ಶನಿವಾರಸಂತೆ, ಆ. ೨೭: ಪ್ರತಿ ವಾರದಂತೆ ಕೆ.ಆರ್. ನಗರ ತಾಲೂಕಿನ ಅಕ್ಕಿ ಹೆಬ್ಬಾಳು ಗ್ರಾಮಕ್ಕೆ ಪೂಜೆಗೆಂದು ಹೋದ ಪತ್ನಿ ರೇವತಿ ಸಂಜೆಯಾದರೂ ಮನೆಗೆ ಹಿಂದಿರುಗಿ ಬರಲಿಲ್ಲ. ಕಾಣೆಯಾಗಿರುವ ಪತ್ನಿಯನ್ನು ಪತ್ತೆಹಚ್ಚಿ ಕೊಡುವಂತೆ ಪತಿ ಬಿ.ಸಿ. ಕುಮಾರ್ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಘಟನೆ ಬುಧವಾರ ನಡೆದಿದೆ.
ಸಮೀಪದ ಕೊಡ್ಲಿಪೇಟೆ ಹೋಬಳಿಯ ಈಚಲುಪುರ ಗ್ರಾಮದ ಕೂಲಿ ಕಾರ್ಮಿಕ ಬಿ.ಸಿ. ಕುಮಾರ್ ೨೦ ವರ್ಷಗಳ ಹಿಂದೆ ಶನಿವಾರಸಂತೆ ಹೋಬಳಿಯ ಮಾದೇಗೋಡು ಗ್ರಾಮದ ಈರಮ್ಮ - ನಾಗೇಶ್ ದಂಪತಿಯ ಪುತ್ರಿ ರೇವತಿ(೩೪)ಯವರನ್ನು ವಿವಾಹವಾಗಿದ್ದರು. ೧೫ ಮತ್ತು ೧೪ ವರ್ಷದ ಇಬ್ಬರು ಮಕ್ಕಳೊಂದಿಗೆ ಸಂಸಾರ ಮಾಡಿಕೊಂಡಿದ್ದರು. ಪತ್ನಿ ರೇವತಿ ಆ. ೨೫ ರಂದು ಬೆಳಿಗ್ಗೆ ೯ ಗಂಟೆಗೆ ಅಕ್ಕಿ ಹೆಬ್ಬಾಳ ಗ್ರಾಮಕ್ಕೆ ಪೂಜೆಗೆಂದು ಹೋಗಿದ್ದು, ಕೊಡ್ಲಿಪೇಟೆಯಿಂದ ಅರಕಲಗೂಡಿಗೆ ಹೋಗಿ ಫೋನ್ ಮಾಡಿದ್ದಳು. ಮಧ್ಯಾಹ್ನದ ನಂತರ ಫೋನ್ ಮಾಡಿದಾಗ ಪತ್ನಿಯ ಫೋನ್ ಸ್ವಿಚ್ಆಫ್ ಆಗಿತ್ತು. ಸಂಜೆಯಾದರೂ ಬರಲಿಲ್ಲ. ನೆಂಟರಿಷ್ಟರ ಮನೆ, ತವರು ಮನೆಗೆ ಫೋನ್ ಮಾಡಿ ವಿಚಾರಿಸಿದರೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ಪತ್ನಿ ರೇವತಿಯನ್ನು ಪತ್ತೆಹಚ್ಚಿಕೊಡುವಂತೆ ಕುಮಾರ್ ದೂರು ನೀಡಿದ್ದಾರೆ.