ವೀರಾಜಪೇಟೆ, ಆ. ೨೬: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-ಬಿಸಿ ಟ್ರಸ್ಟ್ ವೀರಾಜಪೇಟೆ, ಗ್ರಾಮ ಪಂಚಾಯಿತಿ ಹುದಿಕೇರಿ, ಕೆರೆ ಅಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರ ಜಂಟಿ ಆಶ್ರಯದಲ್ಲಿ, ‘ನಮ್ಮೂರು ನಮ್ಮ ಕೆರೆ’ ಅಡಿಯಲ್ಲಿ ಪುನಶ್ಚೇತನಗೊಳಿಸಲಾದ ಹುದಿಕೇರಿಯ ಶ್ರೀ ಮಹಾದೇವ ಪೆಗ್ಗೆರೆಯಲ್ಲಿ (ಕೆರೆ) ಸಸಿಗಳಿಗೆ ನೀರು ಎರೆಯುವ ಮೂಲಕ ಕೆರೆಯಂಗಳದಲ್ಲಿ ವಿವಿಧ ರೀತಿಯ ಹಣ್ಣಿನ ಗಿಡಗಳನ್ನು ನೆಡುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ವಿಠಲ ಸಾಲಿಯಾನ್ ಮಾತನಾಡಿ, ಕೆರೆಯಂಗಳದಲ್ಲಿ ಗಿಡಗಳನ್ನು ನೆಡುವುದರಿಂದ ಪರಿಸರಕ್ಕೆ ಅಪಾರ ಕೊಡುಗೆ ಸಿಗುತ್ತದೆ. ಮಗುವನ್ನು ಹೇಗೆ ಪ್ರೀತಿಯಿಂದ ಪೋಷಿಸುತ್ತೇವೆಯೋ, ಅದೇ ರೀತಿ ಗಿಡಗಳನ್ನು ನೆಟ್ಟು ಪೋಷಿಸಿ ಬೆಳೆಸಬೇಕು ಎಂದು ಕರೆ ನೀಡಿದರು.

ಹುದಿಕೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟರಾಜು ಮಾತನಾಡಿ, ಪರಿಸರ ನಶಿಸಿ ಹೋಗುತ್ತಿರುವುದನ್ನು ಸರಿಪಡಿಸಲು ಪ್ರತಿಯೊಬ್ಬರೂ ಮರಗಿಡಗಳನ್ನು ಬೆಳೆಸಬೇಕು. ಗ್ರಾಮಾಭಿವೃದ್ಧಿ ಯೋಜನೆಯು ನಿರಂತರ ವಾಗಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ ಎಂದರು. ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಬಾನಂಗಡ ಅರುಣ್ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯ ಪರಿಸರ ಕಾಳಜಿಯ ಕೆಲಸಗಳನ್ನು ಶ್ಲಾಘಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೀರಾಜಪೇಟೆ ತಾಲೂಕು ಯೊಜನಾಧಿಕಾರಿ ಹರೀಶ್.ಪಿ ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಕಾವೇರಮ್ಮ, ವಲಯ ಅರಣ್ಯಾಧಿಕಾರಿ ಚಂದ್ರಶೇಖರ್, ಕೆರೆ ಸಮಿತಿ ಅಧ್ಯಕ್ಷ ಕರುಂಬಯ್ಯ, ಕಾರ್ಯದರ್ಶಿ ಮಿಲನ್, ಗಣಪತಿ, ಮದನ್, ಒಕ್ಕೂಟದ ಅಧ್ಯಕ್ಷೆ ರಾಧಾ ಹಾಗೂ ಶೌರ್ಯ ವಿಪತ್ತು ತಂಡದ ಕಾರ್ಯದರ್ಶಿ ರಾಜೇಶ್ ಉಪಸ್ಥಿತರಿದ್ದರು.

ಕೃಷಿ ಮೇಲ್ವಿಚಾರಕ ವಸಂತ್, ವಲಯ ಮೇಲ್ವಿಚಾರಕಿ ಪುಷ್ಪಲತಾ, ಗ್ರಾಮಸ್ಥರು, ಸಂಘದ ಸದಸ್ಯರು, ಸೇವಾ ಪ್ರತಿನಿಧಿಗಳಾದ ಗೀತಾ, ಸರಳ, ಶಾಲಿನಿ ಹಾಗೂ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿ ಕೆರೆಯಂಗಳದಲ್ಲಿ ಸಸಿಗಳನ್ನು ನೆಟ್ಟರು.