ವಿಶೇಷ ವರದಿ : ಚಂದ್ರಮೋಹನ್
ಕುಶಾಲನಗರ, ಆ. ೨೩: ಮುಂದಿನ ದಿನಗಳಲ್ಲಿ ಕಾಡಾನೆಯನ್ನು ಸಮೀಪದಿಂದ ನೋಡಬಹುದು...! ಆದರೆ ಸಾಕಾನೆ ಶಿಬಿರಗಳಲ್ಲಿ ಮಾತ್ರ. ಇನ್ನು ಮುಂದೆ ಆನೆಗಳನ್ನು ವೀಕ್ಷಿಸಬೇಕಾದರೆ ೧೦ ಮೀಟರ್ ಅಂತರ ಕಾಪಾಡಲೇಬೇಕು.. ಆನೆಯನ್ನು ಮುಟ್ಟುವುದು, ಮೈ ಮುಟ್ಟಿ ನಮಸ್ಕರಿಸುವುದು. ಆಹಾರ ತಿನಿಸುವುದು, ನದಿಯಲ್ಲಿ ಆನೆ ಮೇಲೆಯೇ ಕುಳಿತು ಸ್ನಾನ ಮಾಡಿಸುವುದು, ಸೆಲ್ಫಿ ತೆಗೆದುಕೊಳ್ಳುವುದು, ಆನೆ ಬಾಲ ಎಳೆಯುವುದು ಇದೆಲ್ಲಾ ಕನಸಿನಲ್ಲಿ ಮಾತ್ರ ಸಾಧ್ಯ.
ಹಿಂದಿನ ದಿನಗಳಲ್ಲಿ ಆನೆ ಶಿಬಿರಗಳಲ್ಲಿ ಗಜರಾಜನೊಂದಿಗೆ ಮಾಡಿರುವ ಆಟ ಚೆಲ್ಲಾಟಗಳು ಮತ್ತು ಇದೀಗ ಎಸ್ಓಪಿ ಅನುಷ್ಠಾನಗೊಂಡ ಮೇಲೆ ಸಾರ್ವಜನಿಕರಿಗೆ ಶಿಬಿರಗಳಲ್ಲಿ ಗಜನನ್ನು ಕಾಣಬೇಕಾದಲ್ಲಿ ಅಜಗಜಾಂತರ ವ್ಯತ್ಯಾಸ ಕಂಡು ಬರಲಿರುವುದಂತೂ ನಿಶ್ಚಿತ...
ಸಾಕಾನೆ ಶಿಬಿರಗಳ ಸುರಕ್ಷತಾ ವಿಧಾನಗಳನ್ನು ಈಗಾಗಲೇ ರೂಪಿಸಿದ್ದು, ಕುಶಾಲನಗರ ಸಮೀಪದ ದುಬಾರೆ ಮತ್ತು ಹಾರಂಗಿ ಸಾಕಾನೆ ಶಿಬಿರದಲ್ಲಿ ಸುರಕ್ಷತಾ ವಿಧಾನಗಳಲ್ಲಿನ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಷ್ಠಾನಗೊಳಿಸಲು ಸಿದ್ಧತೆ ನಡೆದಿದೆ.
ಮುಖ್ಯ ವನ್ಯಜೀವಿ ಪರಿಪಾಲಕರ ಕಚೇರಿಯಿಂದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಈಗಾಗಲೇ ಕರ್ನಾಟಕ ಸಾಕಾನೆ ಶಿಬಿರದ ಸುರಕ್ಷಿತ ವಿಧಾನಗಳನ್ನು ರೂಪಿಸಿರುವ ಬಗ್ಗೆ ಜಿಲ್ಲೆಯ ಅರಣ್ಯ ಅಧಿಕಾರಿಗಳಿಗೆ ಸಮಗ್ರ ಮಾಹಿತಿ ರವಾನಿಸಿದ್ದು ಸಾಕಾನೆ ಶಿಬಿರಗಳು ಸಾರ್ವಜನಿಕ ಪ್ರವೇಶಕ್ಕೆ ಯೋಗ್ಯವಾಗಿರುವ ಬಗ್ಗೆ ಸಂಬAಧಪಟ್ಟ ಶಿಬಿರಗಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅನುಮತಿಗಾಗಿ ಪೂರ್ವ ಸಿದ್ಧತೆಗಳ ಬಗ್ಗೆ ಮಾಹಿತಿ ಒದಗಿಸುವಂತೆ ನಿಯಮಗಳ ಪಟ್ಟಿ ನೀಡುವ ಮೂಲಕ ಸೂಚನೆ ನೀಡಿದ್ದಾರೆ.
