ವೀರಾಜಪೇಟೆ, ಆ. ೨೧: ಸೇವೆ ಎಂಬುದು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವಂತಹದ್ದು. ನಿಸ್ವಾರ್ಥ ಸೇವೆಯು ಸದಾ ಜನ ಮಾನಸದಲ್ಲಿ ಉಳಿಯುತ್ತದೆ ಎಂದು ಉದ್ಯಮಿಗಳು ಹಾಗೂ ಕಿಂಗ್ಸ್ ಕನ್ಸ್ಟ್ರಕ್ಷನ್‌ನ ಮಾಲೀಕರಾದ ಆಂಟೊನಿ ರಾಬಿನ್ ರವರು ಅಭಿಪ್ರಾಯಪಟ್ಟರು. ಅವರು ವೀರಾಜಪೇಟೆ ಪಟ್ಟಣದ ಸೆಂಟ್ ಆ್ಯನ್ಸ್ ಪದವಿ ಕಾಲೇಜಿನ ಎನ್ ಎಸ್ ಎಸ್ ಘಟಕ , ಯುವ ರೆಡ್‌ಕ್ರಾಸ್ ಘಟಕಗಳ ಉದ್ಘಾಟನಾ ಸಮಾರಂಭ ಹಾಗೂ ಘಟಕಗಳ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ನಾಯಕತ್ವವನ್ನು ಅಳವಡಿಸಿಕೊಂಡಲ್ಲಿ ಮಾದರಿ ಪ್ರಜೆಗಳಾಗಿ ಬಾಳಲು ಸಾಧ್ಯ. ಗುಂಪು ಕಾರ್ಯವು ಪ್ರಮುಖವಾಗಿದ್ದು ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಿದ್ದಲ್ಲಿ ಯಶಸ್ಸು ಸಾಧ್ಯ ಎಂದರು. ಸೇವಾ ಮನೋಭಾವನೆಯನ್ನು ಮೂಡಿಸಿಕೊಂಡು ಸಮಾಜಕ್ಕೆ ಹಾಗೂ ರಾಷ್ಟçಕ್ಕೆ ಸೇವೆಯನ್ನು ಸಲ್ಲಿಸಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಸೆಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕ ರೆ.ಫಾ. ಮದಲೈಮುತ್ತು ಅವರು ಮಾತನಾಡಿ, ಸೇವೆ ಎಂಬುದು ಪ್ರತಿಯೊಬ್ಬರಲ್ಲಿಯೂ ಇರಬೇಕಾದಂತಹದ್ದು. ಸೇವೆಯಿಂದ ಆತ್ಮತೃಪ್ತಿಯು ದೊರಕುತ್ತದೆ. ನಿಸ್ವಾರ್ಥವಾದ ಸೇವೆಯು ಜನಮಾನಸದಲ್ಲಿ ಉಳಿಯುವುದು ಮಾತ್ರವಲ್ಲದೆ ಎಂದಿಗೂ ಅವಿಸ್ಮರಣೀಯವಾಗಿರುತ್ತದೆ ಎಂದರು.
