*ಗೋಣಿಕೊಪ್ಪ, ಆ. ೨೯: ೪೮ನೇ ವರ್ಷದ ಗೋಣಿಕೊಪ್ಪ ದಸರಾ ಜನೋತ್ಸವಕ್ಕೆ ಒದಗಿಸಿರುವ ಒಂದು ಕೋಟಿ ರೂ. ಅನುದಾನದಲ್ಲಿ ದಶಮಂಟಪಗಳಿಗೆ ಹೆಚ್ಚಿನ ಆರ್ಥಿಕ ನೆರವು ನೀಡುವ ಭರವಸೆಯನ್ನು ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ನೀಡಿದ್ದಾರೆ.
ದಶಮಂಟಪಗಳ ಸಮಿತಿ ಅಧ್ಯಕ್ಷ ಕಾಡ್ಯಮಾಡ ಚೇತನ್ ಹಾಗೂ ತಂಡ ವೀರಾಜಪೇಟೆಯಲ್ಲಿರುವ ಶಾಸಕರ ಗೃಹ ಕಚೇರಿಯಲ್ಲಿ ಶಾಸಕರನ್ನು ಭೇಟಿ ಮಾಡಿ, ದಸರಾ ಆಚರಣೆಗೆ ಒಂದು ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದಕ್ಕಾಗಿ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಕಾಡ್ಯಮಾಡ ಚೇತನ್, ದಸರಾಕ್ಕೆ ಸಂಬAಧಿಸಿದAತೆ ಹಲವು ಬೇಡಿಕೆಗಳನ್ನು ಶಾಸಕರಿಗೆ ಸಲ್ಲಿಸಿದರು. ಪ್ರಮುಖವಾಗಿ ಪ್ರತಿ ಸಮಿತಿಗೆ ರೂ. ೫ ಲಕ್ಷ ಅನುದಾನ ಒದಗಿಸಿಕೊಡಬೇಕೆಂದು ಮನವಿ ಮಾಡಲಾಯಿತು. ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿದ ಶಾಸಕರು, ಬೇಡಿಕೆಗೆ ಅನುಗುಣವಾಗಿ ಧನಸಹಾಯ ಒದಗಿಸುವ ಭರವಸೆ ನೀಡಿದರು.
ಅರುವತೋಕ್ಲು ಕಾಡ್ಲಯಪ್ಪ ದಸರಾ ಸಮಿತಿ ಅಧ್ಯಕ್ಷ ಶಾಜಿ ಅಚ್ಚುತನ್ ಮಾತನಾಡಿ, ಕಳೆದ ಬಾರಿ ಬಂದ ರೂ.೭೫ ಲಕ್ಷ ಅನುದಾನದಲ್ಲಿ ಪ್ರತಿ ಸಮಿತಿಗೆ ರೂ.೨.೩೦ ಲಕ್ಷ ನೀಡುವ ಭರವಸೆ ನೀಡಲಾಗಿತ್ತು. ಆದರೂ ಅದನ್ನು ನೀಡದೆ ಕೇವಲ ರೂ.೨ ಲಕ್ಷವನ್ನಷ್ಟೇ ನೀಡಲಾಗಿದೆ. ಇದರಿಂದ ಸಮಿತಿಗಳಿಗೆ ಬಹುದೊಡ್ಡ ಆರ್ಥಿಕ ನಷ್ಟ ಉಂಟಾಗಿದೆ ಎಂದು ಶಾಸಕರ ಗಮನ ಸೆಳೆದರು. ಈ ಬಾರಿಯೂ ಅಂತಹ ವ್ಯವಸ್ಥೆ ಮರುಕಳಿಸಬಾರದು ಎಂದು ಶಾಸಕರಲ್ಲಿ ಮನವಿ ಮಾಡಿಕೊಂಡರು.
ಸರ್ವರ ದಸರಾ ಸಮಿತಿ ಗೌರವಾಧ್ಯಕ್ಷ ಮುರುಗ ಹೆಚ್.ಬಿ. ಮಾತನಾಡಿ, ದಸರಾ ಆಚರಣೆಯಲ್ಲಿ ಬದಲಾವಣೆಯ ಅಗತ್ಯವಿದೆ. ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಆಡಳಿತ ಇಲ್ಲದಿರುವುದರಿಂದ ಶಾಸಕರ ಅಧ್ಯಕ್ಷತೆಯ ಮುಂದಾಳತ್ವದಲ್ಲಿ ಗೋಣಿಕೊಪ್ಪ ದಸರಾ ಆಚರಣೆ ನಡೆಯಬೇಕು. ಹೀಗೆ ನಡೆದಾಗ ದಸರಾ ಆಚರಣೆಗೆ ಹೊಸ ರೂಪ ನೀಡಲು ಸಾಧ್ಯವಾಗುತ್ತದೆ ಎಂದು ಶಾಸಕರಲ್ಲಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಮುರುಗ ಗ್ರಾಮ ಪಂಚಾಯಿತಿ ಆಡಳಿತ ಇಲ್ಲದಿರುವುದರಿಂದ ಸರ್ಕಾರದ ಪ್ರತಿನಿಧಿಯಾಗಿ ದಸರಾ ಆಚರಣೆಗೆ ಈ ಬಾರಿ ಗ್ಯಾರಂಟಿ ಅನುಷ್ಠಾನ ಸಮಿತಿಯನ್ನು ಪರಿಗಣನೆಗೆ ತೆಗೆದುಕೊಂಡು, ವಿವಿಧ ಸಂಘಟನೆಗಳು ಒಂದಾಗಿ ದಸರಾ ಆಚರಣೆ ಮಾಡಿದಾಗ ಉತ್ಸವಕ್ಕೆ ಮತ್ತಷ್ಟು ವಿಸ್ತಾರ ಮತ್ತು ಉತ್ಸಾಹ ದೊರೆಯಲಿದೆ ಎಂದು ಮಾಹಿತಿ ನೀಡಿದರು.
ಕಾಡ್ಲಯಪ್ಪ ದಸರಾ ಸಮಿತಿ ಕಾರ್ಯದರ್ಶಿ ಮಲ್ಲಂಡ ಧ್ಯಾನ್, ದಶಮಂಟಪಗಳ ಕಾರ್ಯದರ್ಶಿ ಸಜನ್, ಸರ್ವರ ದಸರಾ ಸಮಿತಿ ಅಧ್ಯಕ್ಷ ಟಿ.ಎನ್. ಗೋವಿಂದಪ್ಪ ಇದ್ದರು.