ಶನಿವಾರಸಂತೆ, ಆ. ೨೭: ಇಲ್ಲಿಗೆ ಸಮೀಪದ ಕೊಡ್ಲಿಪೇಟೆ ಹೋಬಳಿಯ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನ್ಯಾಯದಳ್ಳ ಸರ್ಕಾರಿ ಪ್ರಾಥಮಿಕ ಶಾಲೆಗೆ ಸೋಮವಾರಪೇಟೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಜ್ಞಾನ ದೀಪ ಶಿಕ್ಷಕರನ್ನು ಆಯ್ಕೆ ಮಾಡಲಾಗಿದ್ದು, ತಾಲೂಕು ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಶಾಲೆಗೆ ಭೇಟಿ ನೀಡಿ ಸಮಾರಂಭದಲ್ಲಿ ಜ್ಞಾನದೀಪ ಶಿಕ್ಷಕರ ನೇಮಕಾತಿ ಆದೇಶಪತ್ರವನ್ನು ವಿತರಿಸಿದರು. ನಂತರ ಅವರು ಮಾತನಾಡಿ, ೪೮ ಶಾಲೆಗಳಿಂದ ಜ್ಞಾನದೀಪ ಶಿಕ್ಷಕರಿಗೆ ಬೇಡಿಕೆ ಇಡಲಾಗಿತ್ತು. ೮ ಶಾಲೆಗಳಿಗೆ ಶಿಕ್ಷಕಿಯರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶಾಲಾ ಮುಖ್ಯಶಿಕ್ಷಕಿ ಮಂಜುಳಾ ಮಣಿ ಮಾತನಾಡಿ, ಶಾಲೆಗೆ ಶಿಕ್ಷಕರ ಅವಶ್ಯಕತೆಯಿತ್ತು. ಜ್ಞಾನದೀಪ ಶಿಕ್ಷಕರನ್ನು ಕೊಟ್ಟಿದ್ದು ತುಂಬಾ ಪ್ರಯೋಜನವಾಗಿದೆ ಎಂದರು. ಶಿಕ್ಷಕರಾದ ಮಂಜುನಾಥ್, ಜ್ಞಾನದೀಪ ಶಿಕ್ಷಕಿ ಅನುಷಾ, ಕೂಡ್ಲೂರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಶಾರದಮ್ಮ ಹಾಜರಿದ್ದರು.