ಸಿದ್ದಾಪುರ, ಆ.೨೩: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ವಿದ್ಯುತ್ ಸ್ಪರ್ಶಗೊಂಡು ಕಾರ್ಮಿಕ ಮೃತಪಟ್ಟ ಘಟನೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಚ್ಚಿನಾಡು ಗ್ರಾಮದಲ್ಲಿ ನಡೆದಿದೆ.

ಹಚ್ಚಿನಾಡು ಗ್ರಾಮದ ನಿವಾಸಿ ಎಂ. ಸುರೇಶ್ ನಾಣಯ್ಯ ಅವರ ಕಾಫಿ ತೋಟದ ಲೈನ್‌ಮನೆಯಲ್ಲಿ ವಾಸವಿದ್ದ ಕಾರ್ಮಿಕ ಮಣಿ (೬೦) ಮೃತಪಟ್ಟ ವ್ಯಕ್ತಿ

ಭಾನುವಾರ ಮಧ್ಯಾಹ್ನ ಸುಮಾರು ೨.೩೦ರ ವೇಳೆಗೆ ಮಣಿ ಅವರು ತಮ್ಮ ಅಳಿಯನೊಂದಿಗೆ ತೋಟದಲ್ಲಿ ಅಡಿಕೆ ಮರಕ್ಕೆ ಔಷಧಿ ಸಿಂಪಡಿಸುವ ಕೆಲಸ ಮಾಡುತ್ತಿದ್ದ ಸಂದರ್ಭ ತೋಟದೊಳಗೆ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಔಷಧಿ ಸಿಂಪಡಣೆಯ ಪೈಪ್ ಮತ್ತು ಗನ್ ತಗುಲಿ ಘಟನೆ ನಡೆದಿರಬಹುದು ಎನ್ನಲಾಗಿದೆ. ವಿದ್ಯುತ್ ಆಘಾತಕ್ಕೆ ಒಳಗಾದ ಮಣಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಅಳಿಯ ಹಾಗೂ ತೋಟದ ಮಾಲೀಕರು ಮಣಿಯನ್ನು ಅಮ್ಮತ್ತಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಮುಂದಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಳಿಕ ಮೃತದೇಹವನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರಕ್ಕೆ ತರಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ಘಟನೆಗೆ ಸಂಬAಧಿಸಿದAತೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.