ಲಿ ಠೇವಣಿ ಇಡಬೇಕು. ಹೆಚ್ಚುವರಿ ಪರಿಹಾರದ ಸಂಪೂರ್ಣ ಮೊತ್ತವನ್ನು ಮೃತರ ಪತ್ನಿ ರಾಮಕ್ಕ ಅವರಿಗೆ ಬಿಡುಗಡೆ ಮಾಡಬೇಕು ಎಂದು ನ್ಯಾಯಪೀಠ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ : ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಬಳಿಯ ತಲಕಾಯಲ ಬೆಟ್ಟದ ನಿವಾಸಿ ಕೃಷ್ಣಪ್ಪ ಎಂಬವರು ೨೦೧೯ರ ನವೆಂಬರ್ ೨೮ ರಂದು ಚಂದ್ರಪ್ಪ ಎಂಬುವರ ಜಮೀನಿನಲ್ಲಿ ಮರ ಕತ್ತರಿಸುವ ಕೆಲಸಕ್ಕೆ ಹೋಗಿದ್ದರು. ಈ ನಡುವೆ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಕತ್ತರಿಸಿದ ಮರದ ದಿಮ್ಮಿಗಳನ್ನು ತುಂಬಲು ಬಂದಿದ್ದ ಪಿಕಪ್ ಚಾಲಕ, ವಾಹನವನ್ನು ಚಲಿಸುವಾಗ ಕೃಷ್ಣಪ್ಪ ಅವರಿಗೆ ಡಿಕ್ಕಿ ಹೊಡೆಸಿದ್ದ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಕೃಷ್ಣಪ್ಪ ಸಾವನ್ನಪ್ಪಿದ್ದರು.

ಪ್ರಕರಣ ಸಂಬAಧ ವಿಚಾರಣೆ ನಡೆಸಿದ್ದ ಮೋಟಾರು ವಾಹನಗಳ ಅಪಘಾತಗಳ ಪರಿಹಾರ ನ್ಯಾಯ ಮಂಡಳಿಯು, ಅಪಘಾತ ನಡೆದಿರುವುದು ಖಾಸಗಿ ಜಮೀನಿನಲ್ಲಿ ಮತ್ತು ವಾಹನವು ಕೇವಲ ‘ಆಕ್ಟ್ ಪಾಲಿಸಿ’ ಹೊಂದಿದೆ ಎಂದು ತಪ್ಪಾಗಿ ಗ್ರಹಿಸಿ ವಿಮಾ ಕಂಪನಿಯನ್ನು ಹೊಣೆಗಾರಿಕೆಯಿಂದ ಮುಕ್ತಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಕೃಷ್ಣಪ್ಪ ಅವರ ಪತ್ನಿ ರಾಮಕ್ಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.