ಮಡಿಕೇರಿ-ಕೊಡಗಿನ ಮತ್ತಿಗೋಡು ಸಾಕಾನೆ ಶಿಬಿರದ ಪ್ರತಿಷ್ಠಿತ ಆನೆಯಾಗಿರುವ ಅಭಿಮನ್ಯು ಈ ಬಾರಿ ಮೈಸೂರು ದಸರಾದಲ್ಲಿ ಮಾತೆ ಚಾಮುಂಡೇಶ್ವರಿಯ ಅಂಬಾರಿಯನ್ನು ಹೊರುವ ಕಾಯಕದಿಂದ ದೂರ ಉಳಿಯಲಿ ದ್ದಾನೆ. ಮೈಸೂರಿನ ವಿಶ್ವವಿಖ್ಯಾತ ಜಂಬೂಸವಾರಿಯಲ್ಲಿ ೬ ವರ್ಷ ೭೫೦ ಕೆ.ಜಿ. ತೂಕದ ಪ್ರತಿಷ್ಟಿತ ಚಿನ್ನದ ಅಂಬಾರಿ ಹೊತ್ತು ಮತ್ತಿಗೋಡು ಸಾಕಾನೆ ಶಿಬಿರದ ಹಿರಿಮೆಗೂ ಕಾರಣವಾಗಿದ್ದ ವೀರ ಅಭಿಮನ್ಯು ೬೦ ವರ್ಷ ಪ್ರಾಯದವನಾದ ಹಿನ್ನಲೆಯಲ್ಲಿ ಈ ವರ್ಷ ನಿಯಮ ಪ್ರಕಾರ ನಿವೃತ್ತಿ ಹೊಂದುತ್ತಿದ್ದು, ಅಂಬಾರಿ ಹೊರುವಿಕೆಯಿಂದ ದೂರ ಉಳಿಯುತ್ತಿದ್ದಾನೆ. ಮತ್ತಿಗೋಡಿನಲ್ಲಿ ಎರಡು ತಿಂಗಳ ಹಿಂದೆ ದಿಮ್ಮಿ ಎತ್ತುವ ಸಂದರ್ಭ ತನ್ನ ಎಡ ದಂತವನ್ನು ಮುರಿದುಕೊಂಡಿದ್ದ ಅಭಿಮನ್ಯು ಇದೀಗ ೬೦ ವರ್ಷದವನಾದ ಕಾರಣದಿಂದ ಇಲಾಖೆಯ ನಿಯಮದಂತೆ ಅಂಬಾರಿ ಹೊರುವ ಕಾರ್ಯದಿಂದ ಮತ್ತು ಮುಂದಿನ ದಿನಗಳಲ್ಲಿ ಸವಾಲಿನ ಕಾರ್ಯಾಚರಣೆಗಳಿಂದ ದೂರ ಉಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.
ದಸರಾದ ಅಂಬಾರಿ ಹೊರುವಿಕೆಯಿಂದ ದೂರ ಉಳಿದರೂ ದಸರಾದಲ್ಲಿ ಅಂಬಾರಿ ಆನೆಯ ಪಕ್ಕದಲ್ಲಿ ಸಾಗುವ ನಿಶಾನೆ ಆನೆಯಾಗಿ ಕ್ಯಾಪ್ಟನ್ ಅಭಿಮನ್ಯುವನ್ನು ಬಳಸಲು ಅರಣ್ಯ ಇಲಾಖೆ ನಿರ್ಧರಿಸಿದೆ.
ರಾಜ್ಯದಾದ್ಯಂತ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿ ಹಾಗೂ ಉತ್ತರ ಭಾರತದ ಕಾಡುಗಳಲ್ಲಿಯೂ ದಾಂಧಲೆ ನಿರತ ಕಾಡಾನೆ ಸೆರೆ ಕಾರ್ಯಾಚರಣೆ ಸಂದರ್ಭ ಮತ್ತಿಗೋಡು ಸಾಕಾನೆ ಶಿಬಿರದಿಂದ ಅಭಿಮನ್ಯುವನ್ನು ಕರೆದೊಯ್ಯಲಾಗುತ್ತಿತ್ತು. ಕಾಡಾನೆ ಮಾತ್ರವೇ ಅಲ್ಲ ಅರಣ್ಯದಂಚಿನಲ್ಲಿ ಧಾಳಿನಿರತ ಹುಲಿ ಸೆರೆ ಕಾರ್ಯಾಚರಣೆಗೂ ಅಭಿಮನ್ಯು ಸೈ ಎನಿಸಿಕೊಂಡಿದ್ದ.
