ಶ್ರೀಮAಗಲ, ಆ. ೨೯: ೨೦೧೪ರಲ್ಲಿ ನಾಲ್ಕೇರಿ ಪಂಚಾಯಿತಿಯಿAದ ವಿಭಜನೆಗೊಂಡು ನೂತನ ಪಂಚಾಯಿತಿಯಾಗಿ ಅಸ್ತಿತ್ವಕ್ಕೆ ಬಂದಿದ್ದ ಕೆ. ಬಾಡಗ ಗ್ರಾಮ ಪಂಚಾಯಿತಿಗೆ ಕೆ.ಬಾಡಗ ಮಹಿಳಾ ಸಾಂಸ್ಕೃತಿಕ ಕೇಂದ್ರವು ಸರ್ಕಾರದ ಜಾಗ ಗುತ್ತಿಗೆ ಪಡೆದು ನಿರ್ಮಿಸಿದ್ದ ೨ ಕಟ್ಟಡವನ್ನು ಹೊಸ ಕಟ್ಟಡದ ಬದಲಿಗೆ ಸರ್ಕಾರ ನಿಗದಿಪಡಿಸಿದ ಕಟ್ಟಡ ವೆಚ್ಚ ರೂ. ೧೮.೧೧ ಲಕ್ಷ ಅನುದಾನ ಒದಗಿಸಿ ಹಿಂಪಡೆಯಲಾಗಿದ್ದು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಮತ್ತು ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಶನಿವಾರ ಉದ್ಘಾಟಿಸಿದರು.
ಆಡಳಿತ ಕಚೇರಿ ಮತ್ತು ಸಭಾಂಗಣವನ್ನು ಪ್ರತ್ಯೇಕವಾಗಿ ಉದ್ಘಾಟಿಸಿ ಮಾತನಾಡಿದ ಪೊನ್ನಣ್ಣ ಅವರು ಒಂದು ಪಂಚಾಯಿತಿಗೆ ತನ್ನದೇ ಆದಂತಹ ಕಚೇರಿ ಮತ್ತು ಸಭಾಂಗಣ ಇರಬೇಕು ಕೆ. ಬಾಡಗ ಗ್ರಾಮ ಪಂಚಾಯಿತಿ ಮನವಿಯಂತೆ ಹಳೆಯ ಕಚೇರಿಗೆ ತೆರಳಿದ ಸಂದರ್ಭ ಅಲ್ಲಿ ಬಹಳಷ್ಟು ಅವ್ಯವಸ್ಥೆ ಕಂಡು ಬಂದಿತ್ತು. ೨೦೧೪ರಲ್ಲಿ ನಾಲ್ಕೇರಿ ಪಂಚಾಯಿತಿ ವಿಭಜನೆಯಾಗಿ ಹೊಸದಾಗಿ ಕೆ.ಬಾಡಗ ಪಂಚಾಯಿತಿ ಅಸ್ತಿತ್ವಕ್ಕೆ ಬಂದಿತ್ತು. ಆದರೆ, ಈ ೧೨ ವರ್ಷದಲ್ಲಿ ಎರಡು ಮೂರು ಸರಕಾರ ಬಂದರೂ ಮೂಲಭೂತವಾದ ಆಡಳಿತ ಕಚೇರಿಯನ್ನು ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ಪಂಚಾಯಿತಿಗಳ, ತಾಲೂಕುಗಳ ವಿಭಜನೆ ಮಾಡಿ, ಹೊಸದಾಗಿ ಅಸ್ತಿತ್ವಕ್ಕೆ ತರುವುದು ಸುಲಭ. ಆದರೆ ಪಂಚಾಯಿತಿಗೆ ಮೂಲ ಸೌಕರ್ಯ ಒದಗಿಸುವುದು ಮುಖ್ಯವಾಗುತ್ತದೆ. ಎಲ್ಲಾ ಸೌಲಭ್ಯ ನೀಡಲು ತಕ್ಷಣಕ್ಕೆ ಸಾಧ್ಯವಿಲ್ಲ, ಆರ್ಥಿಕ ಇಲಾಖೆಯ ಅನೇಕ ಶಿಸ್ತುಗಳು ಅನುಮೋದನೆಗಳು ಬೇಕಾಗುತ್ತವೆ. ಆದರೆ ೧೦-೧೫ ವರ್ಷ ಮೂಲಭೂತ ಸೌಲಭ್ಯ ಒದಗಿಸದಿದ್ದರೆ ಅಲ್ಲಿ ಕೆಲಸ ಹೇಗೆ ಮಾಡಬೇಕು ಎಂದು ಪೊನ್ನಣ್ಣ ಅವರು ಪ್ರಶ್ನಿಸಿದರು.
