ಗೋಣಿಕೊಪ್ಪಲು, ಆ.೨೪: ಸ್ವಂತ ಸೂರಿಗಾಗಿ ಹಲವು ದಶಕಗಳಿಂದ ಪರಿತಪಿಸುತ್ತಿದ್ದ ಬಡಕುಟುಂಬವೊAದರ ಪಾಲಿಗೆ ಗೋಣಿಕೊಪ್ಪಲಿನ ಜಮಾಅತೆ ಇಸ್ಲಾಮೀ ಹಿಂದ್ ಹಾಗೂ ಚೈತನ್ಯ ಎಜ್ಯುಕೇಶನ್ ಚಾರಿಟೇಬಲ್ ಟ್ರಸ್ಟ್ ಆಸರೆಯಾಗಿ ನಿಂತು ಮಾನವೀಯತೆ ಮೆರೆದಿವೆ.

ಜಾತಿ, ಧರ್ಮದ ಗಡಿ ಮೀರಿ ಸಮಾಜಮುಖಿ ಕಾರ್ಯಕ್ಕೆ ಮುಂದಾದ ಸಂಸ್ಥೆಗಳು ಸುಮಾರು ರೂ. ೧೦ ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಆರ್‌ಸಿಸಿ ಮನೆಯನ್ನು ನಿರ್ಮಿಸಿಕೊಟ್ಟು, ಕುಟುಂಬದ ಬಹುದಿನಗಳ ಸ್ವಂತ ಮನೆಯ ಕನಸನ್ನು ನನಸು ಮಾಡಿವೆ.

ಪೊನ್ನಂಪೇಟೆ ತಾಲೂಕಿನ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಪಾಲ ಪೈಸಾರಿ ಪ್ರದೇಶದಲ್ಲಿ ೫೦ಕ್ಕೂ ಅಧಿಕ ಬಡ ಕುಟುಂಬಗಳು ವಾಸಿಸುತ್ತಿವೆ. ಇದೇ ಪ್ರದೇಶದಲ್ಲಿ ಹಲವು ವರ್ಷಗಳಿಂದ ಸ್ವಂತ ಮನೆಯಿಲ್ಲದೆ ಪ್ಲಾಸ್ಟಿಕ್ ಶೆಡ್‌ನಲ್ಲಿ ಜೀವನ ನಡೆಸುತ್ತಿದ್ದ ಪುಷ್ಪ ಆನಂದ್ ಕುಟುಂಬಕ್ಕೆ ಇದೀಗ ಹೊಸ ಮನೆ ದೊರೆತಿದೆ. ಸುಮಾರು ೧೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ಮನೆಯ ಕೀಲಿಕೈಯನ್ನು ಗ್ರಾಮಸ್ಥರು ಹಾಗೂ ಗಣ್ಯರ ಸಮ್ಮುಖದಲ್ಲಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವಾಮೀಜಿಗಳಿಂದ ಮನೆ ಹಸ್ತಾಂತರ

ವೀರಾಜಪೇಟೆ ಕಳಂಚೇರಿ ಅರಮೇರಿ ಮಠದ ಪೀಠಾಧ್ಯಕ್ಷರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಮನೆಯ ಕೀಲಿಕೈಯನ್ನು ಕುಟುಂಬದವರಿಗೆ ಹಸ್ತಾಂತರಿಸಿ ಆಶೀರ್ವಚನ ನೀಡಿದರು.

ಯಾವುದೇ ಪ್ರಚಾರದ ಹಂಬಲವಿಲ್ಲದೆ, ಜಾತಿ-ಮತದ ಭೇದವಿಲ್ಲದೆ ಕಡುಬಡವರನ್ನು ಗುರುತಿಸಿ ಅವರಿಗೆ ನೆಲೆ ಕಲ್ಪಿಸುತ್ತಿರುವ ಸಂಸ್ಥೆಗಳ ಕಾರ್ಯ ಇಡೀ ಸಮಾಜಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ ಮಾತನಾಡಿ, ಇಂತಹ ಸಮಾಜಮುಖಿ ಕಾರ್ಯಗಳಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೆಪ್ಪುಡೀರ ರಾಮಕೃಷ್ಣ ಅವರು ಸಂಸ್ಥೆಗಳ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿ, ಮುಂದಿನ ದಿನಗಳಲ್ಲಿಯೂ ಇಂತಹ ಕಾರ್ಯಗಳಿಗೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದರು.

ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ವಿಲ್ಸನ್ ಮಾತನಾಡಿ, ತಾನು ೧೦ ವರ್ಷ ಗ್ರಾಮ ಪಂಚಾಯಿತಿ ಸದಸ್ಯನಾಗಿ ಜನಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದರೂ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲು ಸಾಧ್ಯವಾಗಿರಲಿಲ್ಲ. ಇದೀಗ ಜಮಾಅತೆ ಸಂಸ್ಥೆಯು ಯಾರಿಂದಲೂ ಸಾಧ್ಯವಾಗದ ಕೆಲಸವನ್ನು ಮಾಡಿ ತೋರಿಸಿದ್ದು, ಸಮಾಜವೇ ಮೆಚ್ಚುವಂತಹ ಕಾರ್ಯವಾಗಿದೆ ಎಂದು ಪ್ರಶಂಸಿಸಿದರು.

ಜಮಾಅತೆ ಇಸ್ಲಾಮೀ ಹಿಂದ್ ಮೈಸೂರು ವಲಯ ಸಂಚಾಲಕ ಯು. ಅಬ್ದುಸಲಾಂ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಜಮಾಅತೆ ಇಸ್ಲಾಮೀ ಹಿಂದ್ ಜಿಲ್ಲಾಧ್ಯಕ್ಷ ಸಿ.ಹೆಚ್. ಅಪ್ಸರ್, ಗೋಣಿಕೊಪ್ಪ ಅಧ್ಯಕ್ಷ ತನ್ವಿರ್ ಅಹಮ್ಮದ್, ಚೈತನ್ಯ ಎಜ್ಯುಕೇಶನ್ ಚಾರಿಟಬಲ್ ಟ್ರಸ್ಟ್ ಚೇರ್ಮನ್ ಪಿ.ಎಂ. ಮೊಹಮ್ಮದ್, ಎಂ.ಪಿ. ರಜಾಕ್, ಸನೀರ್ ತನ್ವಿರ್, ಪಿ.ಎಂ. ಸಫೀಯಾ ಸೇರಿದಂತೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಆರಂಭದಲ್ಲಿ ರಫೀನಾ ಪ್ರಾರ್ಥಿಸಿದರು. ಅಬ್ದುಲ್ ರೆಹಮಾನ್ ಸ್ವಾಗತಿಸಿ ನಿರೂಪಿಸಿದರು. ನಜೀರ್ ವಂದಿಸಿದರು. ಯಾವುದೇ ಫಲಾಪೇಕ್ಷೆಯಿಲ್ಲದೆ ಬಡ ಕುಟುಂಬದ ಪಾಲಿಗೆ ದಾರಿದೀಪವಾಗಿ ನಿಂತಿರುವ ಜಮಾಅತೆ ಇಸ್ಲಾಮೀ ಹಿಂದ್ ಹಾಗೂ ಚೈತನ್ಯ ಎಜ್ಯುಕೇಶನ್ ಚಾರಿಟಬಲ್ ಟ್ರಸ್ಟ್ನ ಈ ಕಾರ್ಯ ಜಾತಿ-ಧರ್ಮದ ಎಲ್ಲೆಗಳನ್ನು ಮೀರಿ ಸೌಹಾರ್ದತೆ ಹಾಗೂ ಮಾನವೀಯತೆಗೆ ಹಿಡಿದ ಕೈಗನ್ನಡಿಯಾಗಿದೆ. - ಹೆಚ್.ಕೆ. ಜಗದೀಶ್