ಮಡಿಕೇರಿ, ಆ.೨ ೫: ಈಶಾ ಔಟ್ರೀಚ್ನ ಬೆಂಬಲ ಮತ್ತು ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಪೋಕ್ಲುವಿನ ಪೊನ್ನಾಡ್ ರೈತ ಉತ್ಪಾದಕ ಕಂಪನಿಗೆ ಪ್ರತಿಷ್ಠಿತ ಎಫಿಓ ಔಟ್ ಪುಟ್ ಎಕ್ಸಲೆನ್ಸ್ ಪ್ರಶಸ್ತಿ ಲಭಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕಂಪನಿಯ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ; ಕೇಂದ್ರ ಸರಕಾರ ಪುರಸ್ಕೃತ ಸಂಸ್ಥೆಯಾಗಿರುವ ಪೊನ್ನಾಡ್ ಎಫ್ ಪಿ ಒ ಮಾರುಕಟ್ಟೆ ವಿಭಾಗದಲ್ಲಿ ರಾಜ್ಯದ ಅತ್ಯುತ್ತಮ ಕಾರ್ಯ ನಿರ್ವಹಣೆಯ ರೈತ ಉತ್ಪಾದಕ ಸಂಸ್ಥೆಯಾಗಿ ಗುರುತಿಸಲ್ಪಟ್ಟು ಪ್ರಶಸ್ತಿಗೆ ಭಾಜನವಾಗಿದ್ದು, ಈಚೆಗೆ ಬೆಂಗಳೂರಿನ ಜಿಕೆವಿಕೆ ಸಭಾಂಗಣದಲ್ಲಿ ನಡೆದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ತಿಳಿಸಿದರು.
ಈ ಗೌರವವು ಅತ್ಯಂತ ಸ್ಪರ್ಧಾತ್ಮಕ ಆಯ್ಕೆ ಪ್ರಕ್ರಿಯೆಯ ಮೂಲಕ ಲಭಿಸಿದೆ. ಕರ್ನಾಟಕದ ವಿವಿಧ ಭಾಗಗಳ ಹಲವಾರು ರೈತ ಉತ್ಪಾದಕ ಸಂಸ್ಥೆಗಳು ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು. ಸಂದರ್ಶನ, ದಾಖಲೆಗಳ ಸಮಗ್ರ ಪರಿಶೀಲನೆ ಹಾಗೂ ಅಂತಿಮ ಜ್ಯೂರಿ ಸುತ್ತು ಸೇರಿದಂತೆ ಮೂರು ಹಂತಗಳ ಮೌಲ್ಯ ಮಾಪನದಲ್ಲಿ ಪೊನ್ನಾಡ್ ಎಫ್ಪಿಓ ಯಶಸ್ವಿಯಾಗಿ ಮುನ್ನಡೆದು, ಭಾಗವಹಿಸಿದ ಕಂಪನಿಗಳ ಪೈಕಿ ಕರ್ನಾಟಕದ ನಂ.೧ ಎಫ್ ಪಿಓ ಆಗಿ ಆಯ್ಕೆಯಾಗಿದೆ ಎಂದು ಹೇಳಿದರು.
ರೈತ ಸೇವೆಗಳು
ಆರಂಭದಲ್ಲಿ ೩೧೦ ರೈತ ಷೇರುದಾರರನ್ನು ಹೊಂದಿದ್ದ ಸಂಸ್ಥೆಯು ಇಂದು ೭೫೦ ರೈತ ಷೇರುದಾರರ ಬಲಿಷ್ಠ ಸಂಘಟನೆಯಾಗಿ ಬೆಳೆದಿದೆ. ಷೇರುದಾರರಾಗಲು ರೈತರು ರೂ. ೨,೫೦೦ ಪಾವತಿಸಬೇಕಿದ್ದು, ಕೇಂದ್ರ ಸರಕಾರ ರೂ. ೨ ಸಾವಿರ ತನ್ನ ಬೆಂಬಲ ಹಣ ನೀಡುತ್ತದೆ. ಮೊದಲ ಮೂರು ವರ್ಷಗಳ ಕಾಲ ಸರಕಾರ ನೀಡಲಿದ್ದು, ಇದೀಗ ಮೂರು ವರ್ಷ ಕಳೆದಿರುವದರಿಂದ ಸರಕಾರದ ಹಣ ಸಿಗುವದಿಲ್ಲ, ಹಾಗಾಗಿ ರೈತರು ೪೫೦೦ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದರು.
