ಶನಿವಾರಸಂತೆ, ಆ.೨೪: ಪಟ್ಟಣದ ಭಾರತಿ ವಿದ್ಯಾಸಂಸ್ಥೆಯಲ್ಲಿ ೨೦೦೮-೧೦ನೇ ಸಾಲಿನ ಪ್ರೌಢಶಾಲೆ ಹಾಗೂ ೨೦೧೧-೧೨ನೇ ಸಾಲಿನ ಪದವಿಪೂರ್ವ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ‘ಅಕ್ಷರ ಋಣ-ಗುರುಗಳಿಗೆ ಕೃತಜ್ಞ ಸಮರ್ಪಣೆ’ ಕಾರ್ಯಕ್ರಮ ಸಂಭ್ರಮದಿAದ ನಡೆಯಿತು.

ವೇದಿಕೆಯಲ್ಲಿದ್ದ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ನಿವೃತ್ತ ಪ್ರಾಂಶುಪಾಲ ಎಂ. ನಾಗೇಶ್ ಮಾತನಾಡಿ, ಗುರುವಂದನೆ ಸಲ್ಲಿಸುತ್ತಿರುವ ಹಳೆಯ ವಿದ್ಯಾರ್ಥಿಗಳು ಇಂದು ವಿವಿಧ ಕ್ಷೇತ್ರಗಳಲ್ಲಿ ಬದುಕು ಕಟ್ಟಿಕೊಂಡು ಭವಿಷ್ಯ ರೂಪಿಸಿಕೊಂಡಿದ್ದಾರೆ. ಹಳೆಯ ವಿದ್ಯಾರ್ಥಿಗಳು ಸಂಘಟಿತರಾಗಿ ಸಹಕಾರ ಬದುಕು ಎಂಬ ಸಂಘ ರಚಿಸಿಕೊಂಡು ಪರಸ್ಪರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಈ ಕಾರ್ಯಕ್ಕೆ ಶಿಕ್ಷಕರ ಸಹಕಾರವನ್ನೂ ಪಡೆಯಬಹುದು ಎಂದು ಕರೆ ನೀಡಿದರು.

ನಿವೃತ್ತ ಪ್ರಾಂಶುಪಾಲ ಸಿ.ಎಂ. ಪುಟ್ಟಸ್ವಾಮಿ ಮಾತನಾಡಿ, ಜೀವನದಲ್ಲಿ ಮಾತೃಋಣ, ಪಿತೃಋಣ ಹಾಗೂ ಆಚಾರ್ಯಋಣವನ್ನು ಸಂಪೂರ್ಣವಾಗಿ ತೀರಿಸಲು ಸಾಧ್ಯವಿಲ್ಲ. ಇಲ್ಲಿ ಋಣ ತೀರಿಸುವುದಕ್ಕಿಂತಲೂ ಈ ಮೂವರನ್ನೂ ಪ್ರತಿಯೊಬ್ಬರ ಬದುಕಿನಲ್ಲಿ ನಿತ್ಯ ಸ್ಮರಣೀಯರನ್ನಾಗಿ ಮಾಡಿಕೊಳ್ಳಬೇಕು ಎಂದರು.

ಸಾಹಿತಿ ಹಾಗೂ ಪತ್ರಕರ್ತೆ ಶ.ಗ. ನಯನತಾರಾ ಮಾತನಾಡಿ, ತಂದೆ-ತಾಯಿಯೊAದಿಗೆ ಗುರುವನ್ನೂ ದೇವರಂತೆ ಕಾಣುವ ಸಂದೇಶವಿದೆ. ತಾಯಿ ಮಗುವಿಗೆ ಜನ್ಮ ನೀಡಿ ಜೀವ ನೀಡಿದರೆ, ಗುರು ವಿದ್ಯಾರ್ಥಿಯ ಜೀವನವನ್ನು ರೂಪಿಸುತ್ತಾರೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಸ್ತು, ವಿನಯ ಹಾಗೂ ವಿಧೇಯತೆಯನ್ನು ಕಲಿಸಿದರೆ, ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಮನೆಯೊಳಗೆ ತಾಯಿಯೇ ಕಲಿಸಬೇಕು ಎಂದರು.

ಹಳೆಯ ವಿದ್ಯಾರ್ಥಿಗಳಾದ ಧನ್ಯಶ್ರೀ, ಕಾರ್ತಿಕ್, ಸಚಿನ್, ಸುರಭಿ ಮತ್ತಿತರರು ಅನಿಸಿಕೆಗಳನ್ನು ಹಂಚಿಕೊAಡರು. ಒಡೆಯನಪುರ ಸುರೇಶ್ ಹಾಗೂ ಧನ್ಯಶ್ರೀ ಗಾಯನದ ಮೂಲಕ ಕಾರ್ಯಕ್ರಮವನ್ನು ರಂಜಿಸಿದರು.

ನಿವೃತ್ತ ಉಪಪ್ರಾಂಶುಪಾಲ ಜಿ.ಬಿ. ನಾಗಪ್ಪ, ನಿವೃತ್ತ ಉಪನ್ಯಾಸಕ ಎಚ್.ಕೆ. ರಾಮನಂಜಯ್ಯ, ಪ್ರಾಂಶುಪಾಲ ಎಸ್.ಜೆ. ಅಶೋಕ್, ಹಿರಿಯ ಶಿಕ್ಷಕ ಪಿ. ನರಸಿಂಹಮೂರ್ತಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಪುಟ್ಟಸ್ವಾಮಿ ಹಾಗೂ ನಿವೃತ್ತ ಶಿಕ್ಷಕ ವಿ. ರಂಗಸ್ವಾಮಿ ಮಾತನಾಡಿದರು.

ವಿದ್ಯಾಸಂಸ್ಥೆಯ ಶಿಕ್ಷಕರಾದ ಸಿ.ಆರ್. ಗೋಪಾಲ್, ಎಚ್.ಎನ್. ಮಂಗಳಾ, ಬಿ.ವಿ. ಸುಮಾ, ಹಸೀನಾ ಬಾನು ಹಾಗೂ ಸೋಮಶೇಖರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗುರುವೃಂದದವರನ್ನು ಸನ್ಮಾನಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.