ಕಾಲೇಜಿನ ಐಕ್ಯುಎಸಿ ಸಂಚಾಲಕಿ ಹೇಮ ಬಿ. ಡಿ. ಮಾತನಾಡಿ, ಎನ್.ಎಸ್.ಎಸ್ ಹಾಗೂ ಯುವ ರೆಡ್‌ಕ್ರಾಸ್ ಘಟಕಗಳು ನಮ್ಮ ಕಾಲೇಜಿನ ಪ್ರಮುಖ ಘಟಕಗಳಾಗಿದ್ದು ಅನೇಕ ಸಮಾಜಮುಖಿ ಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ. ವಿದ್ಯಾರ್ಥಿಗಳು ಅತಿ ಉತ್ಸಾಹದಿಂದ ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದು ಸಮಾಜಕ್ಕೆ ಮತ್ತಷ್ಟು ಸೇವೆ ವಿದ್ಯಾರ್ಥಿಗಳಿಂದ ದೊರಕಲಿ ಎಂದು ಹೇಳಿದರು. ಎನ್.ಎಸ್.ಎಸ್ ಹಾಗೂ ಯುವ ರೆಡ್‌ಕ್ರಾಸ್ ಘಟಕಗಳ ನೂತನ ನಾಯಕರುಗಳಿಗೆ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲರು, ಸೇವೆ ಎಂಬುವುದು ನಿರಂತರ ಪ್ರಕ್ರಿಯೆ. ಒಬ್ಬ ವ್ಯಕ್ತಿಯು ಸ್ವಯಂ ಪ್ರೇರಿತವಾಗಿ ಮಾಡುವ ಸೇವೆ ಮಹತ್ವದ್ದಾಗಿದೆ. ಎನ್.ಎಸ್.ಎಸ್. ಹಾಗೂ ಯುವರೆಡ್ ಕ್ರಾಸ್ ಘಟಕಗಳ ಸ್ವಯಂ ಸೇವಕರು ಅವಿಸ್ಮರಣೀಯ ಸೇವೆಯನ್ನು ಸಲ್ಲಿಸಿರುತ್ತಾರೆ. ತಾನು ಸೇವೆ ಸಲ್ಲಿಸುವುದರಿಂದ ಪರರಿಗೆ ಮಾದರಿಯಾಗುತ್ತದೆ. ಸ್ವಯಂಸೇವಕರು ಸಮಾಜದಲ್ಲಿ ಸೇವೆಯ ಮಹತ್ವವನ್ನು ಸಾರಿ ಎಂದು ಕರೆ ನೀಡಿದರು. ಕಾಲೇಜಿನ ಎನ್.ಎಸ್.ಎಸ್ ಘಟಕದ ಅಧಿಕಾರಿಗಳಾದ ಬಿ. ಎನ್. ಶಾಂತಿಭೂಷಣ್ ಅವರು ಪ್ರಾಸ್ತಾವಿಕ ನುಡಿಯಲ್ಲಿ ಈ ಶೈಕ್ಷಣಿಕ ಸಾಲಿನಲ್ಲಿ ಘಟಕದ ವತಿಯಿಂದ ಆಯೋಜಿಸಲಾಗುವಂತಹ ಕಾರ್ಯಕ್ರಮಗಳ ಕ್ರಿಯಾಯೋಜನೆಗಳ ಕುರಿತಾಗಿ ಮಾತನಾಡಿದರು.
ಕಳೆದ ಶೈಕ್ಷಣಿಕ ಸಾಲಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಗಳ ಕುರಿತು ವಿವರವನ್ನು ನೀಡಿದರು. ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾಗವಹಿಸಿದ್ದ ಸ್ವಯಂ ಸೇವಕರಿಗೆ ಅತಿಥಿಗಳು ಪ್ರಮಾಣ ಪತ್ರವನ್ನು ವಿತರಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ಸಂಚಾಲಕರಾದ ವಿಲೀನ ಗೋನ್ಸಾಲ್ವೆಸ್ ಅವರು ಹಾಜರಿದ್ದರು. ಎನ್.ಎಸ್.ಎಸ್ ಘಟಕದ ನಾಯಕ ಮುತ್ತಪ್ಪ ಸ್ವಾಗತಿಸಿ, ವಿದ್ಯಾರ್ಥಿನಿ ಅಮೃತ ರಾವ್ ನಿರೂಪಿಸಿ, ವಿದ್ಯಾರ್ಥಿನಿ ಅವಲಿನ್ ಸಾಲ್ಡಾನ ವಂದಿಸಿದರು. ಈ ಸಂದರ್ಭದಲ್ಲಿ ಪದವಿ ಕಾಲೇಜಿನ ಉಪನ್ಯಾಸಕರುಗಳು, ಎನ್.ಎಸ್.ಎಸ್ ಹಾಗೂ ಯುವ ರೆಡ್‌ಕ್ರಾಸ್ ಘಟಕದ ನಾಯಕರುಗಳು, ಹಾಗೂ ಉಭಯ ಘಟಕಗಳ ಸ್ವಯಂ ಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.