ವೀರಾಜಪೇಟೆ, ಆ. ೨೯: ಸಿದ್ದಾಪುರದ ಗುಹ್ಯ ಅಗಸ್ತೇಶ್ವರ ಸಹಕಾರ ಸಂಘದ ಭವನದಲ್ಲಿ ತೋಟ ಕಾರ್ಮಿಕರ ಸಂಘಟನೆಯ ರಾಜ್ಯಮಟ್ಟದ ಕಾರ್ಯಾಗಾರ ನಡೆಯಿತು.

ಇದರಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ವರಲಕ್ಷಿö್ಮ ಅವರು, ಕನಿಷ್ಟ ವೇತನ ಜಾರಿಗೆ ಆಗ್ರಹಿಸಿ ಸೆಪ್ಟೆಂಬರ್ ೮ರ ರಾಜ್ಯಮಟ್ಟದ ಹೋರಾಟದ ಜೊತೆಗೆ ಸೆಪ್ಟೆಂಬರ್ ೧೮ ರಿಂದ ೨೧ ರವರೆಗೆ ನಾಲ್ಕು ದಿನಗಳ ಕಾಲ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಧರಣಿ ನಡೆಯಲಿದೆ ಎಂದರು.

ನಿಯಮಗಳ ಪ್ರಕಾರ ಪ್ರತಿ ೫ ವರ್ಷಕ್ಕೊಮ್ಮೆ ಕನಿಷ್ಟ ವೇತನ ಪರಿಷ್ಕರಣೆಯಾಗಬೇಕು. ಆದರೆ ಕಳೆದ ೮ ವರ್ಷಗಳಿಂದ ಸರ್ಕಾರ ಇದನ್ನು ಪರಿಷ್ಕರಿಸಿಲ್ಲ. ಒಬ್ಬ ಕಾರ್ಮಿಕ ಹಾಗೂ ಆತನ ಕುಟುಂಬದ ಸದಸ್ಯರಿಗೆ ದಿನಕ್ಕೆ ೨,೭೦೦ ಕ್ಯಾಲೋರಿ ಆಹಾರ, ಮನೆ ಬಾಡಿಗೆ, ಶಿಕ್ಷಣ, ವೈದ್ಯಕೀಯ, ವಿದ್ಯುತ್ ಹಾಗೂ ಮನರಂಜನಾ ವೆಚ್ಚಗಳನ್ನು ಸೇರಿಸಿ ವೈಜ್ಞಾನಿಕವಾಗಿ ಕನಿಷ್ಟ ವೇತನ ನಿಗದಿಯಾಗಬೇಕು ಎಂದು ಹೈಕೋರ್ಟ್ನಲ್ಲೂ ವಾದ ಮಂಡಿಸಲಾಗಿದೆ. ಆದರೆ ಇದನ್ನು ಪಾಲಿಸದ ಸರ್ಕಾರ ಮತ್ತು ಮಾಲೀಕರ ಈ ಧೋರಣೆಯನ್ನು ವಿರೋಧಿಸಿ ಸೆಪ್ಟೆಂಬರ್ ೧೮, ೧೯, ೨೦ ಮತ್ತು ೨೧ ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ಧರಣಿ ನಡೆಯಲಿದೆ ಎಂದರು.

ಸಿಐಟಿಯು ಕೊಡಗು ಜಿಲ್ಲಾ ಅಧ್ಯಕ್ಷ ಎ.ಸಿ. ಸಾಬು ಮಾತನಾಡಿ, ದೇಶವು ೮೦ನೇ ಸ್ವಾತಂತ್ರ÷್ಯ ದಿನಾಚರಣೆಯನ್ನು ಆಚರಿಸುವ ಈ ಸಂದರ್ಭದಲ್ಲೂ ಕೊಡಗು ಸೇರಿದಂತೆ ಕರ್ನಾಟಕದ ತೋಟ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ರಾಜ್ಯ ಸರಕಾರದ ಮುಂದೆ ಕೈಚಾಚುವ ದಯನೀಯ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶಕ್ಕೆ ಸ್ವಾತಂತ್ರ÷್ಯ ಬಂದು ದಶಕಗಳೇ ಕಳೆದರೂ ತೋಟ ಕಾರ್ಮಿಕರಿಗೆ ಇಂದಿಗೂ ಕನಿಷ್ಟ ವೇತನ ಜಾರಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ತೋಟ ಕಾರ್ಮಿಕರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮಹಾದೇವ ಮಾತನಾಡಿ, ಕಾರ್ಮಿಕ ಕಾಯೆಯ ಪ್ರಕಾರ ೧೨.೫ ಎಕರೆಗಿಂತ ಮೇಲ್ಪಟ್ಟ ಜಮೀನು/ಎಸ್ಟೇಟ್ ಹೊಂದಿರುವ ಪ್ರತಿಯೊಬ್ಬ ಮಾಲೀಕರು ಕಾರ್ಮಿಕ ಕಾಯ್ದೆಯಡಿ ಬರುತ್ತಾರೆ ಎಂದರು.

ಸಿಐಟಿಯು ರಾಜ್ಯ ಉಪಾಧ್ಯಕ್ಷ ಧರ್ಮೇಶ್, ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ತೋಟ ಕಾರ್ಮಿಕ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎನ್.ಡಿ. ಕುಟ್ಟಪ್ಪ, ಕಾರ್ಯದರ್ಶಿ ಸೌಮ್ಯ, ಸದಸ್ಯರಾದ ಟಿ. ರಮೇಶ್ ಸೇರಿದಂತೆ ಇತರರು ಇದ್ದರು.