ಸುರಕ್ಷಿತ ಪರಿಸರ ಪ್ರವಾಸೋದ್ಯಮ ಪ್ರವಾಸಿಗರ ಜಾಗೃತಿ, ಆನೆ ಕಲ್ಯಾಣ ಮತ್ತು ವನ್ಯಜೀವಿ ಸುರಕ್ಷತಾ ವ್ಯವಸ್ಥೆಗಾಗಿ ಸುರಕ್ಷತಾ ವಿಧಾನಗಳನ್ನು ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
ಆನೆ ಶಿಬಿರಗಳಿಗೆ ಬರುವ ಪ್ರವಾಸಿಗರ ಭೇಟಿಯ ಉದ್ದೇಶ, ಪ್ರವಾಸಿಗರು ವಿದ್ಯಾರ್ಥಿಗಳು ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಮಾಧ್ಯಮ ಮತ್ತು ಅಧಿಕಾರಿಗಳು ಹಾಗೂ ಇತರ ಭೇಟಿದಾರರಿಗೆ ಸಾಕಾನೆಗಳನ್ನು ವೀಕ್ಷಿಸಲು ಅನುಮತಿಸಲಾದ ಸ್ಥಳಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿ ಕಾರ್ಯ ಚಟುವಟಿಕೆ ರೂಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಆನೆ ಶಿಬಿರದಲ್ಲಿ ಪಾಲಿಸಬೇಕಾದ ೧೦ ಕಡ್ಡಾಯ ಸುರಕ್ಷತಾ ನಿಯಮಗಳನ್ನು ಪಟ್ಟಿಯಲ್ಲಿ ನಮೂದಿಸಲಾಗಿದ್ದು ಸಾರ್ವಜನಿಕರು ಸಾಕಾನೆಗಳೊಂದಿಗೆ ಯಾವುದೇ ಭೌತಿಕ ಸಂಪರ್ಕವನ್ನು ಹೊಂದುವAತಿಲ್ಲ, ಮುಟ್ಟುವುದು, ನೇರವಾಗಿ ಆಹಾರ ನೀಡುವುದು, ಸ್ನಾನ ಮಾಡಿಸುವುದು, ಆನೆಗಳ ಹತ್ತಿರ ಸೆಲ್ಫಿ ತೆಗೆದುಕೊಳ್ಳುವುದು ಮತ್ತು ಆನೆಗಳ ಹತ್ತಿರ ನಿಲ್ಲುವುದನ್ನು ನಿಷೇಧಿಸಲಾಗಿದೆ.
ಪ್ರವಾಸಿಗರು ಬ್ಯಾರಿಕೇಡ್ ಹಿಂದೆ ಇರುವ ಹಸಿರು ವಲಯದಲ್ಲಿ ಮಾತ್ರ ಇರಬೇಕು.
ಯಾವುದೇ ಸಾರ್ವಜನಿಕರು ಕೆಂಪು ವಲಯದಲ್ಲಿ ಅಥವಾ ಕೇಸರಿ ನಿಯಂತ್ರಿತ ವಲಯದಲ್ಲಿ ತೆರಳುವಂತಿಲ್ಲ.
ಪ್ರವಾಸಿಗರು ಮತ್ತು ಸಾಕಾನೆಗಳ ಅಂತರ ಕಾಯ್ದುಕೊಳ್ಳುವುದು ಅಂದರೆ ೧೦ ಮೀಟರ್ ಅಂತರವನ್ನು ಆದ್ಯತೆಗೆ ಅನುಸಾರವಾಗಿ ಕಡ್ಡಾಯವಾಗಿ ಪಾಲಿಸುವುದು. ಶಿಬಿರದಲ್ಲಿ ಸಾರ್ವಜನಿಕ ವೀಕ್ಷಣೆಗಾಗಿ ಹತ್ತಕ್ಕಿಂತ ಹೆಚ್ಚು ಆನೆಗಳನ್ನು ನಿಯೋಜಿಸಬಾರದು. ಮದ ಲಕ್ಷಣ ಕಂಡು ಬಂದಿರುವ ಆಕ್ರಮಣಕಾರಿ ಗಾಯಗೊಂಡ ಅನಾರೋಗ್ಯದ ಒತ್ತಡಕ್ಕೆ ಒಳಗಾದ ಅಥವಾ ಹೊಸದಾಗಿ ಸೆರೆಹಿಡಿಯಲಾದ ಅಥವಾ ಆರು ತಿಂಗಳ ಒಳಗಿನ ಮರಿಯನ್ನು ಹೊಂದಿರುವ ತಾಯಿ ಸಾಕಾನೆಯನ್ನು ಸಾರ್ವಜನಿಕರ ವೀಕ್ಷಣೆಗೆ ಒಳಪಡಿಸಬಾರದು.