ಸ್ಥಳೀಯ ಅಭಿವೃದ್ಧಿ, ಸಮಸ್ಯೆಗಳನ್ನು ಸ್ಥಳೀಯ ಪಂಚಾಯಿತಿಗಳಲ್ಲಿ ಬಗೆಹರಿಸಿಕೊಳ್ಳಲು ಸ್ಪಂದಿಸಲು ಆಡಳಿತ ಕಚೇರಿ ಬೇಕಾಗುತ್ತದೆ. ಪಂಚಾಯಿತಿ ಕಟ್ಟಡ ಇಲ್ಲದಿದ್ದ ಸಂದರ್ಭ ಕುಟ್ಟ ಕೊಡವ ಸಮಾಜದ ಅಧ್ಯಕ್ಷ ವಿಷ್ಣು ಕಾರ್ಯಪ್ಪ, ಕೆ. ಬಾಡಗ ಮಹಿಳಾ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷೆ ಶಾಲಿನಿ ಕಾರ್ಯಪ್ಪ ಅವರು ನಮ್ಮ ಸಾಂಸ್ಕೃತಿಕ ಕೇಂದ್ರದ ಕಟ್ಟಡವನ್ನು ಸರ್ಕಾರಿ ಜಾಗದಲ್ಲಿ ಗುತ್ತಿಗೆ ಆಧಾರದಲ್ಲಿ ನಿರ್ಮಿಸಿದ್ದು, ಇದನ್ನು ಹಸ್ತಾಂತರಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಇದರಂತೆ ಅವರ ಗುತ್ತಿಗೆ ಅವಧಿ ೨೦೪೦ ಇಸವಿವರೆಗೆ ಇದ್ದರೂ ಸಹ ಅದನ್ನು ಲೋಕೋಪಯೋಗಿ ಇಲಾಖೆ ನಿಗದಿಪಡಿಸಿದ ಮೊತ್ತ ಹೊಂದಿಕೊAಡು ಹಸ್ತಾಂತರಿಸಲು ಸಮ್ಮತಿಸಿದ ಹಿನ್ನೆಲೆ ಸರ್ಕಾರದಿಂದ ರೂ.೧೮.೧೧ ಲಕ್ಷ ಅನುದಾನ ಮಂಜೂರು ಮಾಡಿ ಗ್ರಾಮ ಪಂಚಾಯಿತಿಗೆ ಒಂದು ಆಡಳಿತ ಕಚೇರಿ ಮತ್ತು ಸುಸಜ್ಜಿತ ಸಭಾಂಗಣವನ್ನು ಒದಗಿಸಲಾಗಿದೆ ಎಂದರು.
ಕೆ. ಬಾಡಗ ಮಹಿಳಾ ಸಾಂಸ್ಕೃತಿಕ ಕೇಂದ್ರಕ್ಕೆ ರೂ ೩ ಲಕ್ಷ ವೈಯಕ್ತಿಕ ಅನುದಾನವನ್ನು ಹೊಸ ಕಟ್ಟಡ ನಿರ್ಮಿಸಲು ಜಾಗ ಖರೀದಿಸಲು ನೀಡುವುದಾಗಿ ನಂತರ ಕಟ್ಟಡ ನಿರ್ಮಾಣಕ್ಕೆ ಸರಕಾರದಿಂದ ಸಾಧ್ಯವಾದ ಅನುದಾನ ಒದಗಿಸುವುದಾಗಿ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷೆ ಶಾಲಿನಿ ಕಾರ್ಯಪ್ಪ ಅವರ ಮನವಿಗೆ ಶಾಸಕ ಪೊನ್ನಣ್ಣ ಭರವಸೆ ನೀಡಿದರು.
