ಮಡಿಕೇರಿ, ಆ. ೨೬: ಮಾನವ ಬಂಧುತ್ವ ವೇದಿಕೆ ಕೊಡಗು ಜಿಲ್ಲಾ ಶಾಖೆ ಹಾಗೂ ಸೋಮವಾರಪೇಟೆ ತಾಲೂಕು ಸಮಿತಿ ವತಿಯಿಂದ ಶನಿವಾರಸಂತೆ ಪಟ್ಟಣದ ಸನ್ನಿಧಿ ವಿಶೇಷಚೇತನ ಮಕ್ಕಳ ವಸತಿ ಶಾಲೆಯಲ್ಲಿ ನಾಗರಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಹಿರಿಯ ದಲಿತ ಮುಖಂಡರು ಹಾಗೂ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಜೆ.ಆರ್ ಪಾಲಾಕ್ಷ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ದೇಶದಲ್ಲಿ ಅಪೌಷ್ಟಿಕತೆಯಿಂದ ಮಕ್ಕಳು ಬಳಲುತ್ತಿರುವ ಸಂದರ್ಭದಲ್ಲಿ ಹುತ್ತಕ್ಕೆ ಹಾಗೂ ಕಲ್ಲುಗಳಿಗೆ ಹಾಲೆರೆಯುವ ಬದಲು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಲು ನೀಡುವ ಮೂಲಕ ಪೌಷ್ಟಿಕತೆ ಹೆಚ್ಚಿಸುವ ಕಾರ್ಯ ಅರ್ಥಪೂರ್ಣವಾಗಿದೆ ಎಂದು ಹೇಳಿದರು. ಇಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಆತ್ಮಸ್ಥೆöÊರ್ಯ ತುಂಬುವ ಮಾನವ ಬಂಧುತ್ವ ವೇದಿಕೆಯ ಕಾರ್ಯವನ್ನು ಅವರು ಶ್ಲಾಘಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಮಾಜ ಸೇವಕಿ ಲಲಿತ ವೇದಮೂರ್ತಿ ಅವರು ಮಾತನಾಡಿ, ವಿಶೇಷಚೇತನ ಮಕ್ಕಳ ವಸತಿ ಶಾಲೆಯಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಮಕ್ಕಳನ್ನು ಪೋಷಿಸುವ ಜವಾಬ್ದಾರಿ ಹೊತ್ತಿರುವ ಶಿಕ್ಷಕರು, ಸಿಬ್ಬಂದಿ ಹಾಗೂ ಸಹಾಯಕ ಸಿಬ್ಬಂದಿಯ ಸೇವಾ ಮನೋಭಾವವನ್ನು ಗೌರವಿಸಬೇಕು. ಇಂತಹ ಸಮಾಜಮುಖಿ ಕಾರ್ಯಗಳಿಗೆ ಸದಾ ಕೈಜೋಡಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಜೆ.ಎಲ್.ಜನಾರ್ಧನ್ ಅವರು ರಾಜ್ಯಾದ್ಯಂತ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಪೌಷ್ಟಿಕ ಆಹಾರ ಹಾಗೂ ಹಾಲು ವಿತರಿಸುವ ಕಾರ್ಯವನ್ನು ಮಾನವ ಬಂಧುತ್ವ ವೇದಿಕೆ ನಡೆಸುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರು ಹಾಗೂ ಮಾನವ ಬಂಧುತ್ವ ವೇದಿಕೆ ತಾಲೂಕು ಸಂಚಾಲಕ ಎಂ.ಎಸ್.ವೀರೇAದ್ರ, ದುಂಡಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಬಿ.ಅಬ್ಬಾಸ್, ಒಕ್ಕಲಿಗ ಯುವ ವೇದಿಕೆ ಹೋಬಳಿ ಕಾರ್ಯದರ್ಶಿ ಅವಿನಾಶ್, ಮಾನವ ಬಂಧುತ್ವ ವೇದಿಕೆ ಸದಸ್ಯ ತವ್ಹೀದ್ ಕೊಡ್ಲಿಪೇಟೆ, ಎಂ.ಪಿ. ವಿಶ್ವ ಮಾದ್ರೆರ, ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಸದಸ್ಯ ಪ್ರಸನ್ನ, ಸ್ಥಳೀಯರಾದ ವಸಂತ, ರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಸತಿ ಶಾಲೆಯ ಮುಖ್ಯ ಶಿಕ್ಷಕಿ ಶ್ವೇತ ಎ.ಎಸ್. ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೆ ಹಾಗೂ ಆಗಮಿಸಿದ್ದವರಿಗೆ ಹಾಲು ಮತ್ತು ಸಿಹಿ ವಿತರಿಸಲಾಯಿತು. ವಸತಿ ಶಾಲೆಯ ಸಿಬ್ಬಂದಿ ವರ್ಗದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.