ಸಾರ್ವಜನಿಕರ ವೀಕ್ಷಣೆ ಸಂದರ್ಭ ಆನೆಗಳು ಪರಸ್ಪರ ತಳ್ಳುವಂತಹ ಸ್ಥಿತಿಯಲ್ಲಿ ಇರಿಸಬಾರದು.
ಸ್ನಾನ ಮಾಡಿಸುವುದು ಹೆಚ್ಚಿನ ಅಪಾಯದ ಕಾರ್ಯಾಚರಣೆಯ ಚಟುವಟಿಕೆಯಾಗಿದ್ದು ಪ್ರವಾಸಿಗರು ಯಾವುದೇ ಸಂದರ್ಭ ನದಿಗೆ ಅಥವಾ ಸ್ನಾನದ ವಲಯಕ್ಕೆ ಪ್ರವೇಶಿಸಬಾರದು. ಶಿಬಿರದಲ್ಲಿ ಸಿಸಿಟಿವಿ ಮೇಲ್ವಿಚಾರಣೆ ಕಡ್ಡಾಯವಾಗಿರಬೇಕು ಹಾಗೂ ಶಿಬಿರದ ಕಂಟ್ರೋಲ್ ರೂಮ್ ಮತ್ತು ಮೇಲ್ವಿಚಾರಣೆ ಕೇಂದ್ರಕ್ಕೆ ಸಂಪರ್ಕ ಕಲ್ಪಿಸಬೇಕು. ದಿನನಿತ್ಯದ ಕಾರ್ಯನಿರ್ವಹಣಾ ತಪಾಸಣೆ ಮತ್ತು ಘಟನೆಯ ದೃಶ್ಯಾವಳಿಗಳನ್ನು ಸಂರಕ್ಷಿಸುವುದು ಕಡ್ಡಾಯವಾಗಿದೆ.
ಆನೆಯ ನಡವಳಿಕೆ ಜನಸಂದಣಿ ನಿಯಂತ್ರಣ ಸಿಬ್ಬಂದಿಯ ಲಭ್ಯತೆ, ನದಿಯ ವ್ಯಾಪ್ತಿಯಲ್ಲಿ ಸುರಕ್ಷತೆ ತಡೆ ಬೇಲಿ ಹಾಗೂ ತುರ್ತು ಮಾರ್ಗದ ಬಗ್ಗೆ ನಿಗಾ ವಹಿಸುವುದು ಮತ್ತು ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕ ಚಟುವಟಿಕೆಯನ್ನು ತಕ್ಷಣವೇ ನಿರ್ಬಂಧಿಸುವ ಕಾರ್ಯ ಕೈಗೊಳ್ಳುವುದು.
ಶಿಬಿರದಲ್ಲಿ ಕೆಂಪು, ಕೇಸರಿ ಮತ್ತು ಹಸಿರು ವಲಯಗಳು ವಿಂಗಡಿಸುವ ಮೂಲಕ ವಲಯದ ಉದ್ದೇಶ ಮತ್ತು ಇದರ ಅನ್ವಯ ಕೆಂಪು ವಲಯ ಆನೆ ಕಾರ್ಯಾಚರಣೆ ವ್ಯಾಪ್ತಿಯಲ್ಲಿ ಮಾವುತರು ಕಾವಡಿಗಳು ಪಶು ವೈದ್ಯರು ಮತ್ತು ಅಧಿಕೃತ ಅರಣ್ಯ ಸಿಬ್ಬಂದಿಗಳು ಮಾತ್ರ ಪ್ರವೇಶಿಸಬಹುದು.
ಕೇಸರಿ ವಲಯ ನಿಯಂತ್ರಿತ ಪ್ರದೇಶದಲ್ಲಿ ಅಧಿಕೃತ ಸಿಬ್ಬಂದಿ ಮತ್ತು ತುರ್ತು ಪ್ರತಿಕ್ರಿಯೆ ಸಿಬ್ಬಂದಿಗಳು ಮಾತ್ರ ಸಾಗಬಹುದೇ ಹೊರತು ಸಾರ್ವಜನಿಕರ ಪ್ರವೇಶ ಸಂಪೂರ್ಣ ನಿಷೇಧವಾಗಿರುತ್ತದೆ.