ಸಂಸ್ಥೆ ಮುಖ್ಯವಾಗಿ ಕಾಫಿ, ಕಾಳುಮೆಣಸು ಮತ್ತು ಏಲಕ್ಕಿಯ ಖರೀದಿ, ಸಂಗ್ರಹಣೆ, ಒಟ್ಟುಗೂಡಿಕೆ ಹಾಗೂ ಮಾರುಕಟ್ಟೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ರೈತರಿಗೆ ಉತ್ತಮ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸುವ ಜೊತೆಗೆ ಸಾಮೂಹಿಕ ವ್ಯವಹಾರ ಚಟುವಟಿಕೆಗಳನ್ನು ಬಲಪಡಿಸುತ್ತಿದೆ. ಕಾಫಿಯನ್ನು ಮಾರುಕಟ್ಟೆ ದರಕ್ಕಿಂತ ಹೆಚ್ಚಿಗೆ ದರದಲ್ಲಿ ರೈತರಿಂದ ಖರೀದಿ ಮಾಡಲಾಗುವದೆಂದು ಹೇಳಿದರು. ಸಂಸ್ಥೆಯು ಕೃಷಿಪರಿಕರ ಮಾರಾಟ ಕೇಂದ್ರವನ್ನು ಸಹ ನಡೆಸುತ್ತಿದ್ದು, ರೈತರಿಗೆ ವಿವಿಧ ತೋಟಗಾರಿಕೆ ಸಂಬAಧಿತ ಸಾಮಗ್ರಿಗಳು ಮತ್ತು ಕೃಷಿಪರಿಕರಗಳನ್ನು ಒದಗಿಸುತ್ತಿದೆ. ಕೃಷಿ ಬಳಕೆಯ ವಸ್ತುಗಳು, ಸಾವಯವ ಗೊಬ್ಬರ, ಮೀನಿನ ಆಹಾರ ಸೇರಿದಂತೆ ಅನೇಕ ಅಗತ್ಯ ಉತ್ಪನ್ನಗಳು ಇಲ್ಲಿ ಲಭ್ಯವಿವೆ.
ಇದರ ಜೊತೆಗೆ, ರೈತ ಷೇರುದಾರರಿಗೆ ಉಪಾಸಿ ಪ್ರಮಾಣೀಕೃತ ಸುಣ್ಣವನ್ನು ಪೂರೈಸುವ ಮೂಲಕ ಗುಣಮಟ್ಟದ ಕೃಷಿ ಮತ್ತು ಉತ್ತಮ ಬೆಳೆ ಪದ್ಧತಿಗಳಿಗೆ ಬೆಂಬಲ ನೀಡುತ್ತಿದೆ. ಬೇರೆ ಕಡೆಗಳಲ್ಲಿ ಸುಣ್ಣಕ್ಕೆ ೫ರಿಂದ ೭ ಸಾವಿರದವರೆಗೆ ನೀಡಬೇಕಾಗಿದ್ದು, ಅದು ಕಳಪೆ ಗುಣಮಟ್ಟದ್ದಾಗಿರುತ್ತದೆ. ಆದರೆ ನಮ್ಮ ಸಂಸ್ಥೆಯಲ್ಲಿ ರೂ.೩೭೫೦ರಿಂದ ೪ಸಾವಿರದಲ್ಲಿ ಗುಣಮಟ್ಟದ ಸುಣ್ಣ ವಿತರಣೆ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ಹಣ ಉಳಿತಾಯವೂ ಅಗಲಿದೆ ಎಂದು ಹೇಳೀದರು.
