ಮುಳ್ಳೂರು, ಆ. ೩೦: ಸಹಕಾರಿಗಳು ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡುವುದರಿಂದ ಸಂಘವು ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಆಲೂರು-ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಜೆ. ಪ್ರಸನ್ನ ಕುಮಾರ್ ಅಭಿಪ್ರಾಯಪಟ್ಟರು.
ಆಲೂರು-ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಹಕಾರ ಸಂಘಗಳು ಸದಸ್ಯರ ಸಹಕಾರದಿಂದಲೇ ಅಭಿವೃದ್ಧಿ ಹೊಂದುತ್ತವೆ. ಸದಸ್ಯರು ಸಂಘದಲ್ಲಿ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವುದರೊಂದಿಗೆ ಸಂಘದಲ್ಲಿ ನಿರಂತರವಾಗಿ ವ್ಯವಹಾರ ನಡೆಸಿ, ಸಲಹೆ ಹಾಗೂ ಸಹಕಾರ ನೀಡಬೇಕು. ಇದರಿಂದ ಸಂಘವು ಲಾಭದಾಯಕವಾಗಿ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದರು.
ನಮ್ಮ ಸಂಘವು ಪ್ರಸಕ್ತ ಸಾಲಿನಲ್ಲಿ ರೂ. ೩೫ ಲಕ್ಷಕ್ಕೂ ಅಧಿಕ ನಿವ್ವಳ ಲಾಭ ಗಳಿಸಿದೆ. ಸದಸ್ಯರು ಇದೇ ರೀತಿಯಲ್ಲಿ ಸಹಕರಿಸಿದರೆ ಮುಂದಿನ ದಿನಗಳಲ್ಲಿ ಸಂಘವು ಮತ್ತಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಂಘದ ವಾರ್ಷಿಕ ಲೆಕ್ಕಪತ್ರ ವರದಿಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎಸ್. ಲೀಲಾಕುಮಾರ್ ಮಂಡಿಸಿದರು. ಸಂಘದಲ್ಲಿ ಒಟ್ಟು ೨,೫೭೮ ಸದಸ್ಯರಿದ್ದು, ರೂ. ೧.೬೪ ಕೋಟಿ ಪಾಲು ಬಂಡವಾಳವಿದೆ. ೧೦.೨೭ ಕೋಟಿ ಠೇವಣಿ ಸಂಗ್ರಹವಾಗಿದೆ. ೨೦೨೫-೨೬ನೇ ಸಾಲಿನಲ್ಲಿ ಕೆಡಿಸಿಸಿ ಬ್ಯಾಂಕ್‌ನಿAದ ರೂ. ೧೨.೭೭ ಕೋಟಿ ಸಾಲ ಪಡೆಯಲಾಗಿದೆ. ಇದೇ ಸಾಲಿನಲ್ಲಿ ಸದಸ್ಯರಿಗೆ ರೂ. ೧೩.೧೧ ಕೋಟಿ ಕೆಸಿಸಿ ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು. ಸಂಘದ ವ್ಯಾಪ್ತಿಯಲ್ಲಿ ೯೩ ಸ್ವಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ೨೦೨೫-೨೬ನೇ ಸಾಲಿನಲ್ಲಿ ಸಂಘವು ರೂ. ೩೫,೭೭,೫೭೯ ನಿವ್ವಳ ಲಾಭ ಗಳಿಸಿದೆ ಎಂದು ಲೀಲಾಕುಮಾರ್ ವಿವರಿಸಿದರು.
ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಜಿ. ಹೊನ್ನಪ್ಪ, ನಿರ್ದೇಶಕರಾದ ಎಚ್.ಎಸ್. ಸುಂದರೇಶ್, ಎ.ಜಿ. ವಿಜಯ್, ಎಚ್.ಎಸ್. ವೀಣಾ, ಕೆ.ಇ. ಮಧುಶಂಕರ್, ಕೆ.ಎಸ್. ಜಗದೀಶ್, ಎನ್.ಎಸ್. ಜಗದೀಶ್ವರಸ್ವಾಮಿ, ಯು.ಎನ್. ಕಲಾವತಿ, ಕೆ.ವಿ. ರಾಧಮಣಿ, ಬಿ.ಇ. ಧರ್ಮಪ್ಪ ಹಾಗೂ ಹೆಚ್.ಕೆ. ಮಲ್ಲೇಶ್, ಕೆಡಿಸಿಸಿ ಬ್ಯಾಂಕ್ ಪರ ಮೇಲ್ವಿಚಾರಕ ಬಿ.ಜೆ. ಇಂದ್ರೇಶ್, ಸಂಘದ ಹಿರಿಯ ಲೆಕ್ಕಾಧಿಕಾರಿ ಕೆ.ಡಿ. ಚಂದ್ರಮತಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.