ಅರ್ಜುನ ಆನೆ ವಯೋನಿವೃತ್ತಿ ಹೊಂದಿದ ಬಳಿಕ ೨೦೦೦ನೇ ಇಸವಿಯಿಂದ ಮೈಸೂರು ದಸರಾದಲ್ಲಿ ತಾಯಿ ಚಾಮುಂಡೇಶ್ವರಿಯ ಚಿನ್ನದ ಅಂಬಾರಿ ಹೊರಲು ಪ್ರಾರಂಭಿಸಿದ್ದ ಅಭಿಮನ್ಯು, ಈ ಆರೂ ವರ್ಷಗಳ ಕಾಲವೂ ಎಲ್ಲಿಯೂ ಚ್ಯುತಿ ಬಾರದಂತೆ ಅಂಬಾರಿ ಯನ್ನು ಹೊತ್ತು ಅತ್ಯಂತ ಗಾಂಭೀರ್ಯದಿAದ ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದಾನೆ. ಪ್ರಸ್ತುತ ೫,೩೬೦ ಕೆ.ಜಿ. ತೂಕವಿರುವ ಅಭಿಮನ್ಯುವಿಗೆ ದಾಖಲೆಗಳ ಪ್ರಕಾರ ೬೦ ವರ್ಷಗಳಾಯಿತು ಎಂಬದನ್ನು ಹೊರತು ಪಡಿಸಿದರೆ ಕೆಲಸದಲ್ಲಿ, ಕಾರ್ಯಾಚರಣೆಯಲ್ಲಿ ಅಭಿಮನ್ಯು ಕಿಂಚಿತ್ತೂ ಕುಗ್ಗಿಲ್ಲ ಎಂಬುದೇ ವಿಶೇಷ.
೨೫ ವರ್ಷಗಳಿಂದಲೂ ಅಭಿಮನ್ಯು ಮೈಸೂರು ದಸರಾದಲ್ಲಿ ಪಾಲ್ಗೊಂಡ ಹಿರಿಮೆಗೆ ಪಾತ್ರನಾಗಿದ್ದ ೧೯೬೮ ರಲ್ಲಿ ಹೆಚ್.ಡಿ. ಕೋಟೆ ಬಳಿಯ ಬಳ್ಳೆ ಸಮೀಪದ ಖೆಡ್ಡಾ ಕಾರ್ಯಾಚರಣೆಯಲ್ಲಿ ಸೆರೆಯಾಗಿದ್ದ ಅಭಿಮನ್ಯು, ಅಂದಿನಿAದ ಇಂದಿನವರೆಗೂ ಅರಣ್ಯ ಇಲಾಖೆಯ ಪಾಲಿಗೆ ಅತ್ಯಂತ ನಿಷ್ಠಾವಂತ ಆನೆಯಾಗಿಯೇ ಮುಂದುವರೆದಿದ್ದಾನೆ.
