ನಾಪೋಕ್ಲು, ಆ. ೨೨: ಗಣಪತಿ ಸೇವಾ ಸಮಿತಿ ಪದಾಧಿಕಾರಿಗಳ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಐದು ಗಣಪತಿಗಳ ಉತ್ಸವವನ್ನು ಒಟ್ಟಾಗಿ ಆಚರಿಸಿ ಗಣಪತಿ ಉತ್ಸವವನ್ನು ಅದ್ದೂರಿಯಾಗಿ ಮತ್ತು ಸ್ಮರಣೀಯವಾಗಿ ಆಚರಿಸುವಂತೆ ನಾಪೋಕ್ಲು ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಪಂಚ ಗಣೇಶೋತ್ಸವ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ನಾಪೋಕ್ಲುವಿನ ಐದು ಗಣೇಶೋತ್ಸವ ಸಮಿತಿಗಳ ಸದಸ್ಯರು ಹಾಗೂ ಹಿಂದೂ ಮುಖಂಡರು ಸಭೆಯಲ್ಲಿ ಭಾಗವಹಿಸಿ, ಗಣಪತಿ ಉತ್ಸವಕ್ಕೆ ಸಂಬAಧಿಸಿದAತೆ ನಾಪೋಕ್ಲುವಿನ ಹಿಂದೂಗಳ ನಡುವೆ ಉಂಟಾಗಿದ್ದ ಕೆಲವು ತಪ್ಪು ತಿಳುವಳಿಕೆಗಳು ಮತ್ತು ಭಿನ್ನಾಭಿಪ್ರಾಯಗಳ ಕುರಿತು ಚರ್ಚಿಸಿ, ಒಮ್ಮತದ ನಿರ್ಧಾರಕ್ಕೆ ಬಂದರು. ಮುಖಂಡ ಶಿವಚಾಳಿಯಂಡ ಜಗದೀಶ್ ಮಾತನಾಡಿ, ನಾಪೋಕ್ಲುವಿನಲ್ಲಿ ಹಿಂದೂ ಸಮಾಜಕ್ಕಾಗಿ ಹಾಗೂ ನಮ್ಮ ಸಂಪ್ರದಾಯಗಳನ್ನು ಉಳಿಸಿಕೊಂಡು ಹೋಗಲು ಶ್ರಮಿಸುತ್ತಿರುವ ಯುವಕರು ಕೆಲವೇ ಮಂದಿ ಇದ್ದಾರೆ. ವೈಮನಸ್ಸು ಇಟ್ಟುಕೊಳ್ಳುವುದರಿಂದ ಯಾವುದೇ ಸಮಸ್ಯೆ ಪರಿಹಾರವಾಗುವುದಿಲ್ಲ. ಎಲ್ಲರೂ ಹಿಂದಿನ ವಿಚಾರಗಳನ್ನು ಮರೆತು, ಒಂದಾಗಿ, ಒಗ್ಗಟ್ಟಿನಿಂದ ಗಣಪತಿ ಉತ್ಸವವನ್ನು ಅದ್ದೂರಿಯಾಗಿ ನಡೆಸಬೇಕು ಎಂದರು.

ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಮಾತನಾಡಿ, ಎಲ್ಲರೊಂದಿಗೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳಬೇಕು, ಎಲ್ಲರನ್ನು ಗೌರವಿಸಬೇಕು ಮತ್ತು ಗಣಪತಿ ಉತ್ಸವವನ್ನು ಉತ್ತಮವಾಗಿ ಆಯೋಜಿಸಿ ಎಲ್ಲರೂ ಹೆಮ್ಮೆಪಡುವಂತೆ ಮಾಡಬೇಕು ಎಂದರು. ಸಣ್ಣಪುಟ್ಟ ವಿಚಾರಗಳಿಗೆ ಜಗಳ, ವಾದ ವಿವಾದಗಳಿಗೆ ಹೋಗದೆ, ಸಂಪ್ರದಾಯ ಮತ್ತು ಆಚರಣೆಗಳನ್ನು ಹಿಂದಿನAತೆ ಮುಂದುವರಿಸಿಕೊAಡು ಹೋಗಬೇಕು ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಸದಸ್ಯರು ಈ ಮಾತುಗಳಿಗೆ ಒಪ್ಪಿಗೆ ಸೂಚಿಸಿ, ಐದು ಗಣಪತಿ ಸಮಿತಿಗಳ ನಡುವೆ ಒಗ್ಗಟ್ಟು, ಪರಸ್ಪರ ಗೌರವ ಮತ್ತು ಸಹಕಾರವನ್ನು ಕಾಪಾಡಿಕೊಂಡು ಕೆಲಸ ಮಾಡುವುದಾಗಿ ನಿರ್ಧರಿಸಿದರು.

ಮುತ್ತಪ್ಪ ದೇವಸ್ಥಾನದ ಗಣಪತಿ ಸೇರಿದಂತೆ ಎಲ್ಲಾ ಐದು ಗಣಪತಿಗಳ ಉತ್ಸವವನ್ನು ಯಶಸ್ವಿಯಾಗಿ ನಡೆಸಲು ಎಲ್ಲರೂ ಕೈಜೋಡಿಸುವಂತೆ ಕರೆ ನೀಡಿದರು. ಸಭೆಯಲ್ಲಿ ೫ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.