ಹಸಿರು ವಲಯ ವೀಕ್ಷಣಾ ಪ್ರದೇಶದಲ್ಲಿ ನಿಯಂತ್ರಿತ ಪರಿಸರ ಪ್ರವಾಸೋದ್ಯಮ ಮತ್ತು ಸಂರಕ್ಷಣಾ ಶಿಕ್ಷಣದ ಭಾಗವಾಗಿ ಪ್ರವಾಸಿಗರು ಆನೆಗಳನ್ನು ವೀಕ್ಷಿಸುವ ಏಕೈಕ ಸ್ಥಳಗಳಾಗಿದ್ದು ಪ್ರವಾಸಿಗರು ಬ್ಯಾರಿಕೇಡ್ ಹಿಂದೆ ಇರಬೇಕು. ಆನೆಗಳನ್ನು ಮುಟ್ಟಲು ಅಥವಾ ಯಾವುದೇ ರೀತಿಯ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ.
ಸಿಸಿಟಿವಿ ಕಂಟ್ರೋಲ್ ರೂಂ ಮತ್ತು ಮೇಲುಸ್ತುವಾರಿ ವ್ಯವಸ್ಥೆ ಹೊಂದಿರಬೇಕು. ಪ್ರವೇ± ದ್ವಾರ ಟಿಕೆಟ್ ಮತ್ತು ಸೂಚನಾ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸುವುದು ಮತ್ತು ಈ ಬಗ್ಗೆ ಮೇಲ್ವಿಚಾರಣೆ ವ್ಯವಸ್ಥೆಗೆ ಕೇಂದ್ರ ಒಂದನ್ನು ಸ್ಥಾಪಿಸಬೇಕು.
ಶಿಬಿರದ ಜವಾಬ್ದಾರಿಯನ್ನು ಅರಣ್ಯ ಇಲಾಖೆಯ ಮುಖ್ಯಸ್ಥರು ಸೇರಿದಂತೆ ಹಂತಹAತಗಳಾಗಿ ಅಧಿಕಾರಿಗಳಿಗೆ ನೀಡಲಾಗಿದ್ದು ಆನೆಗಳ ಆರೋಗ್ಯ ಬಗ್ಗೆ ಪಶು ವೈದ್ಯಾಧಿಕಾರಿಗಳಿಗೆ ಕೂಡ ಜವಾಬ್ದಾರಿ ವಹಿಸಲಾಗಿದೆ. ಮಾವುತ, ಕಾವಾಡಿ ಅವರುಗಳಿಗೆ ಆನೆಗಳ ವರ್ತನೆ ಆದೇಶ ನಿಯಂತ್ರಣ ಕಾಪಾಡುವುದು ವ್ಯತಿರಿಕ್ತ ಲಕ್ಷಣಗಳನ್ನು ವರದಿ ಮಾಡುವುದು ಹಾಗೂ ಅಪಾಯಕಾರಿ ಆಗಬಹುದಾದ ಸಾರ್ವಜನಿಕ ಪ್ರದರ್ಶನವನ್ನು ನಿಲ್ಲಿಸುವುದು ಅವರುಗಳ ಜವಾಬ್ದಾರಿ ಎಂದು ಸೂಚಿಸಲಾಗಿದೆ.
ಸಾಕಾನೆ ಶಿಬಿರಗಳ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಮೊದಲು ಪ್ರತಿಯೊಂದು ಶಿಬಿರವು ಬ್ಯಾರಿಕೇಡ್ಗಳು, ಹಗ್ಗ, ಬಣ್ಣದ ರೇಖೆಗಳು, ಸೂಚನಾ ಫಲಕಗಳನ್ನು ಅಳವಡಿಸುವುದು. ಆನೆ ಕಾರ್ಯಾಚರಣೆ ಪ್ರದೇಶ ನಿಯಂತ್ರಿತ ಸಿಬ್ಬಂದಿ ಪ್ರದೇಶ ಸಾರ್ವಜನಿಕರ ವೀಕ್ಷಣಾ ಪ್ರದೇಶ ಎಲ್ಲಾ ರೀತಿಯಲ್ಲಿ ಶಾಶ್ವತ ವಲಯ ನಕ್ಷೆ ಗುರುತಿಸುವುದು ಮತ್ತು ಬ್ಯಾರಿಕೇಡ್ ಗಳ ಬಲಿಷ್ಠತೆ ಮತ್ತಿತರ ವಿಷಯಗಳ ಪರಿಶೀಲನೆ ಪ್ರಮುಖ ಸ್ಥಳಗಳಲ್ಲಿ ಸಿಸಿ ಟಿವಿ ಅಳವಡಿಸಬೇಕಾದ ಕೇಂದ್ರಗಳ ಗುರುತು ಸಿಬ್ಬಂದಿ ಮೇಲ್ವಿಚಾರಣೆ ಹಾಗೂ ಪ್ರವಾಸಿಗರ ಸಮಗ್ರ ಮಾಹಿತಿ ಬಗ್ಗೆ ಜವಾಬ್ದಾರಿಯನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೇರಿದಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ವಲಯ ಅರಣ್ಯಾಧಿಕಾರಿಗಳ ತನಕ ನಿಗದಿಪಡಿಸಲಾಗಿದೆ.
