ವೀರಾಜಪೇಟೆ, ಆ. ೨೩: ರಕ್ತಕ್ಕೆ ಯಾವುದೇ ಜಾತಿ, ಧರ್ಮ, ಮತ ಅಥವಾ ಭಾಷೆಯ ಭೇದವಿಲ್ಲ. ಪ್ರತಿಯೊಬ್ಬ ಮನುಷ್ಯನ ರಕ್ತವೂ ಒಂದೇ ಎಂದು ವೀರಾಜಪೇಟೆ ಡಿವೈಎಸ್ಪಿ ಎಸ್. ಮಹೇಶ್ ಕುಮಾರ್ ಹೇಳಿದರು.

ವೀರಾಜಪೇಟೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜ್ಞಾನಗಂಗಾ ಭವನದಲ್ಲಿ ವಿಶ್ವ ಸಹೋದರತ್ವ ದಿನ ಹಾಗೂ ರಾಜಯೋಗಿನಿ ದಾದಿ ಪ್ರಕಾಶಮಣಿ ಅವರ ೧೯ನೇ ಪುಣ್ಯಸ್ಮರಣೆಯ ಅಂಗವಾಗಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ರೋಟರಿ ವೀರಾಜಪೇಟೆ, ಸಮಾಜ ಸೇವಾ ವಿಭಾಗ ಹಾಗೂ ಮಡಿಕೇರಿ ಜಿಲ್ಲಾ ರಕ್ತನಿಧಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಜಾತಿ ಮತ್ತು ಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವಂತಹ ಕೃತ್ಯಗಳು ಹೆಚ್ಚಾಗುತ್ತಿವೆ. ಈ ಗಡಿಗಳನ್ನು ಮೀರಿ ಪ್ರತಿಯೊಬ್ಬ ನಾಗರಿಕನೂ ಒಂದಾಗಿ ಸಮಾಜ ಹಾಗೂ ದೇಶವನ್ನು ಕಾಪಾಡುವ ಬೃಹತ್ ಆಂದೋಲನ ರೂಪಿಸಬೇಕಾಗಿದೆ ಎಂದರು.

ಇAದಿನ ಮಕ್ಕಳು ಹಾಗೂ ಯುವಜನತೆ ಪದಾರ್ಥಗಳ ನಡುವೆ ಸಿಲುಕಿಕೊಂಡು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಸಮಾಜವನ್ನು ನಶೆ ಮುಕ್ತಗೊಳಿಸುವುದು ಕೇವಲ ಪೊಲೀಸ್ ಇಲಾಖೆ ಅಥವಾ ಸರ್ಕಾರದ ಕೆಲಸವಲ್ಲ. ಇಡೀ ಸಮಾಜವೇ ಜವಾಬ್ದಾರಿ ವಹಿಸಿಕೊಂಡು ಇದರ ವಿರುದ್ಧ ಅಭಿಯಾನವನ್ನು ದೊಡ್ಡ ಮಟ್ಟದಲ್ಲಿ ನಡೆಸಬೇಕಿದೆ ಎಂದರು.

ಮಡಿಕೇರಿ ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕರುಂಬಯ್ಯ ಕೆ.ಪಿ. ಮಾತನಾಡಿ, ಆರೋಗ್ಯವಂತ ವ್ಯಕ್ತಿ ಮಾಡುವ ಒಂದು ಯೂನಿಟ್ ರಕ್ತದಾನವು ಮೂರು ಜೀವಗಳನ್ನು ಉಳಿಸಬಲ್ಲದು. ಹಾಗಾಗಿ ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಕರೆ ನೀಡಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕೋಮಲ ಅವರು ಮಾತನಾಡಿ, ರಾಜಯೋಗಿನಿ ದಾದಿ ಪ್ರಕಾಶಮಣಿ ಅವರ ಜೀವನ ಹಾಗೂ ಅವರ ಸಮಾಜ ಸೇವೆಯನ್ನು ಸ್ಮರಿಸಿದರು.

ಅತೀ ಹೆಚ್ಚು ಬಾರಿ ರಕ್ತದಾನ ಮಾಡಿರುವ ಹಿನ್ನೆಲೆಯಲ್ಲಿ ಶಿಬಿರದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಚೆಸ್ಕಾಂ ಉದ್ಯೋಗಿ ರವಿಶಂಕರ್ ಅವರು, ತಾನು ೭೦ ಬಾರಿ ರಕ್ತದಾನ ಮಾಡಿದ್ದೇನೆ. ರಕ್ತದಾನ ಮಾಡುವುದರಿಂದ ಆರೋಗ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು.

ಈ ರಕ್ತದಾನ ಶಿಬಿರದಲ್ಲಿ ವೀರಾಜಪೇಟೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಕ್ರಿಯವಾಗಿ ಭಾಗವಹಿಸಿ ಮಾದರಿಯಾಗಿದ್ದಾರೆ. ವಿರಾಜಪೇಟೆಯ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹಾಗೂ ಪೊಲೀಸ್ ಸಿಬ್ಬಂದಿಗಳು ರಕ್ತದಾನ ಮಾಡುವ ಮೂಲಕ ರಕ್ತದಾನದ ಮಹತ್ವವನ್ನು ಎತ್ತಿಹಿಡಿದರು. ರೋಟರಿ ಕ್ಲಬ್ ಅಧ್ಯಕ್ಷ ಗಗನ್ ಸನ್ಮಾನಿತರ ಪರಿಚಯ ಮಾಡಿದರು. ವೇದಿಕೆಯಲ್ಲಿದ್ದ ಗಣ್ಯರನ್ನು ಗೌರವಿಸಲಾಯಿತು. ರಕ್ತದಾನ ಮಾಡಿದವರಿಗೆ ಪ್ರಮಾಣ ಪತ್ರ ನೀಡಲಾಯಿತು.