ಮಡಿಕೇರಿ, ಆ. ೨೨: ಪಶ್ಚಿಮಘಟ್ಟ ಉಳಿದರೆ ಮಾತ್ರ ನೈಸರ್ಗಿಕ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ. ಅದೇ ರೀತಿ ಕೊಡಗಿನ ಜನರು ಉಳಿಯಬೇಕಾಗಿದೆ. ಈ ನಿಟ್ಟಿನಲ್ಲಿ ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆಯನ್ನು ಸರಕಾರ ತಿರಸ್ಕಾರ ಮಾಡಿದ್ದು, ಪದೇ ಪದೇ ಗೊಂದಲ ಮೂಡದಿರಲು ವರದಿಯಲ್ಲಿ ಏನು ಮಾಡಲು ಅವಕಾಶವಿದೆ ಎಂಬುದನ್ನು ಕೇಂದ್ರ ಸರಕಾರ ಸ್ಪಷ್ಟಪಡಿಸಲಿ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಒತ್ತಾಯಿಸಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರಕಾರ ಹಲವು ಬಾರಿ ತಿರಸ್ಕರಿಸಿದ್ದು, ಇದೀಗ ಮತ್ತೊಮ್ಮೆ ಕರಡು ಅಧಿಸೂಚನೆಯನ್ನು ತಿರಸ್ಕಾರ ಮಾಡಿದೆ. ಕೊಡಗಿನ ಗ್ರಾಮಗಳನ್ನು ಸೇರಿಸಿರುವುದು ಸಹಜವಾಗಿ ಆತಂಕ ಮೂಡಿಸುತ್ತದೆ. ಪರಿಸರ ಸಂರಕ್ಷಣೆಯೊAದಿಗೆ ಜನರ ಹಿತಾಸಕ್ತಿ ಕಾಪಾಡುವುದು ಕೂಡ ಸರಕಾರದ ಕರ್ತವ್ಯವಾಗಿದೆ ಎಂದು ಪೊನ್ನಣ್ಣ ಅಭಿಮತ ವ್ಯಕ್ತಪಡಿಸಿದರು.
ಪರಿಸರ ಹಾಗೂ ಪಶ್ಚಿಮಘಟ್ಟ ಖಂಡಿತವಾಗಿಯೂ ಸಂರಕ್ಷಣೆಯಾಗಲೇಬೇಕು; ಇದು ರಕ್ಷಣೆಯಾದರೆ ಮಾತ್ರ ದೇಶ ಉಳಿಯುತ್ತದೆ. ನೈಸರ್ಗಿಕ ಸಮತೋಲನ ಕಾಯ್ದುಕೊಳ್ಳಬಹುದಾಗಿದೆ. ಈ ವಿಷಯದಲ್ಲಿ ಪರ-ವಿರೋಧದೊಂದಿಗೆ ವಾಸ್ತವಾಂಶವನ್ನು ತಿಳಿದುಕೊಳ್ಳಬೇಕಾಗಿದೆ. ವರದಿ ಜಾರಿಯಿಂದ ಗ್ರಾಮೀಣ ಭಾಗದ ಜನಜೀವನ, ಕೃಷಿ ಚಟುವಟಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈಗಾಗಲೇ ಅರಣ್ಯ ಇಲಾಖೆಯ ಅನೇಕ ಕಡಿವಾಣಗಳಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈ ಕರಡು ಅಧಿಸೂಚನೆಯನ್ನು ಒಪ್ಪಲಾಗುವುದಿಲ್ಲ. ಕೇಂದ್ರ ಸರಕಾರ ಈಗಾಗಲೇ ಕರಡು ಅಧಿಸೂಚನೆ ಹೊರಡಿಸಿದ್ದು, ಅದರಲ್ಲಿ ಯಾವುದಕ್ಕೆ ನಿರ್ಬಂಧ ಹೇರಲಾಗುವುದು ಎಂಬುದನ್ನು ಸ್ಪಷ್ಟಪಡಿಸಲಿ. ಗಣಿಗಾರಿಕೆ, ಕ್ವಾರಿ, ಐಷಾರಾಮಿ ರೆಸಾರ್ಟ್ಗಳನ್ನು ಬಂದ್ ಮಾಡಲಿ ಅದಕ್ಕೆ ನಮ್ಮ ವಿರೋಧವಿಲ್ಲ ಎಂದು ಹೇಳಿದ ಅವರು, ಕೃಷಿ ಚಟುವಟಿಕೆ ಸಂಬAಧ ಬಾವಿ ನಿರ್ಮಾಣ, ಮರ ಕಪಾತ್‌ನಂತಹ ಚಟುವಟಿಕೆಗಳಿಗೆ ನಿರ್ಬಂಧ ಹೇರುವುದನ್ನು ಒಪ್ಪಲಾಗುವುದಿಲ್ಲ ಎಂದರು.
ಕಾಡಾನೆ ಹಾವಳಿ ಪರಿಹಾರಕ್ಕೆ ಪ್ರಯತ್ನ
ಈಗಾಗಲೇ ಕಾಡಾನೆ ಕಾರ್ಯಾಚರಣೆ ಕೈಗೊಂಡು ೨ ಆನೆಗಳನ್ನು ಸೆರೆಹಿಡಿಯಲಾಗಿದೆ. ಆದರೆ, ಮತ್ತೇ ಅದನ್ನು ಕಾಡಿಗೆ ಬಿಟ್ಟರೆ ಮರಳಿ ತೋಟಗಳಿಗೆ ಲಗ್ಗೆಯಿಡುತ್ತವೆ. ಈ ಹಿನ್ನೆಲೆ ಕೆಲವೊಂದು ವ್ಯವಸ್ಥಿತ ಕ್ರಮಗಳ ಅಗತ್ಯವಿದೆ ಎಂದು ಪೊನ್ನಣ್ಣ ಅಭಿಪ್ರಾಯಿಸಿದರು.