ದಿನನಿತ್ಯದ ಶಿಬಿರದ ಕಾರ್ಯವಿಧಾನ ಪರಿಶೀಲನಾ ಪಟ್ಟಿ ದೃಢೀಕರಣ ಆಗುವ ತನಕ ಯಾವುದೇ ಸಾರ್ವಜನಿಕರಿಗೆ ಅಥವಾ ಪ್ರವಾಸಿಗರಿಗೆ ಶಿಬಿರಕ್ಕೆ ಪ್ರವೇಶ ನೀಡಬಾರದು, ಮಳೆ ನದಿಯ ನೀರಿನ ಮಟ್ಟದ ಬದಲಾವಣೆ ಆನೆಗಳ ಚಲನ ವಲನ ಜನಸಂದಣಿ ಹೆಚ್ಚಳ ಸಿಸಿಟಿವಿ ವೈಫಲ್ಯ, ಬ್ಯಾರಿಕೇಡ್ ಸಮಸ್ಯೆ ಸಿಬ್ಬಂದಿ ಕೊರತೆ ಉಂಟಾದ ಸಂದರ್ಭದಲ್ಲಿ ಪರಿಶೀಲನೆ ನಡೆಸಿ ನಂತರ ಪ್ರವಾಸಿಗರಿಗೆ ಶಿಬಿರಕ್ಕೆ ಭೇಟಿಗೆ ಅನುಮತಿ ನೀಡಬೇಕಾಗಿದೆ.
ಆನೆಗಳ ವರ್ತನೆಯ ಬಣ್ಣಗಳ ವರ್ಗಿಕರಣ ದಿನನಿತ್ಯ ನಿರ್ಧಾರ ಕೈಗೊಳ್ಳುವ ಪ್ರಮುಖ ಕಾರ್ಯವಾಗಿದ್ದು ಈ ಸಂದರ್ಭ ಸಾರ್ವಜನಿಕ ಪ್ರದರ್ಶನಕ್ಕೆ ಅವಕಾಶ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ.
ಸಾರ್ವಜನಿಕ ಪ್ರವೇಶ ಪ್ರವಾಸಿಗರ ಸಂಚಲನ ಮತ್ತು ಸಮಯ ಸ್ಲಾಟ್ ವ್ಯವಸ್ಥೆ ಕಡ್ಡಾಯವಾಗಿದ್ದು, ಪ್ರತಿಯೊಂದು ಪ್ರವಾಸಿಗರ ಗುಂಪು ಸಂಬAಧಪಟ್ಟ ವಲಯವನ್ನು ಪ್ರವೇಶಿಸಿ ಸುರಕ್ಷತಾ ಸೂಚನೆಗಳನ್ನು ಪಡೆದು ಅನುಮೋದಿತ ಹಸಿರು ವಲಯ ಮಾರ್ಗದ ಮೂಲಕ ಚಲಿಸಿ ನಿಗದಿತ ಸ್ಥಳದಿಂದ ಆನೆಗಳನ್ನು ವೀಕ್ಷಿಸಿ, ನಂತರವಷ್ಟೇ ಮುಂದಿನ ಗುಂಪು ಒಳಬರುವುದು. ಯಾವುದೇ ಪ್ರವಾಸಿಗರು ಆನೆ ಚಟುವಟಿಕೆ ಪ್ರದೇಶಗಳ ಸಮೀಪ ಹೆಚ್ಚಿನ ಸಮಯ ಉಳಿಯಲು ಅವಕಾಶ ಇರುವುದಿಲ್ಲ.
