ಸಿದ್ದಾಪುರ, ಆ.೨೩: ಬ್ರಹ್ಮರ್ಷಿ ಶ್ರೀ ನಾರಾಯಣ ಗುರುಗಳ ೧೭೨ನೇ ಜಯಂತಿಯನ್ನು ತಾ.೨೮ರಂದು ಸಿದ್ದಾಪುರದಲ್ಲಿ ವಿಜೃಂಭಣೆಯಿAದ ಆಚರಿಸಲಾಗುವುದು ಎಂದು ಎಸ್ಎನ್ಡಿಪಿ ಯೂನಿಯನ್ ಕೊಡಗು ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್ ತಿಳಿಸಿದ್ದಾರೆ.
ಸಿದ್ದಾಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಕೊಡಗು ಯೂನಿಯನ್ ಜಿಲ್ಲೆಯಲ್ಲಿ ಸುಮಾರು ೫೧ ಶಾಖೆಗಳನ್ನು ಹೊಂದಿದ್ದು, ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಅನಾರೋಗ್ಯ ಪೀಡಿತರಿಗೆ ಧನಸಹಾಯ, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ಸೇರಿದಂತೆ ವಿವಿಧ ಸಾಮಾಜಿಕ ಸೇವೆಗಳನ್ನು ಸಂಘಟನೆ ನಡೆಸುತ್ತಿದೆ ಎಂದು ತಿಳಿಸಿದರು.
ಪ್ರವಾಹ ಹಾಗೂ ಕೊರೋನಾ ಸಂದರ್ಭದಲ್ಲಿಯೂ ಜನರ ಸಮಸ್ಯೆಗಳಿಗೆ ಸ್ಪಂದಿಸಿರುವ ಸಂಘಟನೆ, ಸಾರ್ವಜನಿಕರ ತುರ್ತು ಸೇವೆಗಾಗಿ ಆ್ಯಂಬ್ಯುಲೆನ್ಸ್ ಹಾಗೂ ಮೃತದೇಹ ಇಡಲು ಫ್ರೀಜರ್ ವ್ಯವಸ್ಥೆಯನ್ನು ಕಲ್ಪಿಸಿದೆ. ಜಿಲ್ಲೆಯ ವಿವಿಧ ಸಮಸ್ಯೆಗಳಿಗೂ ಸಂಘಟನೆ ಬೆಂಬಲ ನೀಡುತ್ತಾ ಬಂದಿದೆ ಎಂದು ಲೋಕೇಶ್ ಹೇಳಿದರು.
ತಾ.೨೮ರಂದು ಬೆಳಿಗ್ಗೆ ೯.೩೦ಕ್ಕೆ ಗುರುಪೂಜೆ ನಡೆಯಲಿದೆ. ಬಳಿಕ ಬೆಳಿಗ್ಗೆ ೧೦ ಗಂಟೆಗೆ ಕುಶಾಲನಗರದ ಜ್ಞಾನಗಂಗಾ ರೆಸಿಡೆನ್ಶಿಯಲ್ ಶಾಲೆಯ ಲೆಕ್ಕ ಪರಿಶೋಧಕ ಹಾಗೂ ಆಡಳಿತ ಮಂಡಳಿ ನಿರ್ದೇಶಕ ಸುದೀರ್ ಟಿ.ಕೆ. ಧ್ವಜಾರೋಹಣ ನೆರವೇರಿಸಲಿದ್ದಾರೆ.
ಬೆಳಿಗ್ಗೆ ೧೦.೩೦ಕ್ಕೆ ಚಂಡೆ ವಾದ್ಯದೊಂದಿಗೆ ಶ್ರೀ ನಾರಾಯಣ ಗುರುಗಳ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಮೆರವಣಿಗೆಗೆ ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೆ.ಕೆ. ಶ್ರೀನಿವಾಸ್ ಚಾಲನೆ ನೀಡಲಿದ್ದಾರೆ.
ಪೂರ್ವಾಹ್ನ ೧೧.೪೫ಕ್ಕೆ ಸಿದ್ದಾಪುರದ ಸ್ವರ್ಣಮಾಲ ಕಲ್ಯಾಣ ಮಂಟಪದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಎಸ್ಎನ್ಡಿಪಿ ಜಿಲ್ಲಾ ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಅರಮೇರಿ ಕಳಂಚೇರಿ ಮಠದ ಪೀಠಾಧ್ಯಕ್ಷ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್, ಜಿಲ್ಲಾ ಹಿಂದೂ ಮಲೆಯಾಳಿ ಸಮಾಜದ ಅಧ್ಯಕ್ಷ ವಿ.ಎಂ ವಿಜಯನ್, ಕರ್ನಾಟಕ ರಾಜ್ಯ ಈಡಿಗ ಕ್ಷೇಮಾಭಿವೃದ್ಧಿ ಸಂಸ್ಥೆಯ ಉಪಾಧ್ಯಕ್ಷ ಎಸ್. ಮಹೇಶ್ ಕುಮಾರ್, ಸಮಾಜ ಸೇವಕ ಹಾಗೂ ಉದ್ಯಮಿಯಾಗಿರುವ ಎಡಿಕೇರಿ ಪ್ರಸನ್ನ, ಪ್ಯಾಡಿಂಗ್ಟನ್ ಎಕ್ಸ್ಪ್ರೆಸ್ ಲಗ್ಸುರಿ ಬೋಟಿಕ್ ಹೋಟೆಲ್ ಮಾಲೀಕ ಟಿ.ಎಲ್. ಪ್ರವೀಣ್ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ.
ಜಿಲ್ಲೆಯ ವಿವಿಧೆಡೆಗಳಿಂದ ಸುಮಾರು ೩ ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸಂಘಟನೆಯ ಸದಸ್ಯರ ಮಕ್ಕಳಲ್ಲಿ ೧೦ನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.೯೦ಕ್ಕೂ ಅಧಿಕ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು.
ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಮಾಜದವರನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಗೌರವಿಸಲಾಗುವುದು ಎಂದು ಲೋಕೇಶ್ ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕೇರಳದ ಕಣ್ಣೂರು ಜಿಲ್ಲೆಯ ಹರಿಶ್ರೀ ಫೋಕ್ ಮೆಗಾ ಶೋ ತಂಡದಿAದ ರಸಮಂಜರಿ ಕಾರ್ಯಕ್ರಮವೂ ನಡೆಯಲಿದೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಎಸ್ಎನ್ಡಿಪಿ ಯೂನಿಯನ್ ಕಾರ್ಯದರ್ಶಿ ಪ್ರೇಮಾನಂದ, ಆಚರಣಾ ಸಮಿತಿ ಅಧ್ಯಕ್ಷ ಹರಿದಾಸ್ ಪಿ.ಎಸ್., ಕಾರ್ಯದರ್ಶಿ ರೆಜಿತ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ರೀಶಾ ಸುರೇಂದ್ರ ಹಾಗೂ ಸಂಘಟನೆಯ ಪದಾಧಿಕಾರಿಗಳಾದ ಗಿರೀಶ್ ಮಟ್ಟಂ, ರಾಜು, ಮೋಹನ್ ದಾಸ್, ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.