ಚೆಯ್ಯಂಡಾಣೆ, ಆ. ೨೫: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ೧,೫೦೧ನೇ ಜನ್ಮದಿನಾಚರಣೆಯ ಅಂಗವಾಗಿ ಆಚರಿಸಲ್ಪಡುವ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕೊಟ್ಟಮುಡಿಯಲ್ಲಿ ‘ಬಡವರ ನೆರವು’ ಸಂಘಟನೆ ಹಾಗೂ ಅಭಿವೃದ್ಧಿ ಸಮಿತಿ ವತಿಯಿಂದ ಕೊಟ್ಟಮುಡಿ ನಾಪೋಕ್ಲು ಮುಖ್ಯರಸ್ತೆಯಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

ನಾಪೋಕ್ಲು-ಮಡಿಕೇರಿ ಮುಖ್ಯ ರಸ್ತೆಯ ಕೊಟ್ಟಮುಡಿ ಜಂಕ್ಷನ್‌ನಿAದ ಕೇಮಾಟ್‌ವರೆಗೆ ರಸ್ತೆಯ ಎರಡು ಬದಿಗಳ ಇಕ್ಕೆಲಗಳಲ್ಲಿ ಆವರಿಸಿ ಕೊಂಡಿದ್ದ ಕಾಡುಗಳನ್ನು ಕಡಿದು ಪ್ಲಾಸ್ಟಿಕ್ ಇನ್ನಿತರ ಕಸ ತ್ಯಾಜ್ಯಗಳನ್ನು ಸ್ವಚ್ಛತಾ ಶ್ರಮದಾನದ ಮೂಲಕ ತೆರವುಗೊಳಿಸಿ ಸಾರ್ವಜನಿಕರ ಹಾಗೂ ವಾಹನ ಸವಾರರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಹೊದ್ದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವತ್ಸಲ ಅವರು ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಸಾಮಾಜಿಕ ಜವಾಬ್ದಾರಿಯ ನೆಲೆಯಲ್ಲಿ ಕೊಟ್ಟಮುಡಿಯ ಯುವಕರು ಹಮ್ಮಿಕೊಂಡಿರುವ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಶ್ಲಾಘನೀಯವಾದದ್ದು ಎಂದರು. ಇಂತಹ ಸ್ವಚ್ಛತಾ ಅಭಿಯಾನ, ಪಂಚಾಯಿತಿ ವ್ಯಾಪ್ತಿಯ ಎಲ್ಲೆಡೆ ನಡೆಯುವಂತಾಗಬೇಕು ಎಂದರು.

ಬಡವರ ನೆರವು ಸಂಘಟನೆ ಸದಸ್ಯ, ಸಮಾಜ ಸೇವಕ ಮೈಸಿ ಕತ್ತಣೀರ ಮಾತನಾಡಿ, ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಮ್ಮ ಗ್ರಾಮದ ಮುಖ್ಯರಸ್ತೆಗಳಲ್ಲಿ ಸಂದೇಶ ಜಾಥಾ ನಡೆಯಲಿದೆ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಆಗಬಾರದು ಎಂಬ ಉದ್ದೇಶ ಹಾಗೂ ಗ್ರಾಮದಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದರು.

ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಬಡವರ ನೆರವು ಸಂಘಟನೆ ಹಾಗೂ ಅಭಿವೃದ್ಧಿ ಸಮಿತಿಯ ಸದಸ್ಯರಾದ ಕೆ.ಎಚ್ ಶೌಕತ್, ಎಂ.ಬಿ ಹಮೀದ್, ಮಹಮ್ಮದ್, ಆಬಿದ್ ಕೆ.ಎಚ್, ರಫೀಕ್, ಜಾಫರ್, ಆಟೋ ಹಂಸ, ಬಷೀರ್, ಸರ್ದಾರ್, ಅಜ್ಮಲ್, ಸೈಫುದ್ದೀನ್, ಮುಜೀಬ್, ಅಬ್ದುಲ್ಲಾ, ಹಮೀದ್, ಸಹೀರ್ ಮತ್ತಿತರರು ಪಾಲ್ಗೊಂಡಿದ್ದರು.