ಪ್ರವಾಸಿಗರ ನಿಯಮ ಉಲ್ಲಂಘನೆಗೆ ಒಂದು ಬಾರಿ ಎಚ್ಚರಿಕೆ ನೀಡಬಹುದು. ಆದರೆ ಬ್ಯಾರಿಕೇಡ್ ದಾಟುವುದು ಆನೆಗಳನ್ನು ಕಿರಿಕಿರಿಗೊಳಿಸುವುದು ಆನೆಗಳ ಸಮೀಪ ಸೆಲ್ಫಿ ತೆಗೆದುಕೊಳ್ಳುವುದು, ಡ್ರೋನ್ ಬಳಕೆ ಅಥವಾ ನಿಯಮಗಳ ಗಂಭೀರ ಉಲ್ಲಂಘನೆ ಕಂಡುಬAದರೆ ತಕ್ಷಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ವಾರದಲ್ಲಿ ಒಂದು ದಿನ ಸಾಧ್ಯವಾದರೆ ಮಂಗಳವಾರ ಶಿಬಿರವನ್ನು ಭೇಟಿದಾರರಿಗೆ ಮುಚ್ಚಲು ಸೂಚನೆ ನೀಡಲಾಗಿದೆ
ಪ್ರವಾಸಿಗರ ಭೇಟಿಯ ಉದ್ದೇಶ ಗುಂಪಿನ ಸದಸ್ಯರ ಸಂಖ್ಯೆ ವೀಕ್ಷಣಾ ಪ್ರದೇಶದಲ್ಲಿ ಮತ್ತು ದಿನನಿತ್ಯದ ಪ್ರವಾಸಿಗರ ಸಂಖ್ಯೆಯ ಮಿತಿ, ಮಕ್ಕಳು ಹಾಗೂ ವಿಶೇಷ ಗಮನ ಅಗತ್ಯ ಇರುವ ಪ್ರವಾಸಿಗರು ಭೇಟಿ ನೀಡಿದಾಗ ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸುವಂತೆ ಸೂಚಿಸಿದ್ದಾರೆ.
ಸಾರ್ವಜನಿಕ ಪ್ರವೇಶ ಸುರಕ್ಷಿತವಾಗಿ ಆನೆಗಳ ವೀಕ್ಷಣೆಗಾಗಿ ವಿನ್ಯಾಸಗೊಳಿಸಬೇಕು. ಮಾವುತ ಕಾವಾಡಿ ಅಥವಾ ಅಧಿಕಾರಿಗಳು ಅಗತ್ಯವಿದ್ದಲ್ಲಿ ಪಶು ವೈದ್ಯಕೀಯ ಅಧಿಕಾರಿಗಳು ಪರಿಶೀಲನೆ ನಡೆಸಿದ ನಂತರವಷ್ಟೇ ಆನೆಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಬಹುದು.
ಆನೆಗಳ ಸಮೀಪ ತೆರಳುವುದು, ಆನೆಗಳ ಹಿಂದೆ ಮುಂದೆ ಓಡಾಟ ಆನೆಗಳ ಬಳಿ ಕೂಗುವುದು, ಚಪ್ಪಾಳೆ ತಟ್ಟುವುದು, ಕಿರಿಕಿರಿಗೊಳಿಸುವುದು, ವಸ್ತುಗಳನ್ನು ಎಸೆಯುವುದು, ಜೋರಾಗಿ ಶಬ್ದ ಮಾಡುವುದನ್ನು ನಿಷೇಧಿಸಲಾಗಿದೆ.
ಯಾವುದೇ ಸಂದರ್ಭ ಲಿಖಿತ ಅನುಮತಿ ಅಥವಾ ಸುರಕ್ಷಿತ ಕಾರ್ಯಾಚರಣೆ ಅನುಮೋದನೆ ಇಲ್ಲದೆ ಡ್ರೋನ್ ಬಳಸುವಂತಿಲ್ಲ ಆಹಾರ ನೀಡುವ ಪ್ರದೇಶ ಕಟ್ಟಿ ಹಾಕುವ ಪ್ರದೇಶ ಮತ್ತಿತರ ಆನೆಗಳ ಚಲನ ಮಾರ್ಗಗಳಿಗೆ ಸಾರ್ವಜನಿಕರು ಪ್ರವೇಶಿಸುವಂತಿಲ್ಲ. ಚಿಕ್ಕ ಮಕ್ಕಳನ್ನು ವೀಕ್ಷಣಾ ಬ್ಯಾರಿಕೇಡ್ ಸಮೀಪ ಸ್ವತಂತ್ರವಾಗಿ ಸಂಚರಿಸಲು ಬಿಡುವಂತಿಲ್ಲ.
ಹೊರಗಿನ ಆಹಾರ ತರುವುದು ಅಥವಾ ಆನೆಗಳಿಗೆ ಅಶಾಂತಿ ಉಂಟು ಮಾಡುವ ಯಾವುದೇ ವಸ್ತುಗಳನ್ನು ಶಿಬಿರಕ್ಕೆ ತರುವಂತಿಲ್ಲ.
