ವಿರಾಜಪೇಟೆಯ ಗೌರಿ-ಗಣೇಶೋತ್ಸವದ ಮಲೆತಿರಿಕೆ ಬೆಟ್ಟದ ಪರಿಸರದಲ್ಲಿ ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಜನಮಾನಸದಲ್ಲಿ ನಿಂತಿರುವ ಕಣ್ಮಣಿ ವಿನಾಯಕ ಉತ್ಸವ ಸಮಿತಿ ೩೨ ವರ್ಷಗಳ ಸಾರ್ಥಕ ಪಯಣದಲ್ಲಿದೆ.

ಕಳೆದ ೩೧ ವರ್ಷಗಳಿಂದ ಧಾರ್ಮಿಕ ವೈಭವವನ್ನು ಪಸರಿಸುತ್ತಾ ಬಂದಿದ್ದು, ಬೆಟ್ಟದಲ್ಲಿರುವ ‘ಆಶಾ ವಿಕಾಸ ಕೇಂದ್ರ’ದಲ್ಲಿ ಅತ್ಯಂತ ವಿಜೃಂಭಣೆಯಿAದ ಪ್ರತಿಷ್ಠಾಪಿಸಲು ಸಜ್ಜಾಗಿದೆ. ಆರಂಭದ ದಿನಗಳಲ್ಲಿ ಸತೀಶ್, ಸಂಪತ್, ಗೋಪಾಲಕೃಷ್ಣ ಹಾಗೂ ಸಂತೋಷ್ ಅವರು ಸೇರಿ ಈ ಧಾರ್ಮಿಕ ಆಚರಣೆಗೆ ಚಾಲನೆ ನೀಡಿದ್ದರು. ಸಂಸ್ಥಾಪಕ ಅಧ್ಯಕ್ಷರಾಗಿ ಗೋಪಾಲಕೃಷ್ಣ ಅವರು ಉತ್ಸವಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ಪ್ರಸ್ತುತ ಸಮಿತಿಯಲ್ಲಿ ಸುಮಾರು ೫೦ ಸಕ್ರಿಯ ಸದಸ್ಯರಿದ್ದು, ಅಧ್ಯಕ್ಷರಾಗಿ ಸತೀಶ್, ಕಾರ್ಯದರ್ಶಿಯಾಗಿ ದರ್ಶನ್ ಹಾಗೂ ಉಪಾಧ್ಯಕ್ಷರಾಗಿ ಪ್ರಶಾಂತ್ ಸಮಿತಿಯನ್ನು ಮುನ್ನಡೆಸುತ್ತಿದ್ದಾರೆ.

ಸ್ಥಳೀಯ ಕಲಾವಿದರು ಹಾಗೂ ಮಕ್ಕಳಿಗೆ ತಮ್ಮ ಕಲಾಪ್ರದರ್ಶನ ನೀಡುವ ನಿಟ್ಟಿನಲ್ಲಿ ಭರತನಾಟ್ಯ, ನೃತ್ಯ ಹಾಗೂ ವಿವಿಧ ಸಾಂಸ್ಕöÈತಿಕ ಸ್ಪರ್ಧೆಗಳನ್ನು ಆಯೋಜಿಸುತ್ತಾ ಬರಲಾಗಿದೆ. ರಕ್ತದಾನ ಸೇವೆ ಮತ್ತು ಸಾಮಾಜಿಕ ಕಳಕಳಿ, ಸಾಮಾಜಿಕ ಸೇವೆಯಲ್ಲೂ ಈ ಸಮಿತಿ ಮಾದರಿಯಾಗಿದೆ.

ಸಮಿತಿಯ ಸದಸ್ಯರೆಲ್ಲರೂ ಸೇರಿ ವಿಶೇಷ ಗ್ರೂಪ್‌ವೊಂದನ್ನು ರಚಿಸಿಕೊಂಡಿದ್ದು, ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ರಕ್ತದ ಅವಶ್ಯಕತೆ ಇದ್ದಾಗ ತಕ್ಷಣವೇ ಸ್ಪಂದಿಸಿ ರಕ್ತದಾನ ಮಾಡುವ ಮಹತ್ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಈ ಬಾರಿಯೂ ಉತ್ಸವದ ಅಂಗವಾಗಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸುವ ಉದ್ದೇಶ ಹೊಂದಿದೆ.

ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಬಾರಿ ಅಗತ್ಯವಿರುವ ಮಕ್ಕಳಿಗೆ ಉಚಿತ ಪುಸ್ತಕಗಳು ಹಾಗೂ ಶಾಲಾ ಬ್ಯಾಗ್‌ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಸಮಿತಿ ಹಮ್ಮಿಕೊಂಡಿದೆ.

- ರಜಿತ ಕಾರ್ಯಪ್ಪ,

ವೀರಾಜಪೇಟೆ.

ಮೊ: ೯೪೮೧೭೭೧೮೫೧