ಸೋಮವಾರಪೇಟೆ, ಆ. ೨೪: ಸೋಮವಾರಪೇಟೆ-ಮಾದಾಪುರ-ಮಡಿಕೇರಿ ರಾಜ್ಯ ಹೆದ್ದಾರಿಯ ಮಾದಾಪುರ ಸಮೀಪದ ಇಗ್ಗೋಡ್ಲು ಜಂಕ್ಷನ್ನಲ್ಲಿ ಹಾಡಹಗಲೇ ರಸ್ತೆ ಬದಿಯಲ್ಲಿ ಮರಗಳನ್ನು ಲಾರಿಗಳಿಗೆ ತುಂಬಿಸುತ್ತಿರುವುದರಿAದ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಮಳೆಗಾಲದ ಸಂದರ್ಭದಲ್ಲಿ ಸಿಲ್ವರ್ ಮರಗಳನ್ನು ಕಡಿದು, ರಸ್ತೆ ಬದಿಯಲ್ಲೇ ರಾಶಿ ಹಾಕಿ ಬಳಿಕ ದೊಡ್ಡ ಗಾತ್ರದ ಲಾರಿಗಳಿಗೆ ತುಂಬಿಸಲಾಗುತ್ತಿದೆ. ಲಾರಿಗಳನ್ನು ಹೆದ್ದಾರಿಯ ಬದಿಯಲ್ಲಿ ನಿಲ್ಲಿಸಿ ಮರಗಳನ್ನು ತುಂಬಿಸುವುದರಿAದ ವಾಹನಗಳು ಸಂಚರಿಸಲು ಸ್ಥಳಾವಕಾಶ ಕಡಿಮೆಯಾಗುತ್ತಿದೆ. ಶನಿವಾರವೂ ಇಗ್ಗೋಡ್ಲು ಜಂಕ್ಷನ್ನಲ್ಲಿ ಇದೇ ರೀತಿಯಲ್ಲಿ ಮರಗಳನ್ನು ಲಾರಿಗೆ ತುಂಬಿಸಲಾಗಿದ್ದು, ಕೆಲಕಾಲ ವಾಹನ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಡಿಕೇರಿ, ಹಟ್ಟಿಹೊಳೆ, ಮಾದಾಪುರ, ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ ರಾಜ್ಯ ಹೆದ್ದಾರಿಯಲ್ಲಿ ಹಲವು ಕಡೆ ದೊಡ್ಡ ಲಾರಿಗಳು ರಸ್ತೆ ಬದಿಯಲ್ಲಿ ನಿಲ್ಲುವುದರಿಂದ ರಸ್ತೆ ಅಂಚುಗಳು ಹಾಳಾಗಿ ಹೊಂಡಗಳು ನಿರ್ಮಾಣವಾಗಿವೆ. ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಈ ಹೊಂಡಗಳಲ್ಲಿ ನೀರು ನಿಂತು ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ರಾತ್ರಿ ವೇಳೆ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಎದುರು ಬರುವ ವಾಹನಗಳಿಗೆ ದಾರಿ ಮಾಡಿಕೊಡುವ ಸಂದರ್ಭದಲ್ಲಿ ರಸ್ತೆ ಬದಿಗೆ ಇಳಿದರೆ ಹೊಂಡಗಳಿಗೆ ಸಿಲುಕಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಹೆದ್ದಾರಿಯ ಬದಿಯಲ್ಲಿ ಮರಗಳನ್ನು ಸಂಗ್ರಹಿಸುವುದು ಹಾಗೂ ಲಾರಿಗಳಿಗೆ ತುಂಬಿಸುವ ಕಾರ್ಯಕ್ಕೆ ಸಂಬAಧಿಸಿದAತೆ ನಿಯಮಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಸಂಬAಧಪಟ್ಟ ಅಧಿಕಾರಿಗಳು ಪರಿಶೀಲಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ರಸ್ತೆ ಸುರಕ್ಷತೆಗೆ ಸಂಬAಧಿಸಿದAತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷö್ಯ ವಹಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಹೆದ್ದಾರಿ ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕಾಗಿ ನಿರ್ಮಿಸಿರುವುದರಿಂದ ರಸ್ತೆ ಬದಿಯಲ್ಲಿ ವಾಹನ ನಿಲುಗಡೆ ಮಾಡಿ ಸಂಚಾರಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ರಸ್ತೆ ಬದಿಯಲ್ಲಿರುವ ಮರದ ದಿಮ್ಮಿಗಳನ್ನು ತೆರವುಗೊಳಿಸಿ, ಹಾಳಾಗಿರುವ ರಸ್ತೆಯ ಬದಿಗಳನ್ನು ದುರಸ್ತಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇನ್ನಾದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯ ಹೆದ್ದಾರಿ ಬದಿಯಲ್ಲಿ ಟಿಂಬರ್ ಲಾರಿಗಳನ್ನು ನಿಲ್ಲಿಸಿಕೊಂಡು ಮರ ತುಂಬುದಕ್ಕೆ ಅವಕಾಶವಿಲ್ಲ. ಮರ ತುಂಬಿಸುವುದು ನಮ್ಮ ಗಮನಕ್ಕೆ ಬಂದಿಲ್ಲ. ನಿಯಮ ಮೀರಿ ರಾಜ್ಯ ಹೆದ್ದಾರಿಯಲ್ಲಿ ಮರದ ದಿಮ್ಮಿಗಳನ್ನು ಸಂಗ್ರಹಿಸಿ, ರಸ್ತೆ ಹಾಳು ಮಾಡುವುದರೊಂದಿಗೆ, ವಾಹನ ಸಂಚಾರಕ್ಕೆ ಅಡಚಣೆ ಮಾಡುವವರ ವಿರುದ್ದ ನೋಟೀಸ್ ಜಾರಿಗೊಳಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.