ಆನೆಗಳ ಚಟುವಟಿಕೆ ಆಧಾರಿತ ಸುರಕ್ಷತಾ ನಿಯಮಾವಳಿ ರಚಿಸಲಾಗಿದ್ದು ಅದಕ್ಕೆ ಅಗತ್ಯವಿರುವ ವಿಧಾನಗಳನ್ನು ಮತ್ತು ಕಟ್ಟುನಿಟ್ಟಿನ ನಿಷೇಧ ನಿಯಂತ್ರಣವನ್ನು ಈ ನಿಯಮಾವಳಿಯಲ್ಲಿ ಸೂಚಿಸಲಾಗಿದೆ.
ಆನೆ ಶಿಬಿರಗಳ ಸುರಕ್ಷಿತ ಕಾರ್ಯಾಚರಣೆ ಖಚಿತಪಡಿಸಿಕೊಳ್ಳಲು ಸಿಬ್ಬಂದಿಗಳ ನಿಯೋಜನೆ ಮಾನದಂಡಗಳನ್ನು ಪಾಲಿಸಬೇಕಾಗಿದ್ದು, ಆನೆ ನಿರ್ವಹಣೆ ಜನಸಂದಣಿ ನಿಯಂತ್ರಣ ಪ್ರವಾಸಿಗರ ಮಾರ್ಗದರ್ಶನ ಪ್ರವೇಶ ಮತ್ತು ಟಿಕೆಟ್ ನಿಯಂತ್ರಣ ತುರ್ತು ಪ್ರತಿಕ್ರಿಯೆ ವಿಭಾಗ ನದಿ ಸುರಕ್ಷತೆ ವಾಹನ ನಿಲುಗಡೆ ಮತ್ತು ಸಂಚಾರ ಹಾಗೂ ಪ್ರವಾಸಿಗರ ಮೇಲೆ ಕಾರ್ಯಾಚರಣೆ ನಿಯೋಜಿಸಲು ಅಗತ್ಯ ಸಿಬ್ಬಂದಿಗಳನ್ನು ನೇಮಿಸುವ ಮಾನದಂಡವನ್ನು ಕೂಡ ಎಸ್ಓಪಿಯಲ್ಲಿ ನೀಡಲಾಗಿದೆ.
ಯಾವುದೇ ಸಂದರ್ಭ ಆನೆಗಳನ್ನು ನಿಯಂತ್ರಿಸುವ ವೇಳೆ ಮಾವುತರು ಹಾಗೂ ಕಾವಾಡಿಗಳನ್ನು ಜನಸಂದಣಿ ನಿಯಂತ್ರಣ ಸಿಬ್ಬಂದಿಯಾಗಿ ಬಳಸಬಾರದು ಆನೆಗಳ ನಿಯಂತ್ರಣ ಮತ್ತು ಸುರಕ್ಷತೆ ಕಾರ್ಯ ಮಾತ್ರ ಅವರ ಮೊದಲ ಮತ್ತು ಪ್ರಮುಖ ಕರ್ತವ್ಯ ಆಗಬೇಕಿದೆ.
ಶಿಬಿರದಲ್ಲಿ ತುರ್ತು ಪ್ರತಿಕ್ರಿಯೆಗಾಗಿ ಅಧಿಕಾರಿ ಸಿಬ್ಬಂದಿಗಳು ಪೊಲೀಸ್ ಮತ್ತು ಆ್ಯಂಬ್ಯುಲೆನ್ಸ್ ವ್ಯವಸ್ಥೆಗೆ ತಯಾರಿ ಕಲ್ಪಿಸಿಕೊಳ್ಳಬೇಕು.
ಜನರಲ್ಲಿ ಆತಂಕ ಉಂಟಾಗದAತೆ ಸಾರ್ವಜನಿಕ ಘೋಷಣಾ ವ್ಯವಸ್ಥೆ ನಿಯಂತ್ರಣ ಕೊಠಡಿ ಇರಬೇಕು. ಯಾವುದೇ ಸಮಸ್ಯೆಗಳಾದಲ್ಲಿ ತಕ್ಷಣ ಪ್ರಾಥಮಿಕ ವರದಿಯನ್ನು ಸಂಬAಧಿಸಿದ ಅಧಿಕಾರಿಗಳಿಗೆ ಸಲ್ಲಿಸಬೇಕು.