೧೫ ಕೋಟಿ ವಹಿವಾಟು
೨೦೨೫-೨೬ನೇ ಹಣಕಾಸು ವರ್ಷದಲ್ಲಿ ಕಂಪನಿ ರೂ.೧೫ ಕೋಟಿ ವಹಿವಾಟು ಸಾಧಿಸಿದ್ದು, ರೂ. ಲಕ್ಷ ಲಾಭ ಗಳಿಸಿದೆ. ಹೆಚ್ಚಿನ ಲಾಭಾಂಶದ ನಿರೀಕ್ಷೆಯಿಲ್ಲದೆ ರೈತರು, ಬೆಳೆಗಾರರ ಅನುಕೂಲಕ್ಕಾಗಿ ಕಂಪನಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಉಚಿತ ಮಣ್ಣು ಪರೀಕ್ಷೆ
ಸಂಸ್ಥೆಯು ತನ್ನ ರೈತಷೇರುದಾರರಿಗೆ ಉಚಿತ ಮಣ್ಣು ಪರೀಕ್ಷಾ ಸೇವೆಗಳನ್ನು ಒದಗಿಸುತ್ತಿದ್ದು, ಮಣ್ಣು ಪರೀಕ್ಷೆಯ ಆಧಾರದ ಮೇಲೆ ಪೋಷಕಾಂಶ ನಿರ್ವಹಣೆ ಮತು ಬೆಳೆ ಬೆಳವಣಿಗೆಗೆ ಸಂಬAಧಿಸಿದ ಶಿಫಾರಸು ಹಾಗೂ ಮಾರ್ಗದರ್ಶನ ನೀಡುತ್ತಿದೆ. ಕೊಯಮತ್ತೂರಿನಲ್ಲಿ ೧೬ವಿಧದಲ್ಲಿ ಪರಿಶೀಲನೆ ಮಾಡಲಾಗುತ್ತದೆ. ರೈತರಿಗೆ ಬೆಂಬಲ ನೀಡುವ ಉದ್ದೇಶದಿಂದ ಸಂಸ್ಥೆಯು ಹೊಲಗಳಿಗೆ ಭೇಟಿ ನೀಡಿ, ಬೆಳೆ ನಿರ್ವಹಣೆ ಹಾಗೂ ತಾಂತ್ರಿಕ ಮಾರ್ಗದರ್ಶನವನ್ನು ನೀಡುತ್ತಿದೆ. ಈ ಕ್ಷೇತ್ರ ಮಟ್ಟದ ಸೇವೆಗಳ ಮೂಲಕ ರೈತರಿಗೆ ಬೆಳೆನಿರ್ವಹಣೆ, ಉತ್ಪಾದಕತೆ ಹೆಚ್ಚಳ ಮತ್ತು ಉತ್ತಮ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಪ್ರಾಯೋಗಿಕ ಸಹಕಾರ ನೀಡಲಾಗುತ್ತಿದೆ ಎಂದರು.
ಕಂಪನಿಯ ನಿರ್ದೇಶಕ ಕುಲ್ಲೇಟಿರ ಅಜಿತ್ ನಾಣಯ್ಯ ಮಾತನಾಡಿ; ಕಾಫಿ ಖರೀದಿಯೊಂದಿಗೆ ಸಂಸ್ಕರಣೆ ಮಾಡಿ ಉತ್ತಮ ಗುಣಮಟ್ಟದ ಕಾಫಿ ಪುಡಿ ತಯಾರಿಸಿ ಮಾರುಕಟ್ಟೆಗೆ ತರುವ ಉದ್ದೇಶ ಹೊಂದಲಾಗಿದೆ. ಕಳೆದ ಮೂರು ವರ್ಷಗಳಿಂದ ಕೇಂದ್ರ ಸರಕಾರ, ನಬಾರ್ಡ್ ಎಲ್ಲ ರೀತಿಯ ಸಹಕಾರ ನೀಡಿದೆ. ಈ ಸಾಲಿನಿಂದ ಕಂಪನಿ ತನ್ನ ಸ್ವಂತ ನೆಲೆಯಲ್ಲಿ ನಿಲ್ಲಬೇಕಿದೆ, ಈಶಾ ಔಟ್ರೀಚ್ ನಿರಂತರ ಬೆಂಬಲ ನೀಡುತ್ತಲಿದೆ ಎಂದು ತಿಳಿಸಿದರು. ಇದರೊಂದಿಗೆ ಏಲಕ್ಕಿ, ಕರಿಮೆಣಸು ಖರೀದಿಸಿ ಸಂಸ್ಕರಣೆ ಮಾಡಿ ಪೊನ್ನಾಡ್ ಹೆಸರಿನಲ್ಲಿ ಮಾರುಕಟ್ಟೆಗೆ ತರಲು ಪ್ರಯತ್ನ ಸಾಗುತ್ತಿದೆ. ಮಧ್ಯಮ ಮತ್ತು ಸಣ್ಣ ಬೆಳೆಗಾರರಿಗೆ ಉತ್ತೇಜನ ನೀಡಲಾಗುತ್ತಿದ್ದು, ಯಾರೂ ಬೇಕಾದರೂ ಕಂಪನಿಗೆ ತಾವು ಬೆಳೆದ ಉತ್ಪನ್ನಗಳನ್ನು ನೀಡಬಹುದಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ನಿರ್ದೇಶಕರುಗಳಾದ ಕೇಟೋಳಿರ ರತ್ನ ಚರ್ಮಣ, ಕಾಟುಮಣಿಯಂಡ ಉಮೇಶ್, ಈಶಾ ಔಟ್ರೀಚ್ನ ರಾಜ್ಯ ಸಂಯೋಜಕ ವಿಶ್ವನಾಥ್ ಇದ್ದರು.