ವೀರಾಜಪೇಟೆ, ಆ. ೨೮: ಕ್ರೀಡೆ ಎಂಬುದು ಹಲವು ಮೌಲ್ಯಗಳನ್ನು ಒಳಗೊಂಡ ಕ್ಷೇತ್ರವಾಗಿದೆ. ಕ್ರೀಡೆಯಲ್ಲಿರುವ ಮೌಲ್ಯಗಳನ್ನು ಎತ್ತಿ ಹಿಡಿಯುವುದೇ ಆಟೋಟ-ಸ್ಪರ್ಧೆಗಳ ಉದ್ದೇಶ ಎಂದು ನಿವೃತ್ತ ಪ್ರಾಂಶುಪಾಲೆ ತಾತಂಡ ಜ್ಯೋತಿ ಪ್ರಕಾಶ್ ಹೇಳಿದ್ದಾರೆ.
ವೀರಾಜಪೇಟೆಯ ಸರಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಆಶ್ರಯದ ವೀರಾಜಪೇಟೆ ಹೋಬಳಿ ಮಟ್ಟದ ವಾರ್ಷಿಕ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಸಾಮಾಜಿಕ ಕಾರ್ಯಕರ್ತ ಪಿ.ಕೆ. ಅಬ್ದುಲ್ ರೆಹೆಮಾನ್ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಮತ್ತೊಬ್ಬ ಅತಿಥಿ ನಿವೃತ್ತ ಬ್ಯಾಂಕ್ ಅಧಿಕಾರಿ ಪಿ.ಎಂ. ಶರೀಫ್ ಕ್ರೀಡಾ ಜ್ಯೋತಿ ಬೆಳಗಿದರು. ಕ್ರೀಡಾಕೂಟದ ಈ ವರ್ಷದ ಪ್ರಾಯೋಜಕ ಸಂಸ್ಥೆಯಾದ ಬ್ರೆöÊಟ್ ಪಬ್ಲಿಕ್ ಸ್ಕೂಲ್ ಆಡಳಿತಾಧಿಕಾರಿ ಕೆ.ಟಿ. ಬಷೀರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕಿ ನೌಫಿಯ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಗಳನ್ನು ಬೋಧಿಸಿದರು.
ಪ್ರಬಾರ ಪ್ರಾಂಶುಪಾಲೆ ಪ್ರತೀಕ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ತಮ್ಮಯ್ಯ, ಸಮಿತಿ ಸದಸ್ಯ ಫಹೀಮ್ ಮನ್ನಾ ವೇದಿಕೆಯಲ್ಲಿದ್ದರು. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಪಿ.ಎ. ಪ್ರವೀಣ್ ಸ್ವಾಗತಿಸಿದರು. ರೇಖಾ ವಂದಿಸಿದರು.