ಆನೆ ಶಿಬಿರದ ಹೊರಭಾಗದಲ್ಲಿ ಸಾರ್ವಜನಿಕವಾಗಿ ಘೋಷಣಾ ಫಲಕಗಳನ್ನು ಅಳವಡಿಸುವುದು ಮತ್ತು ಆನೆಗಳ ಬಗ್ಗೆ ಸಮಗ್ರ ಮಾಹಿತಿಗಳನ್ನು ಒದಗಿಸುವುದು ಮತ್ತು ಶಿಬಿರದ ಚಟುವಟಿಕೆಗಳನ್ನು ಪ್ರವಾಸಿಗರಿಗೆ ಸಮಗ್ರ ಮಾಹಿತಿಯ ಫಲಕಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕಾಗಿದೆ.
ಶಿಬಿರದಲ್ಲಿ ಆನೆಗಳ ನಡುವೆ ಮಾವುತರು ಕನಿಷ್ಟ ೧೫ ಅಡಿ ಅಂತರವನ್ನು ಕಾಯ್ದುಕೊಳ್ಳುವುದು, ಆನೆಗಳನ್ನು ನಿಯಂತ್ರಿಸಲು ಮಾವುತರಿಗೆ ಎಲ್ಲಾ ಅಗತ್ಯ ಸಾಮಗ್ರಿಗಳನ್ನು ಒದಗಿಸುವುದು, ಆತಂಕಗೊAಡು ಅಥವಾ ಹೆದರಿದ ಆನೆಯನ್ನು ನಿಯಂತ್ರಿಸಲು ಅಗತ್ಯ ಕ್ರಮಕೈಗೊಳ್ಳುವುದು, ಶಿಬಿರದಲ್ಲಿ ಸಿಬ್ಬಂದಿಗಳಿಗೆ ಪ್ರಥಮ ಚಿಕಿತ್ಸೆ ನೀಡುವ ತರಬೇತಿಯನ್ನು ನೀಡುವುದು, ಆನೆಗಳ ಹತ್ತಿರ ಹೋಗುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡುವುದು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಸಮವಸ್ತç ಮತ್ತು ಗುರುತಿನ ಚೀಟಿಗಳನ್ನು ಹಾಕಿಕೊಳ್ಳುವುದು.
ಈ ಎಲ್ಲಾ ಚಟುವಟಿಕೆಗಳ ಬಗ್ಗೆ ಆನೆ ಶಿಬಿರಗಳ ಉಸ್ತುವಾರಿ ಹೊಂದಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಇತರ ಅಧಿಕಾರಿಗಳಿಗೆ ಸಮಗ್ರ ಸುರಕ್ಷತಾ ವಿಧಾನಗಳನ್ನು ಒಳಗೊಂಡ ಮಾಹಿತಿಯನ್ನು ಮುಖ್ಯ ವನ್ಯಜೀವಿ ಪರಿಪಾಲಕರ ಕಚೇರಿಯಿಂದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ಅವರು ಎಸ್ಓಪಿಯಲ್ಲಿ ಸಮಗ್ರ ಸೂಚನೆಗಳನ್ನು ನೀಡಿದ್ದು ಪ್ರಸಕ್ತ ಕೊಡಗು ಜಿಲ್ಲೆಯಲ್ಲಿ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಅಭಿಷೇಕ್ ಉಸ್ತುವಾರಿಯಲ್ಲಿ ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳು ನಡೆಯುತ್ತಿವೆ.
ಕುಶಾಲನಗರ ವ್ಯಾಪ್ತಿಯಲ್ಲಿ ದುಬಾರೆ ಮತ್ತು ಹಾರಂಗಿ ಬಳಿ ೨ ಸಾಕಾನೆ ಶಿಬಿರಗಳು ಕಾರ್ಯನಿರ್ವಹಿಸುತ್ತಿದ್ದು, ಕಳೆದ ನಾಲ್ಕು ತಿಂಗಳಿನಿAದ ಪ್ರವಾಸಿಗರಿಗೆ ಆನೆ ಶಿಬಿರಕ್ಕೆ ಭೇಟಿಗೆ ನಿರ್ಬಂಧ ಹೇರಲಾಗಿದೆ.
ಕರ್ನಾಟಕ ಸಾಕಾನೆ ಶಿಬಿರದ ಸುರಕ್ಷತಾ ವಿಧಾನಗಳ ಕೆಲಸ ಕಾರ್ಯಗಳು ಆರಂಭಗೊAಡಿದ್ದು, ಸದ್ಯದಲ್ಲಿಯೇ ಸಾರ್ವಜನಿಕ ಪ್ರವೇಶಕ್ಕಾಗಿ ಅನುಮತಿ ಲಭ್ಯವಾಗಲಿದೆ ಎಂದು ಕೊಡಗು ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಣಿ ‘ಶಕ್ತಿ’ಗೆ ತಿಳಿಸಿದ್ದಾರೆ.