ಇದಕ್ಕೂ ಮೊದಲು ನೂತನ ಸಭಾಂಗಣವನ್ನು ಕೊಡವ ಸಮಾಜ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಶಾಸಕರೊಂದಿಗೆ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಕಳೆದ ೧೨ ವರ್ಷಗಳಿಂದ ಪಂಚಾಯಿತಿಗಿದ್ದ ಆಡಳಿತ ಕಚೇರಿ ಮತ್ತು ಸಭಾಂಗಣದ ಕೊರತೆ ಶಾಸಕ ಪೊನ್ನಣ್ಣ ಅವರ ವಿಶೇಷ ಪ್ರಯತ್ನದಿಂದ ನೀಗಿದಂತಾಗಿದೆ ಎಂದರು.
ಈ ಸಂದರ್ಭ ಮಾತನಾಡಿದ ಕೆ. ಬಾಡಗ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚೆಪ್ಪುಡಿರ ಡಿ. ಬೋಪಣ್ಣ ೨೦೧೪ ರಿಂದ ಪಂಚಾಯಿತಿಯ ಸದಸ್ಯನಾಗಿ, ಉಪಾಧ್ಯಕ್ಷನಾಗಿ ಸ್ವಂತ ಕಟ್ಟಡವನ್ನು ಪಂಚಾಯಿತಿಗೆ ನಿರ್ಮಿಸಲು ಬಹಳಷ್ಟು ಪ್ರಯತ್ನಿಸಿದ್ದು, ತುಂಬಾ ಕಷ್ಟವಾದ್ದರಿಂದ ಈ ಕನಸನ್ನು ಕೈ ಬಿಡಲಾಗಿತ್ತು. ಆದರೆ ಶಾಸಕ ಪೊನ್ನಣ್ಣ ಅವರ ವಿಶೇಷ ಮುತುವರ್ಜಿಯಿಂದ ಇದೀಗ ಅತ್ಯಂತ ಸೂಕ್ತ ಹಾಗೂ ವಿಶಾಲವಾದ ಸಭಾಂಗಣ ಮತ್ತು ಆಡಳಿತ ಕಚೇರಿಯನ್ನು ಹೊಂದಿಕೊಳ್ಳಲು ಸಾಧ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇದೇ ಸಂದರ್ಭ ಗ್ರಾಮ ಪಂಚಾಯಿತಿಯಿAದ ಶಾಸಕ ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಪೊನ್ನಂಪೇಟೆ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ರಾಜೇಶ್ ಆರ್.ಕೆ, ಕೆ.ಬಾಡಗ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಮುಕ್ಕಾಟಿರ ಬಿದ್ದಪ್ಪ, ಕೊಡವ ಸಮಾಜ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ,ಕೆ. ಬಾಡಗ ಮಹಿಳಾ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷೆ ಕಳ್ಳಿಚಂಡ ಶಾಲಿನಿ ಕಾರ್ಯಪ್ಪ,ಪಿಡಿಒ ಅರುಣ್ ಭಾಸ್ಕರ್, ಉಪಸ್ಥಿತರಿದ್ದರು. ಕಾರ್ಯದರ್ಶಿ ಕಾಳಪ್ಪ ಕೆ.ಡಿ ಸ್ವಾಗತಿಸಿ ಸಹ ಶಿಕ್ಷಕಿ ಸೌಮ್ಯ ನಿರೂಪಿಸಿ ವಂದಿಸಿದರು.
ಪೊನ್ನAಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಕೆ. ಬಾಡಗ ವಲಯ ಕಾಂಗ್ರೆಸ್ ಅಧ್ಯಕ್ಷ ಚಿಮ್ಮಣಮಾಡ ರವಿ, ಗ್ರಾ.ಪಂ. ಮಾಜಿ ಅಧ್ಯಕ್ಷೆ ಉಷಾ, ಗ್ರಾ.ಪಂ. ಮಾಜಿ ಸದಸ್ಯ ಮುಕ್ಕಾಟಿರ ನವೀನ್ ಅಯ್ಯಪ್ಪ, ತಾ.ಪಂ. ಮಾಜಿ ಸದಸ್ಯ ಪಲ್ವಿನ್ ಪೂಣಚ್ಚ, ಪ್ರಮುಖರಾದ ಮೋಹನ್ ದಾಸ್, ಪೂವಯ್ಯ, ಕೆ.ಕೆ ನಟರಾಜ್, ಕಾವೇರಮ್ಮ, ಕಾಳ, ಮಣಿ ಮತ್ತಿತರರು ಪಾಲ್ಗೊಂಡಿದ್ದರು
-ಹರೀಶ್ ಮಾದಪ್ಪ