ಸಿದ್ದಾಪುರ, ಆ. ೨೬: ರಾಸಾಯನಿಕ ಗೊಬ್ಬರದ ಜೊತೆಗೆ ಸಾವಯವ ಗೊಬ್ಬರವನ್ನು ಬಳಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ, ಇದು ಮಣ್ಣಿನಲ್ಲಿ ತೇವಾಂಶ ಕಾಪಾಡಲು, ಎರೆಹುಳುಗಳ ಬೆಳವಣಿಗೆಗೆ ಮತ್ತು ದೀರ್ಘಕಾಲಿಕ ಉತ್ತಮ ಇಳುವರಿ ಪಡೆಯಲು ಸಹಕಾರಿ ಆಗುತ್ತದೆ ಎಂದು ಪ್ರಗತಿಪರ ಕಾಫಿ ಬೆಳೆಗಾರ ಹಾಗೂ ಕಾಫಿ ಬೋರ್ಡ್ ಆಫ್ ಇಂಡಿಯಾ ಮಾಜಿ ಉಪಾಧ್ಯಕ್ಷ ಎನ್. ಬೋಸ್ ಮಂದಣ್ಣ ಅಭಿಪ್ರಾಯಪಟ್ಟರು.

ಕಾಫಿ ಬೆಳೆಗಾರರಿಗೆ ಹವಾಮಾನ ಬದಲಾವಣೆ, ಸುಸ್ಥಿರ ಕೃಷಿ, ಮತ್ತು ಆಧುನಿಕ ತೋಟಗಾರಿಕೆ ಪದ್ಧತಿಗಳ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಕೋರಮಂಡಲ ಇಂಟರ್‌ನ್ಯಾಶನಲ್ ಲಿಮಿಟೆಡ್ ಹಾಗೂ ಶೆನ್‌ಭಾಗ್ಯಲಕ್ಷಿö್ಮ ಏಜೆನ್ಸೀಸ್ ವತಿಯಿಂದ ಕಾಫಿ ಮಂಡಳಿ - ಗೋಣಿಕೊಪ್ಪ, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ - ಗೋಣಿಕೊಪ್ಪ, ಲಯನ್ಸ್ ಕ್ಲಬ್-ಸಿದ್ದಾಪುರ ಸಹಕಾರದೊಂದಿಗೆ ಸಿದ್ದಾಪುರ ಚರ್ಚ್ ಹಾಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ಲಾಂಟರ್ಸ್ ಮೀಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾಫಿ ಬೆಳೆಗಾರರ ಹಿತ ಕಾಯಲು ಮತ್ತು ಅವರ ಕೃಷಿ ಚಟುವಟಿಕೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಕಾಫಿ ಮಂಡಳಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಬೆಳೆಗಾರರಿಗೆ ರೋಗ ನಿಯಂತ್ರಣ, ಮಣ್ಣು ಪರೀಕ್ಷೆ ಹಾಗೂ ಸುಸ್ಥಿರ ಬೇಸಾಯ ಕ್ರಮಗಳ ಕುರಿತು ನೀಡುತ್ತಿರುವ ಸಲಹೆಗಳು ಅತ್ಯಂತ ಉಪಯುಕ್ತವಾಗಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ನಿವೃತ್ತ ಜಂಟಿ ಕೃಷಿ ನಿರ್ದೇಶಕ ರಾಮರಾಜನ್ ಮಾತನಾಡಿ, ಮಣ್ಣಿನ ಪರೀಕ್ಷೆಯು ಉತ್ತಮ ಕೃಷಿ ಮತ್ತು ಅಧಿಕ ಬೆಳೆ ಪಡೆಯಲು ಅತ್ಯಂತ ಮುಖ್ಯವಾದ ಹಂತ. ಮಣ್ಣಿನ ವೈಜ್ಞಾನಿಕ ಪರೀಕ್ಷೆಯಿಂದ ಮಣ್ಣಿನ ಆರೋಗ್ಯ, ಪೋಷಕಾಂಶಗಳ ಪ್ರಮಾಣ, ನೀರು ಹಿಡಿದಿಟ್ಟುಕೊಳ್ಳುವ ಮತ್ತು ಗಾಳಿಯಾಡುವ ಸಾಮರ್ಥ್ಯ ತಿಳಿದುಕೊಳ್ಳಬಹುದು. ಮಣ್ಣು ಪರೀಕ್ಷೆ ಮಾಡದೆ ರಸಗೊಬ್ಬರ ಹಾಕಿದರೆ ಮಣ್ಣಿನ ಆರೋಗ್ಯ ಹಾಳಾಗಿ ಬೆಳೆ ಕುಂಠಿತವಾಗುತ್ತದೆ. ಆದ್ದರಿಂದ ಯಾವುದೇ ಬೆಳೆ ಬೆಳೆಯುವುದಕ್ಕೆ ಮುನ್ನ ಮಣ್ಣು ಪರೀಕ್ಷೆ ಮಾಡಿಸುವುದು ಅತ್ಯವಶ್ಯಕ ಎಂದು ಸಲಹೆ ನೀಡಿದರು ಬೆಳೆಗಾರರು ಪ್ರಸ್ತುತ ಎನ್.ಪಿ.ಕೆ ಬಳಸುತ್ತಿದ್ದಾರೆ. ಅದರ ಜೊತೆಗೆ ಕಾಲಕಾಲಕ್ಕೆ ಮಣ್ಣಿನ ಪರೀಕ್ಷೆ, ಸುಣ್ಣದ ಬಳಕೆ - ಲೈಮಿಂಗ್ ಮತ್ತು ಇನ್ನಿತರ ಸಮಗ್ರ ಪೋಷಕಾಂಶಗಳನ್ನು ಕೂಡ ಬಳಸುವಂತೆ ಬೋಸ್ ಮಂದಣ್ಣ ಸಲಹೆ ನೀಡಿದರು.

ಗೋಣಿಕೊಪ್ಪ ಕಾಫಿ ಬೋರ್ಡ್ನ ಡೆಪ್ಯೂಟಿ ಡೈರೆಕ್ಟರ್ ಚಂದ್ರಶೇಖರ್, ಕಾಫಿ ಮಂಡಳಿಯಿAದ ಕೃಷಿಕರಿಗೆ ನೀಡಲಾಗುವ ವಿವಿಧ ಸೌಲಭ್ಯ ಹಾಗೂ ಸಬ್ಸಿಡಿಗಳ ಕುರಿತು ಸಮಗ್ರ ಮಾಹಿತಿ ನೀಡಿದರು

ಕಾರ್ಯಕ್ರಮದಲ್ಲಿ ಜೋನಾಲ್ ಮ್ಯಾನೇಜರ್ ಪ್ರವೀಣ್ ಕುಮಾರ್, ಕೆವಿಕೆ ಕೃಷಿ ವಿಜ್ಞಾನಿ ವೀರೇಂದ್ರ ಕುಮಾರ್, ಬೇಸಾಯ ತಜ್ಞ ಡಾ.ರಾಜಶೇಖರ್ ಸೇರಿದಂತೆ ಕೊಡಗಿನ ವಿವಿಧ ಭಾಗಗಳಿಂದ ಆಗಮಿಸಿದ ಬೆಳೆಗಾರರು ಉಪಸ್ಥಿತರಿದ್ದರು.