ಸೋಮವಾರಪೇಟೆ, ಆ. ೨೫: ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ - ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕು ಸಂಯುಕ್ತ ಆಶ್ರಯದಲ್ಲಿ ದಿ: ಡಿ. ದೇವರಾಜ ಅರಸು ಅವರ ೧೧೧ ನೇ ಜನ್ಮದಿನಾಚರಣೆಯನ್ನು ತಾಲೂಕು ಕಚೇರಿ ಸಭಾಂಗಣದಲ್ಲಿ ಆಚರಿಸಲಾಯಿತು.
ದಿ. ಡಿ. ದೇವರಾಜು ಅರಸು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ತಹಶೀಲ್ದಾರ್ ಕೃಷ್ಣಮೂರ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಜ್ಞಾನಕಾವೇರಿ ವಿಶ್ವವಿದ್ಯಾನಿಲಯದ ಉಪನ್ಯಾಸಕ ಡಾ. ಜಮೀರ್ ಅಹಮದ್ ಅವರು, ದೇವರಾಜು ಅರಸು ಅವರು ರಾಜ್ಯಕ್ಕೆ ಸುದೀರ್ಘಾವಧಿಯ ಮುಖ್ಯಮಂತ್ರಿ ಆಗಿದ್ದವರು. ಹಿಂದುಳಿದ ವರ್ಗಗಳ ಕೈ ಹಿಡಿದ ನಿಜವಾದ ನಾಯಕ ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಕೆ.ಕೆ ಕೃಷ್ಣಮೂರ್ತಿ ಮಾತನಾಡಿ, ದೇವರಾಜ್ ಅರಸು ಅವರು ಅಂದಿನ ಕಾಲದಲ್ಲಿ ಶಿಕ್ಷಣಕ್ಕೆ ಬಹಳಷ್ಟು ಒತ್ತು ನೀಡಿದ್ದರು. ಶಿಕ್ಷಣದಿಂದ ಯಾರೂ ವಂಚಿತರಾಗಬಾರದೆAದು ಹಾಸ್ಟೆಲ್‌ಗಳನ್ನು ತೆರೆಯುವ ಮೂಲಕ ವಿದ್ಯಾರ್ಥಿ ಜೀವನದ ಬದುಕಿಗೆ ಆಶಾಕಿರಣ ಆಗಿದ್ದರು ಎಂದರು.
ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ ಕಾಂತರಾಜು, ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎಂ ಆದಂ, ದಲಿತ ಸಂಘಟನೆಯ ಜಯಪ್ಪ ಹಾನಗಲ್, ತಾಲೂಕು ಮಟ್ಟದ ಅಧಿಕಾರಿಗಳಾದ ಪರಮೇಶ್ ಕುಮಾರ್, ಪ.ಪಂ. ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಬಿ.ಇ.ಒ ಕೃಷ್ಣಪ್ಪ. ಸಮಾಜ ಕಲ್ಯಾಣ ಇಲಾಖೆಯ ಸಿದ್ದೇಗೌಡ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಉಪಸ್ಥಿತರಿದ್ದರು.