೩೦೦ ಸಾಕಾನೆಗಳು ೮೦ ಹುಲಿಗಳ ಸೆರೆ ಕಾರ್ಯಾಚರಣೆಯಲ್ಲಿ ಅಭಿಮನ್ಯು ವಹಿಸಿರುವ ಪಾತ್ರ ಮರೆಯುವಂಥದ್ದಲ್ಲ. ಭಾರತದಲ್ಲಿಯೇ ಅರಣ್ಯ ಇಲಾಖೆಯ ಸಾಕಾನೆಯಾಗಿ ಅಭಿಮನ್ಯು ಸಲ್ಲಿಸಿರುವ ಸೇವೆಯನ್ನು ಮತ್ತೆ ಯಾವುದೇ ಸಾಕಾನೆ ದೇಶದ ಯಾವುದೇ ರಾಜ್ಯದ ಅರಣ್ಯ ಇಲಾಖೆಯಲ್ಲಿ ಸಲ್ಲಿಸಿಲ್ಲ ಎಂಬುದೇ ಈ ಕ್ಯಾಪ್ಟನ್ ಸಾಧನೆಗೆ ಸಾಕ್ಷಿ
ವೈಭವದ ಬೀಳ್ಕೊಡುಗೆ : ಮೈಸೂರು ದಸರಾದಲ್ಲಿ ಅರ್ಜುನ ಆನೆ ೮ ಬಾರಿ ಅಂಬಾರಿ ಹೊತ್ತಿದ್ದರೆ, ಭೀಮ ಕೂಡ ೨ ಬಾರಿ ಅಂಬಾರಿ ಹೊತ್ತಿದ್ದ. ಈ ಎರಡೂ ಆನೆಗಳಿಗೆ ೬೦ ವರ್ಷಗಳಾಗಿ ವಯೋಸಹಜ ನಿವೃತ್ತಿ ಪಡೆದ ಸಂದರ್ಭ ರಾಜ್ಯ ಸರ್ಕಾರದಿಂದ ವೈಭವದ ವಿದಾಯ ಸಮಾರಂಭ ಮಾಡಲಾಗಿತ್ತು. ಎರಡು ವರ್ಷಗಳ ಹಿಂದೆ ಅರ್ಜುನ ಆನೆ, ಕೊಡಗಿನ ಗಡಿಯಾದ ಎಸಳೂರಿನಲ್ಲಿ ಕಾಡಾನೆ ಜತೆ ಕಾಳಗದಲ್ಲಿ ಕೊನೆಯುಸಿರೆಳೆದಿದ್ದ. ಅಭಿಮನ್ಯುವಿಗೂ ಕೂಡ ಸರ್ಕಾರ ಸಕಲ ಸರ್ಕಾರಿ ಮರ್ಯಾದೆಯೊಂದಿಗೆ ಬೀಳ್ಕೊಡುಗೆ ನೀಡಲಾಯಿತು.
ಗಜಪಡೆ ನಿರ್ವಹಣೆಗೆ ರೂ. ೨ ಕೋಟಿಗೆ ಪ್ರಸಾಪ : ಅಂದಾಜು ೫೦ ದಿನಗಳಿಗೂ ಹೆಚ್ಚು ಕಾಲ ದಸರಾಗೆ ಬರುವ ಗಜಪಡೆಯ ಪೋಷಣೆ ಹಾಗೂ ನಿರ್ವಹಣೆಗಾಗಿ ಅರಣ್ಯ ಇಲಾಖೆ ಎರಡು ಕೋಟಿ ರೂ. ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ಬಾರಿ ದಸರಾಗೆ ಒಟ್ಟು ೧೪ ಆನೆಗಳನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ೯ ಆನೆಗಳು ಮೊದಲ ಹಂತದಲ್ಲಿ ಗಜಪಯಣದ ಮೂಲಕ ಬರಲಿದ್ದು, ಎರಡನೇ ಹಂತದಲ್ಲಿ ೩ ಆನೆಗಳು ಮೈಸೂರು ಅರಮನೆಗೆ ಬರಲಿವೆ. ಇನ್ನು ಭೀಮ ಮತ್ತು ಹರ್ಷ ಆನೆಗಳು ಮೀಸಲು ಆನೆಗಳಾಗಿ ಪಟ್ಟಿಯಲ್ಲಿವೆ.
ಈ ಬಾರಿ ಈ ದಸರಾ ಗಜಪಡೆಯ ನಿರ್ವಹಣೆಗೆ ಸರ್ಕಾರಕ್ಕೆ ಅರಣ್ಯ ಇಲಾಖೆ ಎರಡು ಕೋಟಿ ರೂಪಾಯಿ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರದಿಂದ ಮೈಸೂರು ದಸರಾದಲ್ಲಿ ಸಾಕಾನೆಗಳ ನಿರ್ವಹಣೆಗಾಗಿ ಕಳೆದ ವರ್ಷ ೮೦ ಲಕ್ಷ ರು. ಹಣ ನೀಡಲಾಗಿತ್ತು.
-ಅನಿಲ್ ಹೆಚ್. ಟಿ.