ಕೊಡಗಿನಲ್ಲಿ ದುಬಾರೆ ಮತ್ತು ಮತ್ತಿಗೋಡಿನಲ್ಲಿ ಮಾತ್ರ ಸಾಕಾನೆ ಶಿಬಿರಗಳಿದ್ದು, ಸೆರೆಯಾದ ಆನೆಯನ್ನು ದುಬಾರೆ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲಿರುವ ಕ್ರಾಲ್‌ಗಳ ಸಂಖ್ಯೆ ಹೆಚ್ಚಾಗಬೇಕು. ವ್ಯವಸ್ಥೆಗಳನ್ನು ಬಲಪಡಿಸಬೇಕಾಗಿದೆ. ಅಲ್ಲದೆ ಈ ಹಿಂದಿನ ಅರಣ್ಯ ಸಚಿವರು ಕಾಡಾನೆಯನ್ನು “ಸಾಫ್ಟ್ ಲಾಂಚ್'' ಮಾಡುವ ಸಂಬAಧ ಯೋಜನೆ ರೂಪಿಸಿದ್ದರು. ಅದು ಲಾಭದಾಯಕವಾಗಿದ್ದರೆ ಯೋಜನೆ ಅನುಷ್ಠಾನಕ್ಕೂ ಪ್ರಯತ್ನಿಸಲಾಗುವುದು. ರೈಲ್ವೆ ಬ್ಯಾರಿಕೇಡ್, ಕಂದಕ, ಸೋಲಾರ್ ಬೇಲಿ ಸೇರಿದಂತೆ ಹಂತಹAತವಾಗಿ ಕಾರ್ಯಕ್ರಮ ಹಮ್ಮಿಕೊಂಡು ಕಾಡಾನೆ ಹಾವಳಿ ನಿಯಂತ್ರಣಕ್ಕೆ ಪ್ರಯತ್ನಿಸಲಾಗುತ್ತಿದೆ. ಕಾಡಾನೆ ಕಡಿಮೆ ಇರುವ ರಾಜ್ಯಗಳಿಗೂ ಅನೆಗಳನ್ನು ಹಸ್ತಾಂತರಿಸಬಹುದಾಗಿದೆ ಎಂದರು.
ರಸ್ತೆಗಳ ಸ್ಥಿತಿ ಸುಧಾರಿಸಿವೆ
ಕೊಡಗಿನ ರಸ್ತೆ ಮೊದಲಿಗಿಂತ ಸುಧಾರಿಸಿದ್ದು, ಕೆಲವೊಂದು ರಸ್ತೆಗಳ ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ ಎಂದು ಪೊನ್ನಣ್ಣ ಮಾಹಿತಿ ನೀಡಿದರು.
ಭಾಗಮಂಡಲ ರಸ್ತೆ ಉತ್ತಮವಾಗಿ ನಿರ್ಮಾಣವಾಗಿದ್ದು, ವೀರಾಜಪೇಟೆ-ಮಡಿಕೇರಿ ಹಾಗೂ ನಾಪೋಕ್ಲು ರಸ್ತೆ ದುರಸ್ತಿಗೆ ಟೆಂಡರ್ ಆಗಿದೆ. ವೀರಾಜಪೇಟೆ ರಸ್ತೆ ನಿರ್ಮಾಣಕ್ಕೆ ರೂ. ೪೦ ಕೋಟಿ ಅನುದಾನವೂ ಬಿಡುಗಡೆಯಾಗಿದೆ. ಗ್ರಾಮೀಣ ರಸ್ತೆಗಳು ದುರಸ್ತಿಯಾಗುತ್ತಿದ್ದು, ರಾಜಕೀಯ ಪ್ರಚಾರಕ್ಕಾಗಿ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಎಲ್ಲಾ ರಸ್ತೆಯೂ ಸರಿಯಾಗಿದೆ ಎಂದು ಹೇಳಲಾಗುವುದಿಲ್ಲ. ಆದರೆ, ೩ ವರ್ಷಗಳಲ್ಲಿ ಗರಿಷ್ಠ ಪ್ರಮಾಣದ ಕೆಲಸವಾಗಿದೆ ಎಂದರು.
ವೀರಾಜಪೇಟೆ ಆಸ್ಪತ್ರೆ ಮೇಲ್ದರ್ಜೆಗೆ ಅನುಮೋದನೆ ಯಾಗಿದೆ. ವಿದ್ಯುತ್ ಜಾಲ ಬಲವರ್ಧನೆಗೊಳಿಸಲಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಲಾಗುವುದು ಎಂದು ಪೊನ್ನಣ್ಣ ಹೇಳಿದರು. ಇದೇ ಸಂದರ್ಭ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡ ಪೊನ್ನಣ್ಣ ಅವರನ್ನು ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿ ಹೆಚ್.ಜೆ. ರಾಕೇಶ್ ಹಾಜರಿದ್ದರು.
ರಾಕೇಶ್ ಸ್ವಾಗತಿಸಿ, ಖಜಾಂಚಿ ಸುನಿಲ್ ಪೊನ್ನೇಟಿ ವಂದಿಸಿದರು.