ವೀರಾಜಪೇಟೆ ತಾಲೂಕಿನ ಅರಸುನಗರದಲ್ಲಿ ಶ್ರೀ ವಿಘ್ನೇಶ್ವರ ಸೇವಾ ಸಮಿತಿ ವತಿಯಿಂದ ಆಯೋಜಿಸಲಾಗುವ ಗೌರಿ ಗಣೇಶೋತ್ಸವವು ಈ ಬಾರಿ ೪೭ನೇ ವರ್ಷದ ಸಂಭ್ರಮಕ್ಕೆ ಕಾಲಿಟ್ಟಿದೆ. ಪ್ರತಿ ವರ್ಷವೂ ತನ್ನ ವಿಶಿಷ್ಟ ಆಕರ್ಷಣೆ ಹಾಗೂ ಸೃಜನಶೀಲ ವಿನ್ಯಾಸಗಳಿಂದ ಗಮನಸೆಳೆಯುವ ಈ ಉತ್ಸವವು, ಸಾರ್ವಜನಿಕರಲ್ಲಿ ಈ ಬಾರಿಯೂ ತೀವ್ರ ಕುತೂಹಲ ಮೂಡಿಸಿದೆ.
ಒಟ್ಟು ೬೮ ಸದಸ್ಯ ಬಲವನ್ನು ಹೊಂದಿರುವ ಶ್ರೀ ವಿಘ್ನೇಶ್ವರ ಸೇವಾ ಸಮಿತಿ, ಸರ್ವ ಜನಾಂಗದವರು ಹಾಗೂ ಎಲ್ಲಾ ವಯೋಮಾನದವರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಈ ಉತ್ಸವವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.
ಪ್ರಸ್ತುತ ಮಣಿ ಅವರ ಅಧ್ಯಕ್ಷತೆಯಲ್ಲಿ ಹಿರಿಯರು ಮತ್ತು ಯುವಕರ ತಂಡ ಕಾರ್ಯನಿರ್ವಹಿಸುತ್ತಿದೆ.
ಅರಸುನಗರದಲ್ಲಿ ಶ್ರೀ ವಿಘ್ನೇಶ್ವರ ಸಮಿತಿಯ ದಿವಂಗತ ಲಾರೆನ್ಸ್ ಅವರ ನೇತೃತ್ವದಲ್ಲಿ ಪ್ರಥಮ ಬಾರಿಗೆ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಅಂದು ಯೋಗೇಶ್, ಅರುಣ್, ಜೀವನ್, ಸೆಲ್ವ ಹಾಗೂ ಶಬೀರ್ ಸೇರಿದಂತೆ ವಿವಿಧ ಸಮುದಾಯದ ಬಂಧುಗಳು ಒಗ್ಗೂಡಿ ಈ ಧಾರ್ಮಿಕ ಆಚರಣೆಗೆ ಚಾಲನೆ ನೀಡಿದ್ದರು. ಇದೀಗ ಸದಾಶಿವ, ಪ್ರದೀಪ್ ಕೆ.ಡಿ, ಧರ್ಮೇಶ್, ದಿವಾಕರ್ ಹಾಗೂ ಜೋಸೆಫ್ ವಾಸ್ ಸೇರಿದಂತೆ ಹಲವು ಮುಖಂಡರು ಉತ್ಸವದ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ.
ಅರಸುನಗರ ಗಣೇಶೋತ್ಸವ ಆರಂಭವಾದ ವರ್ಷದಿಂದಲೂ ಅಂದಿನ ಪುರಸಭೆ ಅಧ್ಯಕ್ಷರಾಗಿದ್ದ ಹಿರಿಯ ವಕೀಲರಾದ ಎಂ.ಕೆ. ಪೂವಯ್ಯನವರು ಪೋಷಕರಾಗಿದ್ದು, ಇಂದಿಗೂ ಸತತವಾಗಿ ಸಮಿತಿಗೆ ಮಾರ್ಗದರ್ಶನ ಹಾಗೂ ಬೆಂಬಲ ನೀಡುತ್ತಾ ಬಂದಿದ್ದಾರೆ.
ಪ್ರತಿ ವರ್ಷವೂ ಸಮಾಜಮುಖಿ ಹಾಗೂ ಧಾರ್ಮಿಕ ಸಂದೇಶ ಸಾರುವ ಅಪರೂಪದ ಮಂಟಪ ಮತ್ತು ಟ್ಯಾಬ್ಲೋಗಳನ್ನು ನಿರ್ಮಿಸುವುದು ಈ ಸಮಿತಿಯ ಪ್ರಮುಖ ವೈಶಿಷ್ಟ ್ಯ,
ಸಾಲುಮರದ ತಿಮ್ಮಕ್ಕ ನೆನಪಿನಲ್ಲಿ ದಟ್ಟವಾದ ವೃಕ್ಷಗಳ ಮಧ್ಯೆ ಗಣಪತಿ ಪ್ರತಿಷ್ಠಾಪಿಸಿ ಪರಿಸರ ಜಾಗೃತಿ ಮೂಡಿಸಲಾಗಿತ್ತು. ಚರ್ಚ್, ಮಸೀದಿ ಮತ್ತು ಮಂದಿರಗಳ ಮಾದರಿಯೊಂದಿಗೆ ಧಾರ್ಮಿಕ ಭಾವೈಕ್ಯತೆ ಸಾರಲಾಗಿತ್ತು. ವೈಷ್ಣೋದೇವಿ ದೇವಾಲಯದ ಗುಹಾಂತರ ಕಲಾಕೃತಿ ಹಾಗೂ ಶೇಷನಾಗನ ಬೃಹತ್ ಹೆಡೆಯ ಒಳಗೆ ವಿಘ್ನನಿವಾರಕನನ್ನು ಕೂರಿಸುವ ಶೈಲಿ ಭಕ್ತಾದಿಗಳ ಮನಗೆದ್ದಿತ್ತು.
ಈ ಬಾರಿಯ ೪೭ನೇ ವರ್ಷದ ಆಚರಣೆಯಲ್ಲೂ ಮತ್ತೊಂದು ಅದ್ದೂರಿ ಹಾಗೂ ವಿಭಿನ್ನವಾದ ಕಲಾಕೃತಿ ಯನ್ನು ಸಿದ್ಧಪಡಿಸುವ ಯೋಜನೆಯಲ್ಲಿದೆ ಸಮಿತಿ.
ಭಕ್ತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಕುತೂಹಲ ಕಾಯ್ದುಕೊಳ್ಳುವ ಉದ್ದೇಶದಿಂದ ಈ ಬಾರಿಯ ಮಂಟಪದ ಕಲಾತ್ಮಕ ವಿವರಗಳನ್ನು ಸಮಿತಿಯು ಗೌಪ್ಯವಾಗಿರಿಸಿದೆ.
ಒಟ್ಟಾರೆಯಾಗಿ, ಸಾಂಸ್ಕöÈತಿಕ ಪರಂಪರೆ, ಕಲಾತ್ಮಕತೆ ಮತ್ತು ಕೋಮುಸೌಹಾರ್ದತೆಯ ಮಿಲನದೊಂದಿಗೆ ಅರಸುನಗರದಲ್ಲಿ ೪೭ನೇ ವರ್ಷದ ಗೌರಿ ಗಣೇಶೋತ್ಸವವು ಅದ್ದೂರಿಯಾಗಿ ನೆರವೇರಲು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
-ರಜಿತ ಕಾರ್ಯಪ್ಪ,
ವೀರಾಜಪೇಟೆ.
ಮೊ: ೯೪೮೧೭೭೧೮೫೧