ವೀರಾಜಪೇಟೆ, ಆ. ೨೫: ಕಸ್ತೂರಿ ರಂಗನ್ ವರದಿಯು ಅವೈಜ್ಞಾನಿಕವಾಗಿದೆ. ಈ ವರದಿಯು ಮಲೆನಾಡು ಮತ್ತು ಕರಾವಳಿ ಭಾಗದ ರೈತರು ಹಾಗೂ ಜನಸಾಮಾನ್ಯರ ಬದುಕಿಗೆ ಮಾರಕವಾಗಿದೆ ಎಂದು ಆಪಾದಿಸಿ, ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ಸಂಪೂರ್ಣವಾಗಿ ತಿರಸ್ಕರಿಸುವಂತೆ ಕೊಡಗು ಜಿಲ್ಲಾ ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ವಾದಿ) ಒತ್ತಾಯಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಡಗು ಜಿಲ್ಲಾ ಸಿಪಿಐಎಂ ಪಕ್ಷದ ಕಾರ್ಯದರ್ಶಿ ಹೆಚ್.ಬಿ ರಮೇಶ್ ಅವರು, ಕಸ್ತೂರಿ ರಂಗನ್ ವರದಿ ಪಶ್ಚಿಮ ಘಟ್ಟದ ಜನರನ್ನು ಸಂಕಷ್ಟಕ್ಕೆ ಸಿಲುಕಿಸಲಿದೆ. ಅತಿ ಸೂಕ್ಷ÷್ಮ ಪ್ರದೇಶಗಳ ಹೆಸರಿನಲ್ಲಿ ರೈತರನ್ನು ಭೂಮಿಯ ಹಕ್ಕಿನಿಂದ ವಂಚಿಸಲಾಗುತ್ತಿದೆ. ಇದರಿಂದ ಜೀವನೋಪಾಯಕ್ಕೆ ಧಕ್ಕೆಯಾಗಲಿದ್ದು, ಕೃಷಿ ಮತ್ತು ಮೂಲಭೂತ ಚಟುವಟಿಕೆಗಳಿಗೆ ತೊಂದರೆಯಾಗಲಿದೆ. ಕೇಂದ್ರ ಸರಕಾರವು ಕೂಡಲೇ ಕಸ್ತೂರಿ ರಂಗನ್ ವರದಿ ಜಾರಿಯ ಅಧಿಸೂಚನೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಸಮಿತಿ ಸದಸ್ಯರಾದ ಡಾ. ಐ.ಆರ್ ದುರ್ಗಾಪ್ರಸಾದ್ ಮಾತನಾಡಿ, ಕೇಂದ್ರ ಸರ್ಕಾರವು ಡಾ. ಕಸ್ತೂರಿ ರಂಗನ್ ವರದಿ ಜಾರಿಗೊಳಿಸಲು ೭ನೇ ಕರಡು ಅಧಿಸೂಚನೆ ಹೊರಡಿಸಿದ್ದು, ಮುಂದಿನ ೬೦ ದಿನಗಳೊಳಗೆ ಆಕ್ಷೇಪ ಸಲ್ಲಿಸಲು ಕಾಲಾವಕಾಶವನ್ನು ನಿಗದಿಪಡಿಸಿದೆ. ಕಸ್ತೂರಿ ರಂಗನ್ ವರದಿ ಜಾರಿಗೆ ಬಂದರೆ ಕೊಡಗಿನ ನೂರಾರು ಗ್ರಾಮಗಳ ಗ್ರಾಮಸ್ಥರ ಜೀವನ ಅತಂತ್ರವಾಗಲಿದೆ. ಜಿಲ್ಲೆಯಲ್ಲಿ ಶೇ. ೩೦ರಷ್ಟು ಜನರು ಪಶ್ಚಿಮ ಘಟ್ಟದ ಅರಣ್ಯ ಭೂಮಿಯಲ್ಲಿ ಕೃಷಿ ಮತ್ತು ತೋಟಗಾರಿಕೆಯೊಂದಿಗೆ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಪ್ರಸ್ತುತ ಜಾರಿಯಲ್ಲಿರುವ ನಿಯಮಗಳು ಜನಸಾಮಾನ್ಯರ ಉಸಿರುಗಟ್ಟಿಸುತ್ತಿವೆ. ಹೀಗಿರುವಲ್ಲಿ ಕೇಂದ್ರ ಸರಕಾರ ಜಿಲ್ಲೆಯ ಬಹುಪಾಲು ಜನವಸತಿ ಪ್ರದೇಶಗಳನ್ನು ಪರಿಸರವಾಗಿ ಅತ್ಯಂತ ಸೂಕ್ಷ÷್ಮ ಪ್ರದೇಶವೆಂದು ಘೋಷಿಸಿ, ಅಲ್ಲಿ ವಿವಿಧ ನಿರ್ಬಂಧ ಹೇರಲು ಹೊರಟಿರುವ ಕ್ರಮ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಸಮಿತಿ ಸದಸ್ಯರಾದ ಎ.ಸಿ. ಸಾಬು ಮಾತನಾಡಿ, ಅಧಿಸೂಚನೆಯ ಪ್ರಕಟಣೆಯಲ್ಲಿ ಆಕ್ಷೇಪಣೆಗಳಿಗೆ ಕೇಳಿರುವುದು ಕೇವಲ ಔಪಚಾರಿಕವಾಗಿದೆ. ಕಳುಹಿಸಿದ ಆಕ್ಷೇಪಗಳನ್ನು ಕೇಂದ್ರ ಸರಕಾರ ಅಂಗೀಕರಿಸುವುದಿಲ್ಲ ಎನ್ನುವುದು ಹಿಂದಿನ ಅನುಭವಗಳಾಗಿವೆ. ಈ ಹಿಂದೆ ಅಧಿಸೂಚನೆಗಳು ಪ್ರಕಟವಾದಾಗಲೂ ಸಾಕಷ್ಟು ಆಕ್ಷೇಪಣಾ ಪತ್ರಗಳನ್ನು ಕಳುಹಿಸಲಾಗಿತ್ತಾದರೂ ಅವುಗಳಿಗೆ ಯಾವ ಬೆಲೆಯೂ ಇಲ್ಲ ಎಂದರು. ಈ ಸಂದರ್ಭ ಸಮಿತಿ ಸದಸ್ಯರಾದ ಪದ್ಮಿನಿ ಶ್ರೀಧರ್ ಉಪಸ್ಥಿತರಿದ್ದರು.